
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯ ಶಂಕೆಯಿಂದ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಳೆದ ಹತ್ತು ದಿನಗಳ ಹಿಂದೆ ವಾಂತಿ-ಭೇದಿಯ ಲಕ್ಷಣಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ಗ್ರಾಮದ ಮೂವರು ವ್ಯಕ್ತಿಗಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ವಾಂತಿ-ಭೇದಿಯ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಕಾಣಿಸಿಕೊಳ್ಳುತ್ತಿದೆ
ಮೃತರಾದವರು ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60) ಮತ್ತು ರಾಮಣ್ಣ ಪೂಜಾರಿ (50) ಎಂದು ಗುರುತಿಸಲಾಗಿದೆ. ಈ ಮೂವರು ಬೇರೆ ಬೇರೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ಥಳೀಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಇನ್ನೂ 20 ಮಂದಿ ಗ್ರಾಮಸ್ಥರು ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ, ಆದರೆ ಅವರ ಆರೋಗ್ಯದಲ್ಲಿ ಕೆಲವು ಚೇತರಿಕೆ ಕಂಡುಬರುತ್ತಿದೆ.
ಘಟನಾ ಸ್ಥಳಕ್ಕೆ ಸುರಪುರ ಡಿಹೆಚ್ಒ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಂತಿ-ಭೇದಿ ಪ್ರಕರಣದ ಕುರಿತು ಡಿಹೆಚ್ಒ ಡಾ. ಮಹೇಶ ಬಿರಾದಾರ ಅವರು ವರದಿ ಕೇಳಿದ್ದಾರೆ. ಈ ಘಟನೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಪ್ಪನಟಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಮೂವರು ವ್ಯಕ್ತಿಗಳ ಸಾವಿಗೆ ಕಾರಣವನ್ನು ಪ್ರಶ್ನಿಸಿದರು.
ಗ್ರಾಮಸ್ಥರು ಪೈಪ್ ಲೀಕೆಜ್ ಸಮಸ್ಯೆ ಬಗ್ಗೆ ಸಚಿವರಿಗೆ ದೂರು ಸಲ್ಲಿಸಿದರು. ಕುಡಿಯುವ ನೀರಿನ ಪೈಪಿನಲ್ಲಿ ಸೋರಿಕೆ ಇರುವುದರಿಂದ ನೀರು ಕಲುಷಿತವಾಗುತ್ತಿರುವಂತೆ ಗ್ರಾಮಸ್ಥರು ಆರೋಪಿಸಿದರು. ಪಂಚಾಯತ್ ಅಧಿಕಾರಿಗಳು ಪೈಪ್ ಲೀಕೆಜ್ ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ದರ್ಶನಾಪುರ, “ಪೈಪ್ ಲೀಕೆಜ್ ಸಮಸ್ಯೆ ಇದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, “ಪೈಪ್ ಹೊಡೆಯುತ್ತಿದ್ರು, ಪಂಚಾಯತ್ ನವರು ಏನು ಮಾಡ್ತಿದ್ದಾರೆ?” ಎಂದು ಇಒ ಬಸವರಾಜ ಸಜ್ಜನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಯಾದಗಿರಿ ಡಿಹೆಚ್ಒ ಡಾ. ಮಹೇಶ ಬಿರಾದಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡುತ್ತಾ, “ತಿಪ್ಪನಟಗಿ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ವರದಿಯಾಗಿದ್ದು, ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಸಾವಿಗೀಡಾದವರು ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ ಹಾಗೂ ಮೆದುಳಿನ ಸಮಸ್ಯೆಗಳಿಂದ ಬಳಲುತ್ತಿದ್ದವರು. ವಾಂತಿ-ಭೇದಿಯಿಂದ ಸಾವು ನಿಖರ ಕಾರಣವಲ್ಲ,” ಎಂದು ತಿಳಿಸಿದರು.
“ವಾಂತಿ-ಭೇದಿಯಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಲಾಗಿದೆ. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ. ಸಾವಿನ ನಿಖರ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ. ಹತ್ತು ದಿನಗಳ ಹಿಂದೆ ಕುಡಿಯುವ ನೀರಿನ ಮಾದರಿ ಪರೀಕ್ಷೆ ನಡೆಸಲಾಗಿತ್ತು ಮತ್ತು ನೀರು ಕುಡಿಯಲು ಯೋಗ್ಯ ಎಂದು ರಿಪೋರ್ಟ್ ಬಂದಿದೆ. ಕೊಳವೆ ಬಾವಿಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ರಿಪೇರಿ ಮಾಡಲಾಗುತ್ತದೆ,” ಎಂದು ಡಾ. ಬಿರಾದಾರ ಹೇಳಿದರು.
“ಸಾವಿಗೀಡಾದವರು ವಾಂತಿ-ಭೇದಿಯಿಂದ ಬಳಲುತ್ತಿದ್ದರೂ, ಸಾವಿನ ನಿಖರ ಕಾರಣ ತಿಳಿಯಲು ಸಂಪೂರ್ಣ ತನಿಖೆ ಬಳಿಕ ಸತ್ಯ ಹೊರಬರುತ್ತದೆ,” ಎಂದು ಡಿಹೆಚ್ಒ ಮಹೇಶ ಬಿರಾದಾರ ಸ್ಪಷ್ಟಪಡಿಸಿದರು.