
ತುಮಕೂರು (ಜ.12): 'ಶಾಲೆಗೆ ಹೋಗಿ ಸರಿಯಾಗಿ ಓದು' ಎಂದು ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ 8ನೇ ತರಗತಿಯ ಬಾಲಕನೊಬ್ಬ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಹೋಬಳಿಯಲ್ಲಿ ಸಂಭವಿಸಿದೆ.
ಮೃತ ಬಾಲಕನನ್ನು ಚೆನ್ನಕಾಟಯ್ಯನ ಗುಡ್ಲು ನಿವಾಸಿ ಜಗದೀಶ್ (14) ಎಂದು ಗುರುತಿಸಲಾಗಿದೆ. ಈತ ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಕಳೆದ ಕೆಲವು ದಿನಗಳಿಂದ ಜಗದೀಶ್ ತನ್ನ ತಾಯಿಯ ತವರ ಮನೆಗೆ ರಜೆಯ ಮೇಲೆ ಹೋಗಿದ್ದನು. ಶನಿವಾರವಷ್ಟೇ ಊರಿಗೆ ವಾಪಸ್ಸಾಗಿದ್ದ ಈತನಿಗೆ ತಂದೆ ರಮೇಶ್ ಅವರು, 'ಇನ್ನು ಮುಂದೆ ಶಾಲೆ ತಪ್ಪಿಸಬೇಡ, ಪ್ರತಿದಿನ ಶಾಲೆಗೆ ಹೋಗು' ಎಂದು ಬುದ್ಧಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು.
ತಂದೆಯ ಮಾತಿನಂತೆ ಅಂದು ಶಾಲೆಗೆ ತೆರಳಿದ್ದ ಜಗದೀಶ್, ಶಾಲೆಯ ಅವಧಿ ಮುಗಿದ ಬಳಿಕ ತನ್ನ ಗೆಳೆಯನೊಂದಿಗೆ ಮನೆಗೆ ಹಿಂತಿರುಗುತ್ತಿದ್ದನು. ಗೊಲ್ಲರಹಟ್ಟಿ ಸಮೀಪದ ಬಾವಿಯ ಬಳಿ ಬಂದಾಗ, ಜಗದೀಶ್ ತನ್ನ ಗೆಳೆಯನಿಗೆ 'ನೀನು ಮುಂದೆ ಹೋಗು, ನಾನು ಬರುತ್ತೇನೆ' ಎಂದು ಹೇಳಿ ಆತನನ್ನು ಕಳುಹಿಸಿದ್ದಾನೆ. ಗೆಳೆಯ ಕಣ್ಣ ಮರೆಯಾಗುತ್ತಿದ್ದಂತೆ ತನ್ನ ಚಪ್ಪಲಿ ಮತ್ತು ಶಾಲಾ ಬ್ಯಾಗ್ ಅನ್ನು ಬಾವಿಯ ಪಕ್ಕದಲ್ಲೇ ಇಟ್ಟು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಶನಿವಾರ ಮಧ್ಯಾಹ್ನ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ಬಾವಿಯ ಪಕ್ಕದಲ್ಲಿ ಬ್ಯಾಗ್ ಮತ್ತು ಚಪ್ಪಲಿ ಕಂಡುಬಂದಾಗ ವಿಷಯ ತಿಳಿದು ಆತಂಕಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಹೊರತೆಗೆದಿದ್ದಾರೆ. ಕೇವಲ ಶಾಲೆಗೆ ಹೋಗುವಂತೆ ಹೇಳಿದ್ದಕ್ಕೇ ಬಾಲಕ ಇಷ್ಟು ದೊಡ್ಡ ನಿರ್ಧಾರ ಕೈಗೊಂಡನೆ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೆಲಸ ಮಾಡಿ ಜೀವನ ಕಟ್ಟಿಕೊಳ್ಳಬೇಕಿದ್ದ ಬಾಲಕ ಸಣ್ಣ ವಿಚಾರಕ್ಕೆ ಬಾರದ ಲೋಕಕ್ಕೆ ಪಯಣಿಸಿರುವುದು ಗ್ರಾಮಸ್ಥರಲ್ಲಿ ಶೋಕ ಸಾಗರ ಮೂಡಿಸಿದೆ.