ಕೊಡಗಿನಲ್ಲಿ ತಗ್ಗಿದ ಮಳೆ: ಪ್ರವಾಹ ಇಳಿಮುಖ

By Kannadaprabha News  |  First Published Sep 7, 2019, 3:34 PM IST

ಕಳೆದ ಕೆಲವು ದಿನಗಳಿಂದ ಮಡಿಕೇರಿಯಲ್ಲಿ ಭಾರೀ ಮಳೆಯಾಗದ ಪರಿಣಾಮ ನದಿಗಳಲ್ಲಿ ಪ್ರವಾಹ ಹೆಚ್ಚಾಗಿತ್ತು. ಕೆಲವು ತಗ್ಗು ಪ್ರದೇಶಗಳು ಜಲಾವೃತವಾಗಿತ್ತು. ಆದರೆ ಇದೀಗ ಮಳೆ ಪ್ರಮಾಣ ಕಡಿಮೆಯಾಗಿ, ಪ್ರವಾಹ ಇಳಿಮುಖವಾಗಿರುವುದು ಜನರ ಆತಂಕ ಸ್ವಲ್ಪಮಟ್ಟಿಗೆ ದೂರ ಮಾಡಿದೆ.


ಮಡಿಕೇರಿ(ಸೆ.07): ಜಿಲ್ಲೆಯಲ್ಲಿ ವರುಣನ ಅಬ್ಬರ ತಗ್ಗಿದ್ದು, ಜಿಲ್ಲಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ತಾಲೂಕಿನ ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದೆ.

ಕಳೆದ 24 ಗಂಟೆಗಳ ಅವ​ಧಿಯಲ್ಲಿ ಜಿಲ್ಲೆಯಲ್ಲಿ 48.73 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 65.60 ಮಿ.ಮೀ. ಸರಾಸರಿ ಮಳೆಯಾಗಿದ್ದರೆ, ವಿರಾಜಪೇಟೆ ತಾಲೂಕಿನಲ್ಲಿ 32.23 ಮಿ.ಮೀ. ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 48.37 ಮಿ.ಮೀ. ಸರಾಸರಿ ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಗರಿಷ್ಟಅಂದರೆ 115.40 ಮಿ.ಮೀ. ನಷ್ಟುಮಳೆ ದಾಖಲಾಗಿದೆ. ಆದರೂ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ.

Tap to resize

Latest Videos

ಜಿಲ್ಲೆಯಲ್ಲಿ ಸಾಧಾರಣ ಮಳೆ:

ಭಾಗಮಂಡಲ-ನಾಪೋಕ್ಲು ಹಾಗೂ ಭಾಗಮಂಡಲ-ತಲಕಾವೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರು ಕೂಡ ಇಳಿಮುಖವಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಅಗತ್ಯ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ನದಿ ತುಂಬಿ ಹರಿಯುತ್ತಿದೆ.

ದಕ್ಷಿಣ ಕೊಡಗಿನಲ್ಲಿ ಹೆಚ್ಚಾದ ಮಳೆ:

ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಶುಕ್ರವಾರ ಮಳೆಯ ಪ್ರಮಾಣ ಕೊಂಚ ಏರಿಕೆಯಾಗಿದೆ. ಪೊನ್ನಂಪೇಟೆ ಸುತ್ತಮುತ್ತ ಧಾರಾಕಾರ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಕೆಲ ವಾರಗಳ ಹಿಂದೆ ಪ್ರವಾಹದಿಂದ ಸಾಕಷ್ಟುಬೆಳೆ ನಾಶವಾಗಿತ್ತು. ಅಲ್ಲದೆ, ಕಾಫಿ ಫಸಲು ಕೂಡ ನೆಲಕಚ್ಚಿತ್ತು. ಇದೀಗ ಮತ್ತೆ ಮಳೆಯಾಗುತ್ತಿರುವುದರಿಂದ ಅಲ್ಲಿನ ಬೆಳೆಗಾರರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ನಿವಾಸಿಗಳು ಎಚ್ಚರ ವಹಿಸುವಂತೆ ಸೂಚನೆ:

ಸದ್ಯ ಮಳೆ ಇಳಿಕೆಯಾಗಿದ್ದರೂ ಹಾರಂಗಿ ಜಲಾಶಯಕ್ಕೆ ಸುಮಾರು 11 ಸಾವಿರ ಕ್ಯೂಸೆಕ್ಸ್‌ನಷ್ಟುನೀರು ಹರಿದು ಬರುತ್ತಿದೆ. ಈ ಹಿನ್ನೆಲೆ ಜಲಾಶಯದಿಂದ ಹೊರಹರಿವು ಮುಂದುವರಿಸಲಾಗಿದ್ದು, ಸುಮಾರು 13 ಸಾವಿರದಷ್ಟುನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ನದಿ ಪಾತ್ರದ ನಿವಾಸಿಗಳು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವ​ಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 48.73 ಮಿ.ಮೀ. ಕಳೆದ ವರ್ಷ ಇದೇ ದಿನ 0.08 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2431.77 ಮಿ.ಮೀ, ಕಳೆದ ವರ್ಷ ಇದೇ ಅವ​ಧಿಯಲ್ಲಿ 3782.96 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ 65.60 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 32.23 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 48.37 ಮಿ.ಮೀ. ಸರಾಸರಿ ಮಳೆಯಾಗಿದೆ.

ಕೊಡಗು: ಅಪಾಯ ಮಟ್ಟ ಮೀರಿದ ಕಾವೇರಿ ಹರಿವು

ಹೋಬಳಿವಾರು ವಿವರ: ಮಡಿಕೇರಿ ಕಸಬಾ 30, ನಾಪೋಕ್ಲು 66.80, ಸಂಪಾಜೆ 50.20, ಭಾಗಮಂಡಲ 115.40, ವಿರಾಜಪೇಟೆ ಕಸಬಾ 23.60, ಹುದಿಕೇರಿ 50.40, ಶ್ರೀಮಂಗಲ 55.80, ಪೊನ್ನಂಪೇಟೆ 19.60, ಅಮ್ಮತ್ತಿ 34, ಬಾಳೆಲೆ 10, ಸೋಮವಾರಪೇಟೆ ಕಸಬಾ 56, ಶನಿವಾರಸಂತೆ 49.40, ಶಾಂತಳ್ಳಿ 105.20, ಕೊಡ್ಲಿಪೇಟೆ 52.40, ಕುಶಾಲನಗರ 6.20, ಸುಂಟಿಕೊಪ್ಪ 21 ಮಿ.ಮೀ. ಮಳೆಯಾಗಿದೆ.

ಕಾವೇರಿ ಪ್ರವಾಹ ಇಳಿಮುಖ:

ಕುಶಾಲನಗರ: ಕಳೆದ ಎರಡು ದಿನಗಳಿಂದ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಜನರಲ್ಲಿ ಆತಂಕ ಮೂಡಿಸಿದ್ದ ನದಿ ನೀರಿನ ಪ್ರವಾಹ ಮಟ್ಟಕ್ಷೀಣಿಸಿದೆ. ಕಾವೇರಿ ನದಿಯಲ್ಲಿ ಪ್ರವಾಹ ಮಟ್ಟಇಳಿಕೆ ಕಂಡಿದೆ. ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕ್ಷೀಣಗೊಂಡಿದ್ದು, ಜಲಾವೃತಗೊಂಡ ತಗ್ಗು ಪ್ರದೇಶಗಳಿಂದ ನೀರು ಇಳಿಮುಖಗೊಂಡಿದೆ.

ಮಡಿಕೇರಿ: ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರು ಹೊರಕ್ಕೆ

click me!