ಬಳ್ಳಾರಿಯ ಜೀನ್ಸ್ ಘಟಕಕ್ಕೆ ರಾಹುಲ್ ಗಾಂಧಿ ಭೇಟಿ

By Kannadaprabha News  |  First Published Oct 18, 2022, 11:56 AM IST
  • ಜೀನ್ಸ್‌ ಉದ್ಯಮ, ಕಾರ್ಮಿಕರ ಕಷ್ಟಸುಖ ವಿಚಾರಿಸಿದ ರಾಹುಲ್‌
  • ಬಳ್ಳಾರಿ ಕೌಲ್‌ಬಜಾರ್‌ ಪ್ರದೇಶದ ಜೀನ್ಸ್‌ ಯುನಿಟ್‌ಗಳಿಗೆ ಭೇಟಿ
  • ಭದ್ರತೆ ಹಿನ್ನೆಲೆಯಲ್ಲಿ ದರ್ಗಾ ಭೇಟಿ ರದ್ದು, ಜನರ ಜತೆ ಬೆರೆತ ರಾಹುಲ್‌
  • ಕೇಂದ್ರ ಭದ್ರತಾ ಪಡೆಯ ಪರದಾಟ

ಬಳ್ಳಾರಿ (ಅ.18) : ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ನಗರದ ಕೌಲ್‌ಬಜಾರ್‌ ಪ್ರದೇಶದ ಇರ್ಷಾದ್‌ ಅಲಿ ಬಾಬಾ ದರ್ಗಾಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ದರ್ಗಾ ಭೇಟಿ ರದ್ದಾಯಿತು. ಹೀಗಾಗಿ ಕೌಲ್‌ಬಜಾರ್‌ ಪ್ರದೇಶದಲ್ಲಿ ಕೆಲ ಹೊತ್ತು ಸಂಚರಿಸಿದ ರಾಹುಲ್‌, ಜೀನ್ಸ್‌ ಯೂನಿಟ್‌ ಹಾಗೂ ಜೀನ್ಸ್‌ ಕಾರ್ಮಿಕರ ಜೊತೆ ಕೆಲ ಹೊತ್ತು ಸಮಯ ಕಳೆದರು.

ರಾಹುಲ್‌ ಯಾತ್ರೆ ವೇಳೆ ವಿದ್ಯುತ್‌ ತಗುಲಿ ನಾಲ್ವರಿಗೆ ಗಾಯ: ಆಸ್ಪತ್ರೆಗೆ ದಾಖಲು

Tap to resize

Latest Videos

undefined

ತಾಲೂಕಿನ ಸಂಗನಕಲ್ಲು ಬಳಿಯ ವಾಸ್ತವ್ಯ ಕ್ಯಾಂಪ್‌ನಲ್ಲಿ ನಿರ್ಮಿಸಿದ್ದ ಪೋಲಿಂಗ್‌ ಬೂತ್‌ನಲ್ಲಿ ಎಐಸಿಸಿ ಅಧ್ಯಕ್ಷ ಚುನಾವಣೆ ಮತದಾನದ ಬಳಿಕ ಭದ್ರತಾ ವಾಹನಗಳೊಂದಿಗೆ ನೇರವಾಗಿ ಕೌಲ್‌ಬಜಾರ್‌ನ ಇರ್ಷಾದ್‌ ಅಲಿ ಬಾಬಾ ದರ್ಗಾ ಭೇಟಿಗೆಂದು ರಾಹುಲ್‌ ಗಾಂಧಿ ಬಂದಿಳಿದರು. ಆದರೆ, ಇದಕ್ಕೆ ಅವಕಾಶ ನೀಡದ ಎಸ್‌ಪಿಜಿ ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ದರ್ಗಾ ಭೇಟಿಗೆ ಒಪ್ಪಿಗೆ ನೀಡಲಿಲ್ಲ. ದರ್ಗಾ ಬಳಿಯ ಜೀನ್ಸ್‌ ಅಂಗಡಿ ಹಾಗೂ ಮನೆಗೆ ತೆರಳಿದ ಅವರು ಜೀನ್ಸ್‌ ವ್ಯಾಪಾರಿಗಳು ಹಾಗೂ ಕಾರ್ಮಿಕರ ಜೊತೆ ಮಾತನಾಡಿ, ಜೀನ್ಸ್‌ ಉದ್ಯಮ ಕುರಿತು ಮಾಹಿತಿ ಪಡೆದುಕೊಂಡರು.

ಬಳ್ಳಾರಿ ನಗರದಲ್ಲಿ ಎಷ್ಟುಜೀನ್ಸ್‌ ಘಟಕಗಳಿವೆ. ಎಷ್ಟುಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಎಷ್ಟುಕೂಲಿ ಸಿಗುತ್ತದೆ. ಬಳ್ಳಾರಿಯಿಂದ ಬೇರೆ ಯಾವ ರಾಜ್ಯ, ದೇಶಗಳಿಗೆ ಜೀನ್ಸ್‌ ರಫ್ತಾಗುತ್ತದೆ. ವಾರ್ಷಿಕ ವಹಿವಾಟು ಎಷ್ಟಿದೆ. ಬಿಸಿಲು ಹೆಚ್ಚಾಗಿರುವ ಬಳ್ಳಾರಿಯಲ್ಲಿ ಜೀನ್ಸ್‌ ಉಡುಪು ಹೆಚ್ಚಾಗಿ ಬಳಸುತ್ತಾರೆಯೇ? ಜೀನ್ಸ್‌ನಿಂದಾಗಿ ಬಳ್ಳಾರಿ ಖ್ಯಾತಿಯಾಗಿದ್ದು ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ಉದ್ಯಮಿಗಳು ಹಾಗೂ ವ್ಯಾಪಾರಿಗಳಿಂದ ಪಡೆದಕೊಂಡರು.

ದಿನಕ್ಕೆ 7ರಿಂದ 8 ತಾಸು ದುಡಿಯುತ್ತೇವೆ. ಒಂದೊಂದು ಕೆಲಸಕ್ಕೆ ಒಂದೊಂದು ರೀತಿಯ ಕೂಲಿ ನಿಗದಿಯಿದೆ. ವಾರಕ್ಕೊಮ್ಮೆಯಂತೆ ಕೂಲಿ ನೀಡಲಾಗುತ್ತದೆ. ಜೀನ್ಸ್‌ ಉದ್ಯಮದಿಂದಾಗಿ ಬಳ್ಳಾರಿಯ ಸಾವಿರಾರು ಜನ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಜೀನ್ಸ್‌ ವ್ಯಾಪಾರಿ ವಿನೋದ್‌ ಹಾಗೂ ಜಾವೀದ್‌ ಮಾಹಿತಿ ನೀಡಿದರು.

ಜೀನ್ಸ್‌ ಕಟ್ಟಿಂಗ್‌, ಹೊಲಿಗೆ ಯಂತ್ರಗಳ ಬಳಕೆ ಹಾಗೂ ಕಾರ್ಮಿಕರು ಮಾಡುವ ಕೆಲಸವನ್ನು ಕೆಲ ಹೊತ್ತು ಕುತೂಹಲದಿಂದ ವೀಕ್ಷಿಸಿದ ರಾಹುಲ್‌ ಗಾಂಧಿ, ಜೀನ್ಸ್‌ ಉದ್ಯಮಿಗಳು ಹಾಗೂ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ರಾಹುಲ್‌ ಗಾಂಧಿ ಜೀನ್ಸ್‌ ವ್ಯಾಪಾರಿಗಳನ್ನು ಮಾತನಾಡಿಸಿ ಹೊರ ಬರುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವಕರು ರಾಹುಲ್‌ ಗಾಂಧಿ ಅವರಿಗೆ ಹಸ್ತ ಲಾಘವ ಮಾಡಲು ಮುಗಿಬಿದ್ದರು. ಇದೇ ವೇಳೆ ಕೆಲವರು ಮೊಬೈಲ್‌ನಲ್ಲಿ ಸೆಲ್ಫಿ ನೀಡುವಂತೆ ಮನವಿ ಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಯುವಕರು ಗುಂಪುಗೂಡುತ್ತಿದ್ದಂತೆಯೇ ಭದ್ರತಾ ಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸುತ್ತುವರಿದು ಯಾರೂ ಹತ್ತಿರ ಬಾರದಂತೆ ನೋಡಿಕೊಂಡರು.

ಇದರ ನಡುವೆಯೂ ಕೆಲ ಯುವಕರು ಕೈ ಚಾಚಿ ಹಸ್ತಲಾಘವ ಮಾಡಿ ಸಂತಸ ಪಟ್ಟರು. ಜನರನ್ನು ನಿಯಂತ್ರಿಸಲು ಭದ್ರತಾ ಪಡೆ ಸಿಬ್ಬಂದಿ ಹಾಗೂ ನಗರ ಸ್ಥಳೀಯ ಪೊಲೀಸರು ಹರಸಾಹಸ ಪಟ್ಟರು. ಬಳಿಕ ರಾಹುಲ್‌ ಭದ್ರತಾ ಸಿಬ್ಬಂದಿ ಜೊತೆಗೆ ಸಂಗನಕಲ್ಲು ಗ್ರಾಮ ಹೊರ ವಲಯದ ವಾಸ್ತವ್ಯದ ಜಾಗ ತಲುಪಿದರು. ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಪಾಲಿಕೆ ಸದಸ್ಯ ಆಸೀಫ್‌ ಜೊತೆಗಿದ್ದರು.

ಭಾರತ್‌ ಜೋಡೋ ಯಾತ್ರೆ: ಬಳ್ಳಾರಿಯಲ್ಲಿಂದು ರಾಹುಲ್‌ ಭರ್ಜರಿ ರ‍್ಯಾಲಿ

ಎಐಸಿಸಿ ಅಧ್ಯಕ್ಷ ಚುನಾವಣೆಯಿಂದಾಗಿ ಭಾರತ ಜೋಡೋ ಪಾದಯಾತ್ರೆಗೆ ಸೋಮವಾರ ಬ್ರೇಕ್‌ ಇರುವುದರಿಂದ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರು ಕೌಲ್‌ಬಜಾರ್‌ ಪ್ರದೇಶದಲ್ಲಿ ಕೆಲ ಹೊತ್ತು ಸಮಯ ಕಳೆದರು. ಅಕ್ಟೋಬರ್‌ 18ರಂದು ಮಂಗಳವಾರ ಆಂಧ್ರದ ಕಡೆಗೆ ರಾಹುಲ್‌ ನೇತೃತ್ವದ ಭಾರತ ಜೋಡೋ ಯಾತ್ರೆ ಮುಂದುವರಿಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಗಳೂರಿನಿಂದ ಆಗಮಿಸಿ, ನಾಳೆಯ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

click me!