ಚಾಮರಾಜನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಹಣ ನೀಡದ ರಾಜ್ಯಸರ್ಕಾರ, ಕೌಲಂದೆ ನಿಲ್ದಾಣದಲ್ಲಿ ಕ್ರಾಸಿಂಗ್‌ಗೆ ಒತ್ತಾಯ

Published : Jan 12, 2026, 06:10 PM IST
chamarajanagar railway station

ಸಾರಾಂಶ

ಚಾಮರಾಜನಗರ ರೈಲ್ವೇ ಯೋಜನೆಗೆ ಶತಮಾನ ತುಂಬಿದರೂ, ನಂಜನಗೂಡು-ಚಾಮರಾಜನಗರ ನಡುವೆ ಕೌಲಂದೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ ಇಲ್ಲದಿರುವುದು ಹೆಚ್ಚಿನ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.  ಇದರ ಜೊತೆಗೆ, ಮೆಟ್ಟುಪಾಳ್ಯಂ ಮತ್ತು ಹೆಜ್ಜಾಲ-ಚಾಮರಾಜನಗರದಂತಹ ದಶಕಗಳ ಬೇಡಿಕೆಯ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ.

ಚಾಮರಾಜನಗರ: ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯ ರೈಲ್ವೇ ಸಂಪರ್ಕ ಯೋಜನೆಗೆ ಶತಮಾನೋತ್ಸವದ ಸಂಭ್ರಮ ಕಂಡಿದ್ದು, ನಂಜನಗೂಡು ಮತ್ತು ಚಾಮರಾಜನಗರ ನಡುವೆ ರೈಲ್ವೆ ಕ್ರಾಸಿಂಗ್‌ ವ್ಯವಸ್ಧೆ ಇಲ್ಲದಿರುವುದರಿಂದ ಹೆಚ್ಚಿನ ರೈಲು ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಮೀಟರ್‌ ಗೇಜ್‌ ಇದ್ದಾಗ ನಂಜನಗೂಡು ಮತ್ತು ಚಾಮರಾಜನಗರ ನಡುವೆ ಕೌಲಂದೆ ನಿಲ್ದಾಣದಲ್ಲಿ ರೈಲು ಕ್ರಾಸಿಂಗ್‌ ವ್ಯವಸ್ಧೆ ಇತ್ತು. ಮೀಟರ್‌ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾದ ಬಳಿಕ ನಂಜನಗೂಡು ಮತ್ತು ಚಾಮರಾಜನಗರ ನಡುವೆ 35 ಕಿ.ಮೀ. ಅಂತರದಲ್ಲಿ ಎಲ್ಲೂ ಕ್ರಾಸಿಂಗ್‌ ವ್ಯವಸ್ಧೆ ಇಲ್ಲದಿರುವುದರಿಂದ ಎದುರುಗಡೆಯಿಂದ ರೈಲು ಬರಲು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಧಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಕೌಲಂದೆ ನಿಲ್ದಾಣದಲ್ಲಿ ಕ್ರಾಸಿಂಗ್ ವ್ಯವಸ್ಧೆಯಾದರೆ ರಾಜ್ಯದ ದಕ್ಷಿಣದ ಗಡಿ ಜಿಲ್ಲಾ ಕೇಂದ್ರವಾದ ಚಾಮರಾಜನಗರ ಮತ್ತು ನಂಜನಗೂಡು ನಡುವೆ ಹೆಚ್ಚಿನ ರೈಲು ಓಡಾಟಕ್ಕೆ ಅನುಕೂಲವಾಗಲಿದೆ.

ಮಾಜಿ ಸಂಸದ ಪ್ರತಾಪ್‌ ಸಿಂಹ ಒತ್ತಡ

ಈ ನಿಟ್ಟಿನಲ್ಲಿ ಈ ಹಿಂದೆ ಮೈಸೂರು ಸಂಸದರಾಗಿದ್ದ ಪ್ರತಾಪ್‌ ಸಿಂಹ ರೈಲ್ವೆ ಸಲಹಾ ಸಮಿತಿ ಸಭೆಗಳಲ್ಲಿ ಹಲವು ಬಾರಿ ಕೌಲಂದೆ ರೈಲು ನಿಲ್ದಾಣದಲ್ಲಿ ಕ್ರಾಸಿಂಗ್‌ ವ್ಯವಸ್ಧೆಯಾಗಬೇಕು ಎಂದು ಪ್ರಸ್ತಾಪ ಮಾಡಿದ್ದರು. ಇದೀಗ ರಾಜ್ಯದವರೆ ಆದ ವಿ. ಸೋಮಣ್ಣ ಅವರು ರಾಜ್ಯ ರೈಲ್ವೆ ಸಚಿವರಾಗಿದ್ದು, ಕೌಲಂದೆಯಲ್ಲಿ ಕ್ರಾಸಿಂಗ್‌ ವ್ಯವಸ್ಧೆಗೆ ಅನುಕೂಲ ಕಲ್ಪಿಸಿಕೊಟ್ಟರೆ ಚಾಮರಾಜನಗರ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ರೈಲು ಪ್ರಯಾಣಿಕರ ಸಲಹಾ ಸಮಿತಿ ಮಾಜಿ ಸದಸ್ಯರಾದ ಮೈಸೂರಿನ ಎಂ.ವಿ. ಚಂದ್ರಮೋಹನ್‌.

ಮೆಟ್ಟುಪಾಳ್ಯಂಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಚಾಮರಾಜನಗರದ ಮೂಲಕ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಯು ಹಲವು ದಶಕಗಳಿಂದಲೂ ಜಿಲ್ಲೆಯ ಜನತೆಯ ಬೇಡಿಕೆ ಆಗಿದೆ. ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.

ಚಾಮರಾಜನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದ ರಾಜ್ಯ

ಇದಲ್ಲದೆ ಹೆಜ್ಜಾಲದಿಂದ ಕನಕಪುರ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಚಾಮರಾಜನಗರ ನೂತನ ರೈಲು ಮಾರ್ಗ ನಿರ್ಮಾಣ ಕಾರ್ಯ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದು, ಕೇಂದ್ರ ಸರ್ಕಾರದ ಈ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದರೂ, ರಾಜ್ಯ ಸರ್ಕಾರ ಭೂ ಸ್ವಾಧೀನ ಮತ್ತು ತನ್ನ ಪಾಲಿನ ಹಣ ಬಿಡುಗಡೆಗೆ ಮುಂದಾಗದಿರುವುದರಿಂದ ನೆನಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯ ಸಾಧಿಸಿ ಹೆಜ್ಜಾಲ - ಚಾಮರಾಜನಗರ ನೂತನ ರೈಲು ಮಾರ್ಗದ ಯೋಜನೆಗೆ ಮುಂದಾದರೆ ಗಡಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ.

PREV
Read more Articles on
click me!

Recommended Stories

ಚಿಕ್ಕೋಡಿ: 90 ವರ್ಷದ ವೃದ್ಧೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ; ರಸ್ತೆಗಿಳಿದ ಅನ್ನದಾತರು!
ಅಂಕೋಲಾದ ಸುಂಕಸಾಳದಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ದರೋಡೆಗೆ ವಿಫಲ ಯತ್ನ: ಸ್ಟ್ರಾಂಗ್ ರೂಮ್ ಒಡೆಯಲಾಗದೆ ಕಳ್ಳರು ಪರಾರಿ