
ಬೆಂಗಳೂರು (ಅ.30): ಉದ್ಯಾನನಗರಿಯಲ್ಲಿ ಕಟ್ಟಡದ ನವೀಕರಣದ ವೇಳೆ ಎದುರು ಕಟ್ಟಿದ್ದ ಸೆಂಟ್ರಿಂಗ್ ಕುಸಿದ ಓವರ್ ಕಾರ್ಮಿಕ ದಾರುಣ ಸಾವು ಕಂಡಿದ್ದಾರೆ. ಮೃತ ಕಾರ್ಮಿಕನನ್ನು ಯೂಸೂಫ್ ಶರೀಫ್ ಎಂದು ಗುರುತಿಸಲಾಗಿದೆ. ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಕಟ್ಟಡ ಪಕ್ಕದಲ್ಲಿ ಟಿ ಕುಡಿಯುತ್ತಿದ್ದ ಗಂಡ ಹೆಂಡತಿ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಕಾಶ್ ಹಾಗೂ ತನುಜಾ ಎಂದು ಗುರುತಿಸಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಆಕಾಶ್ ಹಾಗೂ ತನುಜಾ ಮದುವೆಯಾಗಿದ್ದರು. ಇಂದು ಸಂಜೆ 5.30ಕ್ಕೆ ಚಹಾ ಕುಡಿಯಲು ಸ್ಥಳಕ್ಕೆ ಬಂದಿದ್ದರು. ಕಟ್ಟಡದ ಕೆಳಭಾಗದಲ್ಲಿದ್ದ ಚಬ್ಬಿ ಚಾಯ್‌ನಲ್ಲಿ ಚಹಾ ಸೇವಿಸಲು ಬಂದಿದ್ದರು. ಈ ವೇಳೆ ಕಟ್ಟಡದ ನವೀಕರಣಕ್ಕೆ ಹಾಕಿದ್ದ ಕಂಬಗಳು ಏಕಾಏಕಿ ಕುಸಿದಿವೆ. ಕಾರ್ಮಿಕ ಯೂಸೂಫ್ ಮೇಲಿಂದ ಕೆಳಗೆ ಬಿದ್ದು ಕಣ್ಣೆದುರಲ್ಲೇ ಮೃತಪಟ್ಟಿದ್ದಾನೆ.
ಇನ್ನು ಚಹಾ ಕುಡಿಯುತ್ತಿದ್ದ ತನುಜಾಗೆ ಬೆನ್ನು ಮೂಳೆ ಮುರಿದಿದ್ದರೆ, ಆಕಾಶ್ ಅವರ ಕೈಗೆ ಗಾಯವಾಗಿದೆ. ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯೂಸೂಫ್ ಶರೀಫ್ ಮೃತದೇಹ ಬೋರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸ್ಪೇಸ್ ಆನ್ ಅರ್ಥ್ ಎಂಬ ಕಮರ್ಷಿಯಲ್ ಕಟ್ಟಡದಲ್ಲಿ ಘಟನೆ ನಡೆದಿದೆ. 7 ವರ್ಷಗಳ ಹಿಂದೆ ಕಟ್ಟಡ ನಿರ್ಮಾಣವಾಗಿತ್ತು. ಕಟ್ಟಡದ ಗೋಡೆಗೆ ಲುಕ್ ಗಾಗಿ ಕಲ್ಲಿನಿಂದ ಡಿಸೈನ್ ಮಾಡಲಾಗಿತ್ತು. ಇತ್ತೀಚೆಗೆ ಆ ಕಲ್ಲುಗಳು ಬೀಳುವ ಸ್ಥಿತಿಯಲ್ಲಿದ್ದವು. ಹೀಗಾಗಿ ಆ ಕಲ್ಲುಗಳನ್ನ ತೆಗೆದು ನವೀಕರಣ ಮಾಡುವ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಏಕಾಏಕಿ ಕಲ್ಲುಗಳು ಕಿತ್ತು ಬಂದಿದ್ದು ಕೆಲಸ ಮಾಡಲು ಸಹಾಯಕ್ಕಾಗಿ ನಿರ್ಮಾಣ ಮಾಡಲಾಗಿದ್ದ ಕಟ್ಟಿಗೆಯ ಕಂಬಗಳ ಸೆಂಟ್ರಿಂಗ್ ಕೂಡ ಮುರಿದು ಬಿದ್ದಿದೆ.
ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಪರಶುರಾಮ್ ಭೇಟಿ ಪರಿಶೀಲನೆ ಮಾಡಿದ್ದಾರೆ. ಇಂದು ಸಂಜೆ ಟಿನ್ ಫ್ಯಾಕ್ಟರಿ ಬಳಿ ಹಳೇ ಕಟ್ಟಡ ರಿನೋವೇಷನ್ ನಡೆಯುತ್ತಿತ್ತು. ಅಬ್ದುಲ್ ವಾಜಿದ್ ಎಂಬುವವರಿಗೆ ಸೇರಿದ ಕಟ್ಟಡ. ಅದಕ್ಕೆ ಹಾಕಿದ್ದ ಸಾರುವೆ ಮರ ಮುರಿದು ಬಿದ್ದಿದೆ. ಈ ವೇಳೆ ಯೂಸೂಫ್ ಶರೀಫ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ತನುಜಾ, ಆಕಾಶ್ ಎಂಬುವವರು ಗಾಯಗೊಂಡಿದ್ದಾರೆ. ಮೃತದೇಹ ಸಿವಿ ರಾಮನ್ ಆಸ್ಪತ್ರೆ ಶಿಫ್ಟ್ ಆಗಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.