ಕಳೆದ 75 ದಿನಗಳಿಂದ ಹರಿವು ಸ್ಥಗಿತಗೊಳಿಸಿದ್ದ ನಾಡಿನ ಜೀವನದಿ ಕಾವೇರಿ ಇದೀಗ ಮತ್ತೆ ತವರಲ್ಲಿ ಹರಿಯಲು ಆರಂಭಿಸಿದೆ. ಈ ಮೂಲಕ ಕೊಡಗಿನ ನದಿ ತಟ್ಟದ ಜನರಲ್ಲಿ ಸಂತಸ ಮೂಡಿಬಂದಿದೆ.
ಕುಶಾಲನಗರ (ಮೇ.17): ಕಳೆದ 75 ದಿನಗಳಿಂದ ಹರಿವು ಸ್ಥಗಿತಗೊಳಿಸಿದ್ದ ನಾಡಿನ ಜೀವನದಿ ಕಾವೇರಿ ಇದೀಗ ಮತ್ತೆ ತವರಲ್ಲಿ ಹರಿಯಲು ಆರಂಭಿಸಿದೆ. ಈ ಮೂಲಕ ಕೊಡಗಿನ ನದಿ ತಟ್ಟದ ಜನರಲ್ಲಿ ಸಂತಸ ಮೂಡಿಬಂದಿದೆ. ನದಿಯ ಮೂಲ ತಲಕಾವೇರಿಯಿಂದ ಕುಶಾಲನಗರ ತನಕ ಫೆಬ್ರವರಿ ಅಂತ್ಯದಿಂದ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕುಸಿತ ಕಾಣುವುದರೊಂದಿಗೆ ಇಡೀ ನದಿ ತಟದ ಜನತೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಬೇಸಿಗೆ ಬೇಗೆ ಹೆಚ್ಚಿದಂತೆಲ್ಲ ಸ್ಥಳೀಯ ಆಡಳಿತ ಮೂಲಕ ಕೊಳವೆ ಬಾವಿಗಳನ್ನು ಬಳಸಿ ಟ್ಯಾಂಕರ್ ಗಳ ಮೂಲಕ ಅಗತ್ಯ ಕುಡಿಯುವ ನೀರಿನ ಪೂರೈಕೆ ಮಾಡಬೇಕಾಯಿತು. ಈ ನಡುವೆ ಕೊಳವೆಬಾವಿಗಳಲ್ಲಿ ಕೂಡ ಅಂತರ್ಜಲ ಕುಸಿತ ಕಂಡು ಬಂದರೂ, ಕುಶಾಲನಗರ ಪಟ್ಟಣ ಸುತ್ತಮುತ್ತ ಗ್ರಾಮದ ಜನತೆಗೆ ನೀರಿನ ಕೊರತೆ ಎದುರಾಗದಂತೆ ಸ್ಥಳೀಯ ಆಡಳಿತದ ಅಧಿಕಾರಿ ಸಿಬ್ಬಂದಿ ಯೋಜನೆ ರೂಪಿಸಿದ್ದರು.
ಲೋಕಸಭೆಯಲ್ಲಿ ಬಿಜೆಪಿ 28 ಸ್ಥಾನ ಗೆದ್ರೆ, ರಾಜೀನಾಮೆ ಕೊಡುವೆ: ಶಾಸಕ ಬೇಳೂರು ಗೋಪಾಲಕೃಷ್ಣ
ಮಳೆ ಕಾರಣ: ಕಳೆದ ಎರಡು ವಾರಗಳಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿದ್ದು ಕೆಂಪು ಬಣ್ಣಕ್ಕೆ ತಿರುಗಿರುವ ನೀರು ಇದೀಗ ನದಿಯಲ್ಲಿ ಹರಿಯುತ್ತಿರುವ ದೃಶ್ಯ ಕಾಣಬಹುದು. ಪಟ್ಟಣ, ಗ್ರಾಮಗಳ ಚರಂಡಿಗಳ ಮೂಲಕ ನೇರವಾಗಿ ಕಲುಷಿತ ನೀರು ನದಿಗೆ ಸೇರುವ ಕಾರಣ ನೀರಿನ ಗುಣಮಟ್ಟ ಬಹುತೇಕ ಕುಸಿತ ಕಂಡು ಬಂದಿದೆ.
ಕುಶಾಲನಗರ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕರ್ನಾಟಕ ಒಳಚರಂಡಿ ಮಂಡಳಿ ಮತ್ತು ಕುಡಿಯುವ ನೀರು ಸರಬರಾಜು ಕೇಂದ್ರದಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ನದಿಯಿಂದ ನೀರು ಸರಬರಾಜು ಮಾಡುವ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಮಂಡಳಿಯ ಆವರಣದಲ್ಲಿರುವ ಟ್ಯಾಂಕುಗಳ ಸ್ವಚ್ಛತಾ ಕಾರ್ಯ ಗುರುವಾರ ನಡೆದಿದ್ದು ಇನ್ನೆರಡು ದಿನಗಳಲ್ಲಿ ನದಿಯಿಂದ ನೀರೆತ್ತಿ ಶುದ್ಧೀಕರಿಸಿ ನಾಗರಿಕರಿಗೆ ಒದಗಿಸುವ ಕಾರ್ಯ ನಡೆಯಲಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕುಶಾಲನಗರ ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದು ಇನ್ನೆರಡು ದಿನಗಳಲ್ಲಿ ಈ ಕಾರ್ಯ ಸ್ಥಗಿತಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿ ತನ್ನ ಹರಿವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಭಾಗದಲ್ಲಿ ನದಿಯಲ್ಲಿದ್ದ ಜಲಚರಗಳು ನಾಶಗೊಂಡಿದ್ದವು.
ನದಿಯಲ್ಲಿ ನಡೆಸ ಬೇಕಾದ ಪೂಜಾ ಕಾರ್ಯಗಳಿಗೆ ಕೊಳವೆಬಾವಿಯಿಂದ ನೀರು ತಂದು ಪೂಜೆ ಸಲ್ಲಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕಳೆದ ಆರು ಏಳು ದಶಕಗಳ ಅವಧಿಯಲ್ಲಿ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ ಎನ್ನುತ್ತಾರೆ ಕುಶಾಲನಗರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖ ಡಿ.ಆರ್. ಸೋಮಶೇಖರ್.
ಕುಶಾಲನಗರ ಪಟ್ಟಣಕ್ಕೆ ಮುಂದಿನ ವಾರದೊಳಗೆ ಕಾವೇರಿ ನದಿಯಿಂದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಎಲ್ಲಾ ಕೆಲಸ ಕಾರ್ಯಗಳು ನಡೆದಿವೆ.
-ಆನಂದ್, ಕುಶಾಲನಗರ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯ ಮತ್ತು ಸ್ಥಳೀಯ ಮಾದಾಪಟ್ಟಣ ಮುಳ್ಳುಸೋಗೆ ವ್ಯಾಪ್ತಿಯ ಜನರಿಗೆ ಯಾವುದೇ ರೀತಿಯ ಅನಾನುಕೂಲ ಉಂಟಾಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು.
-ಕೃಷ್ಣಪ್ರಸಾದ್, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ.
Kodagu: ರೈತರ ಖಾಸಗಿ ಭೂಮಿಯಲ್ಲಿರುವ ಮರಗಳ ಸರ್ವೆ ವಿರುದ್ಧ ಬಿಜೆಪಿ ಆಕ್ರೋಶ!
ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಗತ್ಯವಾಗಿ ಬೇಕಾಗಿದ್ದ ನೀರು ಸರಬರಾಜು ವ್ಯವಸ್ಥೆಯನ್ನು ತಾಲೂಕು ಕಚೇರಿ ಮೂಲಕ ಟ್ಯಾಂಕರ್‌ಗಳನ್ನು ಬಳಸಿ ಮಾಡಲಾಗಿತ್ತು. ನೀರು ಪೂರೈಕೆಗೆ ಸಮಸ್ಯೆ ಆಗಿಲ್ಲ.
-ಕಿರಣ್ ಗೌರಯ್ಯ, ಕುಶಾಲನಗರ ತಹಸೀಲ್ದಾರ್.