ಬೆಂಗ್ಳೂರಲ್ಲಿ ಮಳೆಯಿಂದ ಸೆಕೆ ಮತ್ತಷ್ಟು ಹೆಚ್ಚಳ

By Kannadaprabha NewsFirst Published Apr 23, 2021, 7:50 AM IST
Highlights

ಮಧ್ಯಾಹ್ನವೇ ದಿಢೀರ್‌ ಎಂದು ಸುರಿದ ವರುಣ| ಸಂಜೆ ಜೋರಾದ ಮಳೆ| ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ| ಏ.26ರ ವರೆಗೂ ಇದೇ ಸ್ಥಿತಿ ಮುಂದುವರಿಕೆ| 

ಬೆಂಗಳೂರು(ಏ.23): ಬಿರು ಬೇಸಿಗೆಯಿಂದ ತತ್ತರಿಸುತ್ತಿದ್ದ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಗುರುವಾರ ಕೆಲ ಕಾಲ ಹಗುರ ಹಾಗೂ ಸಾಧಾರಣ ಮಳೆಯಾಯಿತು. ಮಳೆಯಿಂದ ಭೂಮಿ ತಂಪಾಯಿತ್ತಾದರೂ ಸೆಕೆ ಕೊಂಚ ಹೆಚ್ಚಾಯಿತು.

ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ನಗರದ ಹಲವೆಡೆ ದಿಢೀರ್‌ ಮಳೆಯಾಯಿತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಕೆಲ ಕಾಲ ಪರದಾಡಬೇಕಾಯಿತು. ಸಂಜೆ ಕೊಂಚ ಜೋರಾಗಿಯೇ ಮಳೆಯಾದ ಪರಿಣಾಮ ರಸ್ತೆ ಹಾಗೂ ಚರಂಡಿಗಳಲ್ಲಿ ನೀರು ಹರಿಯಿತು. ಉದ್ಯೋಗ ಮುಗಿಸಿ ದ್ವಿಚಕ್ರವಾಹನಗಳಲ್ಲಿ ಮನೆ ಸೇರುವವರು, ಪಾದಚಾರಿಗಳು ಮಳೆಯಿಂದ ತಪ್ಪಿಸಿಕೊಳ್ಳಲು ರಸ್ತೆಯ ಬದಿಯ ಮರ, ಅಂಗಡಿ-ಮುಂಗಟ್ಟುಗಳು, ಬಸ್‌ ನಿಲ್ದಾಣಗಳ ಆಶ್ರಯ ಪಡೆಯಬೇಕಾಯಿತು.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌!

ಶಿವಾನಂದ ವೃತ್ತ, ಗಾಂಧಿನಗರ, ಮೆಜೆಸ್ಟಿಕ್‌, ಕುರುಬರಹಳ್ಳಿ, ಯಲಹಂಕ, ಏರ್‌ಪೋರ್ಟ್‌ ರಸ್ತೆ, ಸದಾಶಿವನಗರ, ಯಶವಂತಪುರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್‌ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು. ನಗರದ ಚೊಕ್ಕಸಂದ್ರ ಹಾಗೂ ಹೊಯ್ಸಳ ನಗರ, ಸಾರಕ್ಕಿ, ದೊಮ್ಮಲೂರು, ಸಂಪಂಗಿರಾಮನಗರ, ಎಚ್‌.ಗೊಲ್ಲಹಳ್ಳಿ, ವಿ.ವಿ.ಪುರಂ, ಬಸವನಗುಡಿ, ಬೊಮ್ಮನಹಳ್ಳಿ, ಹೊಸಕೆರೆಹಳ್ಳಿ, ವಿಜಯನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಹಗುರ ಮಳೆಯಾಯಿತು.

ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆಗುತ್ತಿದೆ. ಏ.26ರ ವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.

ಹೆಚ್ಚು ಮಳೆ

ನಗರದ ರಾಮಮೂರ್ತಿನಗರ 54 ಮಿ.ಮೀ., ದಯಾನಂದ ನಗರ 39 ಮಿ.ಮೀ., ಕೆ.ಆರ್‌.ಪುರ 30.5 ಮಿ.ಮೀ., ಮನೋರಾಯನಪಾಳ್ಯ, ಅವಲಹಳ್ಳಿ ಹಾಗೂ ಕಾಟನ್‌ಪೇಟೆ ತಲಾ 16.5 ಮಿ.ಮೀ., ಯಶವಂತಪುರ 15 ಮಿ.ಮೀ., ಸಂಪಂಗಿರಾಮನಗರ 14 ಮಿ.ಮೀ., ಮಾರುತಿಮಂದಿರ 12 ಮಿ.ಮೀ., ರಾಜ್‌ಮಹಲ್‌ ಗುಟ್ಟಳ್ಳಿ 12 ಮಿ.ಮೀ., ನಾಗರಬಾವಿ ಹಾಗೂ ದೊಡ್ಡತೋಗೂರು ತಲಾ 10 ಮಿ.ಮೀ., ಬಾಣಸವಾಡಿ 10.5 ಮಿ.ಮೀ., ಜಕ್ಕೂರಿನಲ್ಲಿ 8 ಮಿ.ಮೀ. ಹಾಗೂ ಜ್ಞಾನಭಾರತಿ ವಿವಿ ಕ್ಯಾಂಪಸ್‌ನಲ್ಲಿ 6.5 ಮಿ.ಮೀ. ಸೇರಿದಂತೆ ನಗರದ ಹಲವೆಡೆ ಜೋರು ಮಳೆಯಾಯಿತು.

click me!