ರೈತರಿಗೆ ಮಾರುಕಟ್ಟೆ ಒದಗಿಸಲು ಸರ್ಕಾರದಿಂದ ಚಿಂತನೆ: ಸಚಿವ ಸಂತೋಷ್‌ ಲಾಡ್‌

By Kannadaprabha NewsFirst Published Oct 2, 2023, 9:43 PM IST
Highlights

ರೈತರು ಬೆಳೆದ ಪ್ರತಿಯೊಂದು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು. 

ಧಾರವಾಡ (ಅ.02): ರೈತರು ಬೆಳೆದ ಪ್ರತಿಯೊಂದು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು. ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಸಂಸ್ಥೆಯಲ್ಲಿ ನಡೆದ 37ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಮುಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ರೈತರ ಕುರಿತು ಡಾಟಾ ಬೇಸ್ ಮಾದರಿಯಲ್ಲಿ ಜಿಲ್ಲಾವಾರು ಪ್ರತಿ ಬೆಳೆಯ ಕ್ಷೇತ್ರ ಹಾಗೂ ಉತ್ಪಾದಕತೆಯ ಬಗ್ಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಖರ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯ ಕ್ರೊಢೀಕರಿಸಿ ನೀಡಬೇಕು. 

ನಂತರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಸುಧಾರಣಾ ಕ್ರಮಗಳನ್ನು ಸೂಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ರೈತರ ಕ್ಷೇತ್ರಗಳು ಕಡಿಮೆ ವಿಸ್ತಾರ ಹೊಂದಿದ್ದು, ಅವರು ಬೆಳೆದ ಉತ್ಪನ್ನಗಳಿಗೆ ಒದಗಿಸಬಹುದಾದ ಮಾರುಕಟ್ಟೆ ಕುರಿತು ಹೆಚ್ಚಿನ ಚಿಂತನೆ ಮಾಡಲು ಕೋರಿದರು. ಕೃಷಿ ಪದವೀಧರರು ಸರ್ಕಾರಿ ಉದ್ಯೋಗ ಬಯಸದೇ ಸ್ವಉದ್ಯೋಗಿಗಳಾಗಲು ಪ್ರಯತ್ನ ಪಡುವುದು ಒಳ್ಳೆಯದು. 2023ರ ಕೃಷಿ ಮೇಳ ಅತ್ಯಂತ ಯಶಸ್ವಿಯಾಗಿದ್ದಕ್ಕೆ ಹಾಗೂ ಕೃವಿವಿ, ಕುಲಪತಿಗಳು ಜೀವಮಾನ ಸಾಧನೆ ಪ್ರಶಸ್ತಿ ಪಡೆದಿರುವದಕ್ಕೆ ಅಭಿನಂದನೆ ಸಲ್ಲಿಸಿದರು.

Latest Videos

ರೈತರ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುವೆ: ಸಚಿವ ಪರಮೇಶ್ವರ್

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೃಷಿ ವಿವಿ ಹಲವಾರು ತಳಿ ಮತ್ತು ಉತ್ತಮ ತಂತ್ರಜ್ಞಾನಗಳನ್ನು ಹೊರತಂದಿದೆ ಮತ್ತು ಹೆಚ್ಚು ಸಾಧನೆ ಮಾಡಿ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಿದೆ. ವಿವಿಧ ಪ್ರಶಸ್ತಿ ಪಡೆದ ವಿಜ್ಞಾನಿಗಳನ್ನು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ರೈತರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವ ಗುಣಮಟ್ಟದ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸೂಚಿಸಿದರು. ಇದೇ ವೇದಿಕೆಯಲ್ಲಿ ಡಾ. ವೀಣಾ ಜಾಧವ ಇವರು ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕುಲಪತಿ ಡಾ. ಪಿ.ಎಲ್. ಪಾಟೀಲ, ವಿಶ್ವವಿದ್ಯಾಲಯ ಭೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಸಾಧಿಸಿದ ಸಾಧನೆಗಳ ಕುರಿತು ವರದಿ ಮಂಡಿಸಿದರು. ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದ ಇಲ್ಲಿ ವರೆಗೆ ಹತ್ತಕ್ಕೂ ಹೆಚ್ಚು ಬೆಳೆಗಳಲ್ಲಿ ಒಟ್ಟು 251 ತಳಿಗಳನ್ನು ಹಾಗೂ ಹಲವಾರು ತಾಂತ್ರಿಕತೆಗಳನ್ನು ಬಿಡುಗಡೆ ಮಾಡಿದೆ. ಹತ್ತಿ ಬೆಳೆಯಲ್ಲಿ ಇಂಟರ್ ಸ್ಪೆಸಿಫಿಕ್ ಹೈಬ್ರಿಡ್ ತಳಿಗಳಾದ ವರಲಕ್ಷ್ಮೀ ಮತ್ತು ಜಯಲಕ್ಷ್ಮೀ ಡಿಸಿಹೆಚ್-32 ಅಭಿವೃದ್ಧಿ ಪಡಿಸಿದ ದೇಶದ ಮೊಟ್ಟ ಮೊದಲ ವಿಶ್ವವಿದ್ಯಾಲಯವಾಗಿದೆ ಎಂದರು.

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ವ್ಯವಸ್ಥಾಪನ ಮಂಡಳಿಯ ಶ್ರೀನಿವಾಸ ಕೊಟ್ಯಾನ್, ಹಿರಿಯ ಅಧಿಕಾರಿಗಳಾದ ಡಾ. ಬಿ. ಡಿ. ಬಿರಾದಾರ, ಡಾ. ಎಚ್‌.ಬಿ. ಬಬಲಾದ, ಡಾ. ಎಸ್.ಎಸ್. ಅಂಗಡಿ, ಡಾ. ವಿ.ಆರ್. ಕಿರೇಸೂರ ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಜೆ.ವಿ. ಗೌಡ, ಡಾ. ಜೆ.ಎಚ್. ಕುಲಕರ್ಣಿ, ಡಾ. ಬಿ.ಎಸ್. ಜನಗೌಡರ ಇದ್ದರು. ಕುಲಸಚಿವ ಡಾ. ಎಂ.ವಿ. ಮಂಜುನಾಥ ವಂದಿಸಿದರು. ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು.

click me!