ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲ ಎದುರಾಗಿದೆ. ಇದರ ನಡುವೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡಲು ಸೂಚಿಸುತ್ತಿದ್ದಂತೆ ರಾಜ್ಯದಲ್ಲಿ ಕಾವೇರಿಗಾಗಿ ಹೋರಾಟ ತೀವ್ರಗೊಂಡಿತ್ತು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಅ.03): ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲ ಎದುರಾಗಿದೆ. ಇದರ ನಡುವೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡಲು ಸೂಚಿಸುತ್ತಿದ್ದಂತೆ ರಾಜ್ಯದಲ್ಲಿ ಕಾವೇರಿಗಾಗಿ ಹೋರಾಟ ತೀವ್ರಗೊಂಡಿತ್ತು. ಇದೇ ರೀತಿ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯದ ರೈತರಿಗೆ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗುತ್ತದೆ ಎನ್ನುವ ಪರಿಸ್ಥಿತಿ ಎದುರಾಗಿತ್ತು. ನಿತ್ಯ ಮೂರು ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದ್ದರಿಂದ ಕೆಆರ್ಎಸ್ ಜಲಾಶಯ ಖಾಲಿಯಾಗುವ ಆತಂಕವಿತ್ತು. ಕೊಡಗಿನ ಏಕೈಕ ಜಲಾಶಯವಾದ ಹಾರಂಗಿಯಿಂದಲೂ ನಿತ್ಯ ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿತ್ತು.
ಕೇವಲ 6 ಟಿಎಂಸಿ ನೀರು ಇರುವ ಜಲಾಶಯದಿಂದ ನಿತ್ಯ ಅಷ್ಟು ಪ್ರಮಾಣದ ನೀರು ಹರಿಸುತ್ತಿದ್ದರಿಂದ ಇನ್ನೊಂದೆರಡು ತಿಂಗಳಲ್ಲೇ ಇಡೀ ಜಲಾಶಯವೇ ಖಾಲಿಯಾಗುವ ಆತಂಕವಿತ್ತು. ಹೀಗಾಗಿಯೇ ಕನ್ನಡ ನಾಡಿನ ಮಕ್ಕಳ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ಹೋರಾಟವನ್ನು ಕಾವೇರಿ ಮಾತೆಯೇ ಆಲಿಸಿದಳೋ ಏನೋ, ಇದೀಗ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಹೀಗಾಗಿ ಒಂದೆಡೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ತಳ ಸೇರಿ ಕಲ್ಲುಗಳ ಸಂದಿಯಲ್ಲಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಎರಡು ಮೀಟರ್ ಎತ್ತರಕ್ಕೆ ನೀರು ಹರಿಯುತ್ತಿದೆ.
ಜಾತಿ ಆಧಾರದಲ್ಲಿ ಸಿಎಂ ಮಾಡಲಾಗದು: ಸಚಿವ ಸತೀಶ ಜಾರಕಿಹೊಳಿ
ಅಂದರೆ ಮೈಸೂರಿನ ಕೆಆರ್ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇತ್ತ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲೂ ಉತ್ತಮ ಮಳೆ ಸುರಿಯುತ್ತಿರುವುದರಿಂದ ಹಾರಂಗಿ ಜಲಾಶಯದ ಒಳ ಹರಿವಿನಲ್ಲೂ ಹೆಚ್ಚಳವಾಗಿದೆ. ಸದ್ಯ ಜಲಾಶಯಕ್ಕೆ ನಿತ್ಯ 3077 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯ ಮತ್ತೊಮ್ಮೆ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಸದ್ಯ 2854.88 ಅಡಿ ನೀರು ಸಂಗ್ರಹವಾಗಿದೆ. ಇನ್ನೂ ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನಿರೀಕ್ಷೆಯಂತೆ ಉತ್ತಮ ಮಳೆ ಸುರಿದಲ್ಲಿ 2859 ಅಡಿ ಗರಿಷ್ಠ ಮಟ್ಟವನ್ನು ಜಲಾಶಯ ತಲುಪಲಿದೆ. ಇದರಿಂದ ಕಾವೇರಿ ನೀರಿಗಾಗಿ ರಾಜ್ಯದ ಜನರು ತೀವ್ರ ಸ್ವರೂಪದ ಹೋರಾಟ ಮಾಡುವುದಕ್ಕೆ ತಡೆ ಬೀಳಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಈಗ ಮಳೆ ಸುರಿದು ಜಲಾಶಯವು ಭರ್ತಿಯಾಗುತ್ತಿರುವುದರಿಂದ ಜಲಾಶಯದ ನೀರು ನಂಬಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. ಈಗಾಗಲೇ ಕೊಡಗಿನ ಕುಶಾಲನಗರ ತಾಲ್ಲೂಕಿನ ಹತ್ತಾರು ಹಳ್ಳಿಗಳು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ತಾಲ್ಲೂಕಿನ ಸಾವಿರಾರು ರೈತರು ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರೈತರು ಹಾರಂಗಿ ಜಲಾಶಯದ ನೀರನ್ನು ನಂಬಿ ಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರು.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ: ಸಂಸದ ಬಿ.ವೈ.ರಾಘವೇಂದ್ರ
ಈಗ ಮಳೆ ಬಂದು ಜಲಾಶಯ ತುಂಬದಿದ್ದರೆ ಈ ಎಲ್ಲಾ ಭಾಗಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇತ್ತು. ಈಗ ಮಳೆ ಬಂದಿದ್ದರಿಂದ ಈ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ ಈ ಮಳೆ ಸುರಿದರೆ ಕೊಡಗಿನಲ್ಲಿ ಕಾಫಿ ಫಸಲು ಬಿಡುತ್ತಿದ್ದು ಅದು ಹಾಳಾಗಲುಬಹುದು ಎನ್ನುವ ಆತಂಕವೂ ಇದೆ. ಏನೇ ಆಗಲಿ ಇದೀಗ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿರುವುದು ರಾಜ್ಯದ ಜನರಿಗೆ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.