ಹನುಮ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲು ನೀರು ಹೊತ್ತು ತರುತ್ತಿದ್ದ ಹನುಮ ಮಾಲಾಧಾರಿಗಳ ಮೇಲೆ ಮಿನಿ ಲಾರಿಯನ್ನು ಹರಿಸಲಾಗಿದ್ದು, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದೆ.
ರಾಯಚೂರು (ಏ.23): ಹನುಮ ಜಯಂತಿ ಹಿನ್ನೆಲೆಯಲ್ಲಿ ಪೂಜೆ ಮಾಡುತ್ತಿದ್ದ ಐವರು ಹನುಮ ಮಾಲಾಧಾರಿಗಳು ನೀರು ತುಂಬಿಕೊಂಡು ಬರಲು ಹೋದಾಗ ಕೋಳಿ ತುಂಬಿಸಿಕೊಂಡು ವೇಗವಾಗಿ ಹೋಗುತ್ತಿದ್ದ ಲಾರಿ ಚಾಲಕ ಹನುಮ ಮಾಲಾಧಾರಿಗಳ ಮೇಲೆ ಹರಿಸಿದ್ದಾರೆ. ಇದರಿಂದ ಮೂವರು ಹನುಮ ಮಾಲಾಧಾರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ರಾಯಚೂರು ಜಿಲ್ಲೆ ಶಕ್ತಿನಗರದ ಯಾದವ್ ಕ್ರಾಸ್ ಬಳಿ ಘಟನೆ ನಡೆದಿದೆ. ಹನುಮಾನ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡುವುದಕ್ಕಾಗಿ ಹನುಮ ಮಾಲಾಧಾರಿಗಳು ಕೊಡ ತೆಗೆದುಕೊಂಡು ನೀರು ತರಲು ಹೋಗಿದ್ದರು. ಕೋಳಿಯನ್ನು ತುಂಬಿಕೊಂಡು ಬರುತ್ತಿದ್ದ ಮಿನಿ ಲಾರಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹನುಮ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ. ಅದು ಕೂಡ ಐವರೂ ಹನುಮ ಮಾಲಾಧಾರಿಗಳ ಮೇಲೆ ವಾಹನದಿಂದ ಡಿಕ್ಕಿ ಹೊಡೆಸಲಾಗಿದೆ. ವಾಹನದ ಗುದ್ದಿದ ರಭಸಕ್ಕೆ ಮಾಲಾಧಾರಿಗಳ ದೇಹ ಮೀಟರ್‌ಗಟ್ಟಲೇ ದೂರ ಹೋಗಿ ಬಿದ್ದಿದೆ.
ಸಚಿವ ತಂಗಡಗಿಗೆ ಹನುಮಮಾಲೆ ತೊಡಿಸಿದ ಆರ್‌ಎಸ್‌ಎಸ್ ಮುಖಂಡರು: ಐದು ದಿನಗಳ ವ್ರತಾಚರಣೆ
ಈ ಘಟನೆಯಲ್ಲಿ ತೀವ್ರ ರಕ್ತಸ್ರಾವ ಉಂಟಾದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಗೆ, ಬಾಕಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮೃತರನ್ನು ಅಯ್ಯನಗೌಡ (28), ಮಹೇಶ್ (22) ಹಾಗೂ ಉದಯ್ ಕುಮಾರ್ (28) ಎಂದು ಗುರುತಿಸಲಾಗಿದೆ. ಇನ್ನು ರಮೇಶ್ ಮತ್ತು ಭೂಷಣ ಎಂಬುವರಿಗೆ ಗಂಭೀರ ಗಾಯವಾಗಿದೆ. ಎಲ್ಲ ಮೃತರು ರಾಯಚೂರು ತಾಲೂಕಿನ ಹೆಗಸನಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನೆಯ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಶಕ್ತಿ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ.
ರಾಮಭಕ್ತ ಹನುಮಂತನನ್ನು ಭಜರಂಗಬಲಿ ಎಂದು ಕರೆಯೋದ್ಯಾಕೆ?
ಕೋಳಿ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಡಿಕ್ಕಿ ಹೊಡೆದಿದ್ದು, ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದಂತೆ ವಾಹನದ ಚಾಲಕ ಪರಾರಿ ಆಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಶಕ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.