ಮಳೆಯಿಂದ ಕೆರೆ ಕಟ್ಟೆ, ಕಿಂಡಿ ಅಣೆಕಟ್ಟೆಗೆ ಹಾನಿಯಾಗಿಲ್ಲ: ಮಾಧುಸ್ವಾಮಿ

By Kannadaprabha NewsFirst Published Aug 10, 2022, 12:30 AM IST
Highlights

ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆ ಕಟ್ಟೆಹಾಗೂ ಕಿಂಡಿ ಅಣೆಕಟ್ಟೆಕಾಮಗಾರಿಗಳಿಗೆ ಮಳೆಯಿಂದ ಹಾನಿ ಆಗಿಲ್ಲ, ಸದ್ಯ ಈಗಾಗಲೇ ನಿರ್ಮಾಣ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಮಡಿಕೇರಿ (ಆ.10) : ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆ ಕಟ್ಟೆಹಾಗೂ ಕಿಂಡಿ ಅಣೆಕಟ್ಟೆಕಾಮಗಾರಿಗಳಿಗೆ ಮಳೆಯಿಂದ ಹಾನಿ ಆಗಿಲ್ಲ, ಸದ್ಯ ಈಗಾಗಲೇ ನಿರ್ಮಾಣ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಅವರು ಕೊಯನಾಡು ಬಳಿಯ ಕಿಂಡಿ ಆಣೆಕಟ್ಟು, ಚೆಂಬು ಗ್ರಾಮದ ಊರುಬೈಲು ಕಿಂಡಿ ಆಣೆಕಟ್ಟು, ಮಾರ್ಪಡ್ಕ ಸೇತುವೆ, ಆನೆಹಳ್ಳದ ಕಿಂಡಿ ಆಣೆಕಟ್ಟು, ಬಾಲಂಬಿ ಬಳಿಯ ಸೇತುವೆಗಳಿಗೆ ಮಂಗಳವಾರ ಭೇಟಿ ನೀಡಿ ದ ಬಳಿಕ ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಸಚಿವ ಮಾಧುಸ್ವಾಮಿಗೆ ಸಡ್ಡು ಹೊಡೆದ ಮಾಜಿ ಶಾಸಕ, ಚಿಕ್ಕನಾಯಕನಹಳ್ಳಿಯಲ್ಲಿ ಕಚೇರಿ ಓಪನ್

ಕಿಂಡಿ ಆಣೆಕಟ್ಟು ಯೋಜನೆಯನ್ನು ಉಡುಪಿ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ. ಚೆಕ್‌ ಡ್ಯಾಮ್‌ ನಿರ್ಮಾಣದಿಂದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಕೆರೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಗ್ರಾಮದ ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ ಮತ್ತು ಎಂಜಿನಿಯರ್‌ ಅವರಿಂದ ಮಾಹಿತಿ ಪಡೆದರು. ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ, ಚೆಂಬು ಗ್ರಾಮಸಥ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ, ಕಿಂಡಿ ಅಣೆಕಟ್ಟಿನಿಂದ ಇಲ್ಲಿನ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಿದೆ. ಜೊತೆಗೆ ಹೊಳೆ ಬದಿ ಅಗತ್ಯ ಇರುವ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್‌ ಮಳೆಯಿಂದ ಉಂಟಾಗಿರುವ ಹಾನಿ ಮತ್ತಿತರ ವಿಚಾರಗಳನ್ನುಸಚಿವರ ಗಮನಕ್ಕೆ ತಂದರು.

ಕೆರೆಗಳಿಗೆ ನೀರು: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ಆಲೂರು ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಗುತ್ತಿಯಲ್ಲಿ ಸುಮಾರು ರು.7 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು 20 ವರ್ಷಗಳ ಬೇಡಿಕೆ ಆಗಿತ್ತು ಎಂದು ವಿವರಿಸಿದರು.

ಕೊಡಗಿನಲ್ಲಿ ಮತ್ತೆ ಪ್ರವಾಹ; ಮತ್ತೆ ಮರುಕಳಿಸಲಿದೆಯಾ 2018ರ ಕರಾಳ ದಿನ..?

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಂಪಾಜೆ ಭಾಗದಲ್ಲಿ ಕಿಂಡಿ ಆಣೆಕಟ್ಟು ಯೋಜನೆಯಿಂದ ಅನುಕೂಲವಾಗಿದೆ, ಆದರೆ ಹೆಚ್ಚಿನ ಮಳೆಯಿಂದಾಗಿ ಸ್ಥಳೀಯರಿಗೆ ತೊಂದರೆ ಆಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಉಪ ವಿಭಾಗಾಧಿಕಾರಿ ಯತೀಶ್‌ ಉಲ್ಲಾಳ್‌, ತಹಸೀಲ್ದಾರ್‌ ಮಹೇಶ್‌, ಉಪ ಪೊಲೀಸ್‌ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್‌, ಮುಖ್ಯ ಎಂಜಿನಿಯರ್‌ ರಾಘವನ್‌, ಇಇ ಗೋಕುಲ್‌ ದಾಸ್‌, ಎಇಇ ಕುಮಾರಸ್ವಾಮಿ ಮತ್ತಿತರರು ಇದ್ದರು.

ಮಣ್ಣು ಕುಸಿಯುತ್ತಿರುವ ಪ್ರದೇಶಕ್ಕೆ ಭೇಟಿ:

ಮಡಿಕೇರಿ-ಸಂಪಾಜೆ ಮಾರ್ಗದ ಮದೆ ಗ್ರಾಮದ ಹೆದ್ದಾರಿ ಬಳಿ ಮಣ್ಣು ಕುಸಿತ ಉಂಟಾಗುತ್ತಿರುವ ಪ್ರದೇಶಕ್ಕೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ವೀಕ್ಷಿಸಿದರು. ಹೆದ್ದಾರಿ ಬಳಿ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ಈ ಸಂಬಂಧ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ವಿದ್ಯುತ್‌ ಮಾರ್ಗ ಬದಲಿಸಲಾಗುತ್ತಿದೆ ಎಂದರು. ಮಳೆಯ ನಡುವೆಯೂ ಸೆಸ್‌್ಕ ಸಿಬ್ಬಂದಿ ವಿದ್ಯುತ್‌ ಮಾರ್ಗವನ್ನು ಬದಲಿಸುತ್ತಿದ್ದು ಕಂಡುಬಂದಿತು. ಉಪ ಪೊಲೀಸ್‌ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್‌, ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್‌ ಮುರುಗೇಶ್‌ ಮತ್ತಿತರರು ಇದ್ದರು.

click me!