ಎದೆನೋವೆಂದು ಆಸ್ಪತ್ರೆಗೆ ಬಂದರೆ ಡಾಕ್ಟ್ರೇ ಇರಲಿಲ್ಲ; ಹೃದಯಾಘಾತ ಹೊಡೆತಕ್ಕೆ ಪ್ರಾಣ ಉಳಿಯಲಿಲ್ಲ!

Published : Jul 07, 2025, 06:40 PM IST
Raichur youth Heart Attack

ಸಾರಾಂಶ

ಮಸ್ಕಿ  ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಎದೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ಸಿಂಧನೂರಿಗೆ ಹೋಗುವಂತೆ ನರ್ಸ್ ತಿಳಿಸಿದ್ದಾರೆ. ಸಿಂಧನೂರಿಗೆ ಹೋಗುವ ದಾರಿ ಮಧ್ಯೆ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಯಚೂರು (ಜು.07): ಎದೆ ನೋವುತ್ತಿದೆ ಸ್ವಲ್ಪ ಪರೀಕ್ಷೆ ಮಾಡಿ ಜೀವ ಉಳಿಸಿ ಡಾಕ್ಟ್ರೇ ಎಂದು ಸರ್ಕಾರಿ ಆಸ್ಪತ್ರೆಗೆ ಬಂದರೆ ಅಲ್ಲಿ ಡ್ಯೂಟಿ ಡಾಕ್ಟರೇ ಇಲ್ಲ. ನಿಮಗೆ ಇಲ್ಲಿ ಚಿಕಿತ್ಸೆ ಸಿಗೊಲ್ಲ ಸಿಂಧನೂರಿಗೆ ಹೋಗಿ ಎಂದು ಹೇಳಿ ಸಾಗ ಹಾಕಿದ್ದಾರೆ. ಆದರೆ, ಡಾಕ್ಟರ್ ತನ್ನ ಜೀವ ಉಳಿಸುತ್ತಾರೆ ಎಂದು ಬಂದಿದ್ದ ವ್ಯಕ್ತಿಯನ್ನು ಮನೆಯವರು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ. ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದರೂ ಆತನ ಜೀವ ಉಳಿಯುತ್ತಿತ್ತು. ಆದರೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ದಾರಿ ಮಧ್ಯದಲ್ಲಿ ಹೃದಯಾಘಾತವಾಗಿ ಯುವಕ ಪ್ರಾಣ ಬಿಟ್ಟಿದ್ದಾನೆ.

ಈ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಪಗಡದಿನ್ನಿ ಕ್ಯಾಂಪ್‌ನಲ್ಲಿ ನಡೆದಿದೆ. ಶರಣಬಸವ (32) ಮೃತ ವ್ಯಕ್ತಿಯಾಗಿದ್ದಾನೆ. ತೀವ್ರವಾಗಿ ಎದೆ ನೋವುತ್ತಿದೆ, ಇದು ಹೃದಯಾಘಾತದ ಲಕ್ಷಣಗಳೇ ಇರಬೇಕು ಎಂದು ಎಚ್ಚೆತ್ತುಕೊಂಡ ಯುವಕ ಶರಣಬಸವ ತಕ್ಷವೇ ಹಳ್ಳಿಯಿಂದ ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾನೆ. ಆದರೆ, ಅಲ್ಲಿ ಶರಣಬಸವನಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕೂ ವೈದ್ಯರೇ ಇರಲಿಲ್ಲ. ನೀವು ಇಲ್ಲಿ ವೈದ್ಯರಿಗಾಗಿ ಕಾಯದೇ ಸಿಂಧನೂರು ದೊಡ್ಡ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಹೇಳಿ ನರ್ಸ್ ಒಬ್ಬರು ಕೈತೊಳೆದುಕೊಂಡಿದ್ದಾರೆ.

ಆದರೆ, ಈಗಾಗಲೇ ಎದೆನೋವಿನಿಂದ ಬಳಲುತ್ತಿದ್ದ ಶರಣಬಸವನಿಗೆ ಸಮಾಧಾನ ಆಗುವಂತಹ ಪ್ರಾಥಮಿಕ ಚಿಕಿತ್ಸೆಯೂ ಸಿಗದ ಕಾರಣ, ಮನೆಯವರಿಗೆ ಕರೆ ಮಾಡಿ ಆಂಬುಲೆನ್ಸ್ ಮಾಡಿಕೊಂಡು ಸಿಂಧನೂರಿಗೆ ಹೋಗೋಣ ಎಂದು ಹೇಳಿದ್ದಾನೆ. ಆಗ ಮನೆಯವರು ಆಂಬುಲೆನ್ಸ್ ರೆಡಿ ಮಾಡಿಕೊಂಡು ಸಿಂಧನೂರು ದೊಡ್ಡ ಆಸ್ಪತ್ರೆಗೆ ಹೋಗಲು ಅಣಿಗೊಳಿಸಿದ್ದಾರೆ. ಇನ್ನು ಲಗುಬಗೆಯಲ್ಲಿ ದೊಡ್ಡ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿಯೇ ತೀವ್ರವಾಗಿ ಎದೆನೋವಿನಿಂದ ಬಳಲಿದ ಶರಣಬಸವ ಮನೆಯವರ ಮಡಿಲಲ್ಲಿಯೇ ಒದ್ದಾಡಿ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾನೆ.

ಮಸ್ಕಿ ತಾಲೂಕು ಆಸ್ಪತ್ರೆ ಆಗಿದ್ದರೂ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕೂ ಒಬ್ಬ ವೈದ್ಯರು ಇರಲಿಲ್ಲ. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕಳುಹಿಸಿದ್ದರೆ ಯುವಕನ ಜೀವ ಉಳಿಯುತ್ತಿತ್ತು. ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಿರುವುದೇ ಶರಣಬಸವನ ಸಾವಿಗೆ ಕಾರಣ ಎಂದು ಮನೆಯವರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಎಂದಮೇಲೆ ಡ್ಯೂಟಿ ಡಾಕ್ಟರ್ ಎಮರ್ಜೆನ್ಸಿ ರೋಗಿಗಳನ್ನು ನೋಡದೇ ಎಲ್ಲಿ ಹೋಗಿರುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೊಸಕೋಟೆಯಲ್ಲಿಯೂ ಆಸ್ಪತ್ರೆಗೆ ಬಂದು ಸಾವನ್ನಪ್ಪಿದ ವ್ಯಕ್ತಿ:

ಕಳೆದೊಂದು ವಾರದ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವ್ಯಕ್ತಿಯೊಬ್ಬರು ನನಗೆ ಎದೆ ನೋಯುತ್ತಿದೆ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಸ್ವತಃ ತಾವೇ ನಿಂತುಕೊಂಡು ವೈದ್ಯರ ಚೀಟಿ ಬರೆಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಟ್ರೆಚರ್ ಮೇಲೆ ಮಲಗಿದ್ದಾರೆ. ಆದರೆ, ಆಸ್ಪತ್ರೆಯ ಬೆಡ್‌ಗೆ ಅವರನ್ನು ಶಿಫ್ಟ್ ಮಾಡಿ ಚಿಕಿತ್ಸೆ ಆರಂಭಿಸುತ್ತಿದ್ದಂತೆ ಕಾರ್ಡಿಯಾಕ್ ಅರೆಸ್ಟ್ ಆಗಿ ಆಸ್ಪತ್ರೆ ಬೆಡ್ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.

ಹೃದಯಾಘಾತ ವರದಿ ಪಡೆದ ಸರ್ಕಾರ:

ಇನ್ನು ಎಲ್ಲ ಜಿಲ್ಲೆಗಳಲ್ಲಿಯೂ ಹೃದಯಾಘಾತದ ಸಾವು ಹೆಚ್ಚಾಗಿ ವರದಿಯಾಗುತ್ತಿದ್ದು, ಸರ್ಕಾರ ಈ ಸಂಬಂಧ ಅಧ್ಯಯನ ವರದಿಯನ್ನು ತರಿಸಿಕೊಂಡಿದೆ. ಇದರಲ್ಲಿ ಜೀವನ ಶೈಲಿ, ಬೊಜ್ಜು, ಸ್ಥೂಲಕಾಯ, ದೈಹಿಕ ಶ್ರಮ ಇಲ್ಲದಿರುವುದೇ ಹೃದಯಾಘಾತಕ್ಕೆ ಕಾರಣವೆಂದು ತಿಳಿಸಿದೆ. ರಾಜ್ಯ ಸರ್ಕಾರದಿಂದ ಹಠಾತ್ ಹೃದಯಾಘಾತ ಸಾವುಗಳ ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸಲು ನಿಯೋಜಿಸಿದ್ದ ತಂಡದಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವರದಿ ಸ್ವೀಕಾರ ಮಾಡಿದ್ದಾರೆ. ಇದರಲ್ಲಿ ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ ಎಂದು ತಿಳಿಸಲಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ