Rain In Karnataka: 7 ಜಿಲ್ಲೆ​ಗಳ​ಲ್ಲಿ ದಿಢೀರ್‌ ಮಳೆ, ಶಿರಸಿ ಜಾತ್ರೆಯಲ್ಲಿ ಕುಸಿದ ತೊಟ್ಟಿಲು

By Kannadaprabha News  |  First Published Mar 19, 2022, 3:21 AM IST

*  7 ಜಿಲ್ಲೆ​ಗಳ​ಲ್ಲಿ ದಿಢೀರ್‌ ಮಳೆಯ ಅಬ್ಬರ!
* ಕೆಲವೆಡೆ ಭಾರೀ ಗಾಳಿ,  ಮಳೆ ಸುರಿದಿದ್ದರಿಂದ ಕಾಫಿ ಬೆಳೆಗಾರರು ಖುಷ್‌
*ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ
*ಶಿರಸಿ ಮಾರಿ​ಕಾಂಬಾ ಜಾತ್ರಾ ಗದ್ದುಗೆ ಮಂಟ​ಪಕ್ಕೆ ಹಾನಿ


ಶಿರಸಿ(ಮಾ. 19)  ಬಿಸಿಲ ಧಗೆ ಏರು​ತ್ತಿ​ರುವ ನಡು​ವೆಯೇ ಉತ್ತರ ಕನ್ನಡ (Uttara Kannada) ಸೇರಿ ರಾಜ್ಯದ ಏಳು ಜಿಲ್ಲೆ​ಗ​ಳಲ್ಲಿ ಶುಕ್ರವಾರ ಕೆಲ​ಗಂಟೆ​ಗಳ ಕಾಲ ದಿಢೀರ್‌ ಉತ್ತಮ (Rain) ಮಳೆ​ಯಾ​ಗಿ​ದೆ. ಮಳೆ-ಗಾಳಿ ಅಬ್ಬ​ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಇತಿ​ಹಾಸ ಪ್ರಸಿದ್ಧ ಶಿರಸಿ (Sirsi) ಮಾರಿ​ಕಾಂಬಾ ಜಾತ್ರಾ ಗದ್ದುಗೆ ಮಂಟ​ಪಕ್ಕೆ ಹಾನಿ​ಯಾ​ಗಿದ್ದ​ಲ್ಲದೆ, ಮನೋ​ರಂಜ​ನೆ​ಗೆಂದು ಹಾಕ​ಲಾ​ಗಿದ್ದ ಜೈಂಟ್‌ ವ್ಹೀಲ್‌ನ ಐದು ತೊಟ್ಟಿಲು ಕುಸಿದು ಬಿದ್ದಿದೆ.

ರಾಜ್ಯ​ದಲ್ಲಿ ಕಳೆದ ಕೆಲ ದಿನ​ಗ​ಳಿಂದ ಬಿಸಿ​ಲಿನ ಝಳ ಏರು​ತ್ತಲೇ ಇದ್ದು, ಇದರ ನಡು​ವೆಯೇ ಉತ್ತರ ಕನ್ನಡ, ಹಾವೇರಿ, ಗದಗ, ಕೊಡಗು (Kodagu), ದಕ್ಷಿಣ ಕನ್ನ​ಡ, ​ಉಡುಪಿ, ಚಿಕ್ಕ​ಮ​ಗ​ಳೂರು ಜಿಲ್ಲೆ​ಯಲ್ಲಿ ಸುಮಾರು ಅರ್ಧ​ಗಂಟೆ​ಯಿಂದ ಒಂದು ಗಂಟೆ​ಗಳ ಕಾಲ ಉತ್ತಮ ಮಳೆ​ ಸುರಿ​ದಿ​ದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಮಳೆಯಾದ ಬಗ್ಗೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

Tap to resize

Latest Videos

Pre Monsoon Rain: ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಮಳೆ

ಮಾರಿ​ಕಾಂಬಾ ಜಾತ್ರೆಗೆ ಅಡ್ಡಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲ​ವೆಡೆ ಸಂಜೆ ವೇಳೆಗೆ ಸುಮಾರು ಒಂದ​ರಿಂದ ಒಂದೂ​ವರೆ ಗಂಟೆ​ಗಳ ಕಾಲ ಭಾರೀ ಗಾಳಿ ಸಹಿತ ಉತ್ತಮ ಮಳೆ​ಯಾ​ಗಿದ್ದು, ಸಿದ್ದಾ​ಪು​ರ​ದಲ್ಲಿ ಮನೆ ಮೇಲೆ ತೆಂಗಿ​ನ​ಮ​ರ​ವೊಂದು ಬಿದ್ದು, ನಾಲ್ವ​ರಿಗೆ ಗಾಯ​ಗ​ಳಾ​ಗಿದೆ. ಮಳೆ-ಗಾಳಿ​ಯಿಂದಾಗಿ ಶಿರ​ಸಿ​ಯಲ್ಲಿ ಮಾರಿಕಾಂಬಾದೇವಿ ದೇವಸ್ಥಾನದ ಬಿಡ್ಕಿಬೈಲಿನಲ್ಲಿ ಜಾತ್ರಾ ಗದ್ದುಗೆಗಾಗಿ ನಿರ್ಮಿಸಿದ್ದ ಮಂಟಪಕ್ಕೆ ಹಾನಿಯಾಗಿದೆ. ಸಂಜೆ ಸುಮಾರು 6 ಗಂಟೆ ವೇಳೆ ದಿಢೀರ್‌ ಬಿರುಗಾಳಿ ಬೀಸಿದೆ. ಇದರಿಂದಾಗಿ ಜಾತ್ರಾ ಮಂಟಪದ ಮೇಲ್ಭಾಗ ಕುಸಿದಿದೆ. ಭಾರೀ ಗಾಳಿಗೆ ಅಂಗಡಿ ಮುಂಗ​ಟ್ಟು​ಗಳ ಮುಂದೆ ಕಟ್ಟಿದ್ದ ಟಾರ್ಪ​ಲ್‌ ಹಾರಿ ಹೋದ ಹಿನ್ನೆ​ಲೆ​ಯಲ್ಲಿ ​ಕೆ​ಲ​ಕಾಲ ಆತಂಕದ ವಾತಾ​ವ​ರಣ ನಿರ್ಮಾ​ಣ​ವಾ​ಗಿ​ತ್ತು.

ತಪ್ಪಿದ ದುರಂತ: ಜಾತ್ರೆ ಹಿನ್ನೆ​ಲೆ​ಯಲ್ಲಿ ಸಾರ್ವ​ಜ​ನಿ​ಕರ ಮನೋರಂಜನೆಗಾಗಿ ಅಳವಡಿಸಲಾಗಿದ್ದ ಜೈಂಟ್‌ ವ್ಹೀಲ್‌​ಗೂ ಗಾಳಿ-ಮಳೆ​ಯಿಂದಾ​ಗಿ ಹಾನಿಯಾಗಿ​ದೆ. ಗಾಳಿ​ಯ​ಬ್ಬ​ರಕ್ಕೆ ಸುಮಾರು 5 ತೊಟ್ಟಿಲು ಕಳಚಿ ಕೆಳ ಬಿದ್ದಿದೆ. ಗಾಳಿ ಜೋರಾಗುತ್ತಿದ್ದಂತೆ ಅಧಿ​ಕಾ​ರಿ​ಗ​ಳು ಜಾಯಿಂಟ್‌ ವ್ಹೀಲ್‌ ಅನ್ನು ತಕ್ಷಣ ಸ್ಥಗಿ​ತ​ಗೊ​ಳಿ​ಸಿ ಜನ​ರನ್ನು ಸ್ಥಳ​ದಿಂದ ಹೊರ ಕಳು​ಹಿ​ಸಿದ ಹಿನ್ನೆ​ಲೆ​ಯಲ್ಲಿ ಭಾರೀ ಅನಾ​ಹುತವೊಂದು ತಪ್ಪಿ​ದಂತಾ​ಗಿ​ದೆ.

 

ಚಿಕ್ಕ​ಮ​ಗ​ಳೂ​ರಲ್ಲೂ ಅಬ್ಬ​ರ: ಚಿಕ್ಕ​ಮ​ಗ​ಳೂರು ಜಿಲ್ಲೆ​ಯ ಮೂಡಿ​ಗೆರೆ, ಎನ್‌.​ಆ​ರ್‌.​ಪುರ, ಶೃಂಗೇರಿ, ಬಾಳೆ​ಹೊ​ನ್ನೂರು ತಾಲೂ​ಕು ಸೇರಿ ಹಲ​ವೆಡೆ ಮಧ್ಯಾ​ಹ್ನ​ದಿಂದಲೇ ಅಬ್ಬ​ರದ ಮಳೆ​ಯಾ​ಗಿ​ದೆ. ಸುಮಾರು ಒಂದ​ರಿಂದ ಒಂದೂ​ವ​ರೆ ಗಂಟೆ​ಗಳ ಕಾಲ ಸುರಿದ ಅಬ್ಬ​ರದ ಮಳೆಗೆ ಶೃಂಗೇ​ರಿ ಸೇರಿ ಕೆಲ​ವೆಡೆ ವಿದ್ಯುತ್‌ ವ್ಯತ್ಯ​ಯ​ವಾ​ಗಿ​ದೆ.

ಇನ್ನು ಹಾವೇ​ರಿ​ಯ​ಲ್ಲಿ ಸುಮಾರು ಅರ್ಧ​ಗಂಟೆಗಳ ಕಾಲ ಉತ್ತಮ ಮಳೆ​ಯಾ​ದರೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡ​ಬಿ​ದಿರೆ, ಮೂಲ್ಕಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕ​ಳ​ದಲ್ಲಿ ಕೆಲ​ಕಾಲ ಉತ್ತಮ ಮಳೆಯಾಗಿದ್ದು, ಕೊಡ​ಗಿನ ನಾಪೋಕ್ಲು ಸುತ್ತ​ಮುತ್ತ ಸಂಜೆ ವೇಳೆಗೆ ಸುಮಾರು ಮುಕ್ಕಾಲು ಗಂಟೆ​ ಕಾಲ ಬಿರು​ಸಿನ ಮಳೆ ಸುರಿ​ದಿದೆ.

3​-4 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ:  ಮುಂದಿನ ಮೂರ್ನಾಲ್ಕು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದರಿಂದ ರಾಜ್ಯದಾದ್ಯಂತ ಇರುವ ಸೆಖೆಯ ವಾತಾವರ ತುಸು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ (ಅಂಡಮಾನ್‌, ನಿಕೋಬಾರ್‌ ಪ್ರದೇಶ) ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗುವ ನಿರೀಕ್ಷೆ ಮತ್ತು ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವ ರಾಜ್ಯದ ಮೇಲಾಗುವ ಸಾಧ್ಯತೆ ಇರುವುದರಿಂದ ರಾಜ್ಯವ್ಯಾಪಿ ಮುಂದಿನ ಕೆಲ ದಿನಗಳ ಕಾಲ ಮಳೆ ಸುರಿಯುವ ಸಂಭವವಿದೆ. 

ಶನಿವಾರ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡದ ಒಂದೆರಡು ಕಡೆ, ನಂತರ ಮಂಗಳವಾರದ ತನಕ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಾ.20ರಂದು ಮಳೆಯಾಗಲಿದೆ. ಮಾ.21ರಂದು ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ, ಮಾ.22ರಂದು ಗದಗ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಕೆಲ ದಿನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮಾ.19 ಮತ್ತು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ, ಮಾ.20ರಂದು ಈ ಜಿಲ್ಲೆಗಳೊಂದಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಜಿಲ್ಲೆಯ ಒಂದೆರಡು ಮಳೆಯಾಗಲಿದೆ. ಮಾ.21ರಂದು ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

 

 

click me!