
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಾಣಂತಿಯರ ಸರಣಿ ಸಾವುಗಳು ರಾಜ್ಯದಲ್ಲಿ ಸಂಭವಿಸಿದ್ದವು. ಹೀಗಾಗಿ ಸರ್ಕಾರ ಬಾಣಂತಿಯ ಆರೈಕೆ ಮತ್ತು ನವಜಾತ ಶಿಶುಗಳು ಹಾಗೂ ಮಕ್ಕಳ ಆರೋಗ್ಯ ಕಾಪಾಡಲು ಹತ್ತಾರು ಯೋಜನೆಗಳು ಜಾರಿಗೆ ತಂದಿದೆ. ರಾಯಚೂರು ನಗರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇಲ್ಲದೆ ಜನರು ರಿಮ್ಸ್ ಮೆಡಿಕಲ್ ಕಾಲೇಜಿಗೆ ಹೆರಿಗೆ ಹೋಗಬೇಕಾಗಿತ್ತು. ರಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ 25-30 ಹೆರಿಗೆಗಳು ಆಗುತ್ತಿದ್ದವು. ಹೆರಿಗೆಯಾದ ಮಹಿಳೆಯರಿಗೆ ಸೂಕ್ತ ಸೌಲಭ್ಯ ಸಿಗದೇ ಬಾಣಂತಿಯರು ಮತ್ತು ನವಜಾತ ಶಿಶು ಪರದಾಟ ನಡೆಸುವ ಸ್ಥಿತಿಯೂ ಇತ್ತು. ರಾಯಚೂರು ನಗರದ ಜನರು ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ರು. ಅದರ ಭಾಗವಾಗಿ ರಾಯಚೂರು ನಗರದಲ್ಲಿ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾದ ಸಾಮಗ್ರಿಗಳು ಹಾಗೂ ವೈದ್ಯರು ಮತ್ತು ಸಿಬ್ಬಂದಿ ಇಲ್ಲದಕ್ಕೆ ಆಸ್ಪತ್ರೆ ಕಾರ್ಯಾರಂಭ ಮಾಡಿರಲಿಲ್ಲ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬಳಿಕ 2024 ಆಗಸ್ಟ್ 15ರಂದು 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯಾರಂಭ ಶುರು ಮಾಡಿತ್ತು. ಈ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿ ಅಂತೆ ಕಾರ್ಯ ಶುರು ಮಾಡಿದೆ.
ಸರ್ಕಾರಿ ಆಸ್ಪತ್ರೆ ಅಂದ್ರೆ ಕ್ಲೀನ್ ಇರಲ್ಲ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೇರ್ ಮಾಡಲ್ಲ ಅಂತ ಹತ್ತಾರು ಆರೋಪಗಳು ಇರುತ್ತವೆ. ಆದ್ರೆ ರಾಯಚೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಈ ಎಲ್ಲಾ ಆರೋಪಗಳಿಗೆ ಮುಕ್ತವಾಗಿದೆ. ಈ ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ.ಹೀಗಾಗಿ ಈ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಒಳ ಮತ್ತು ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಾರೆ. ಮುಖ್ಯವಾಗಿ ಹೇಳಬೇಕು ಅಂದ್ರೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿಶೇಷ ಕಾಳಜಿವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೇರ್ ಮಾಡುವಂತೆ ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ಕೇರ್ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಈ ತಿಂಗಳಲ್ಲಿ 200ಕ್ಕೂ ಹೆಚ್ಚು ಹೆರಿಗೆಗಳು ಆಗಿವೆ. ಅಲ್ಲದೇ ಸರ್ಕಾರಿ ಆಸ್ಪತ್ರೆ ಆಗಿದ್ರೂ ಖಾಸಗಿ ಆಸ್ಪತ್ರೆ ರೀತಿಯಲ್ಲಿ ರೋಗಿಗಳಿಗೆ ಸ್ಪೆಷಲ್ ಕೇರ್ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗೆ ಹೋಗುವರು ಸಹ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಹುಡುಕಿಕೊಂಡು ಬರುತ್ತಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಧ್ಯೇಯವಾಕ್ಯದಂತೆ ರಾಯಚೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೆಲಸ ಮಾಡುತ್ತಿದೆ ಅಂದ್ರೆ ತಪ್ಪಾಗಲಾರದು. ಈ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 1,209 ಹೆರಿಗೆಗಳು ಆಗಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ನಿರ್ವಹಣೆ, ಮಕ್ಕಳ ಆರೈಕೆ ಚಿಕಿತ್ಸೆ ನಿರಂತರವಾಗಿ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ನಾಲ್ವರು ಪ್ರಸೂತಿ ತಜ್ಞರು, ಮೂವರು ಮಕ್ಕಳು ತಜ್ಞರು, ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಬಡ ರೋಗಿಗಳಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಆಸ್ಪತ್ರೆ ಪದೇ ಪದೇ ಡಿಎಚ್ ಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಬಡ ರೋಗಿಗಳ ಪಾಲಿಗೆ ಈ ಆಸ್ಪತ್ರೆ ಸಂಜೀವಿನಿ ಅಂತೆ ಕೆಲಸ ಮಾಡುತ್ತಿದೆ.