ಪ್ರಕಾಶ್ ಎಂ.ಸುವರ್ಣ
ಮೂಲ್ಕಿ (ಅ.18) : ಆರ್ಥಿಕವಾಗಿ ಸ್ಥಿತಿವಂತರೆಲ್ಲರೂ ದಾನಾಸಕ್ತರಾಗಿರಲೇಬೇಕೆಂದಿಲ್ಲ. ಆದರೆ, ಇಲ್ಲೊಬ್ಬರು 80 ಹರೆಯ ಭಿಕ್ಷುಕಿ ಬೇಡಿ ದೊರಕಿದ ಹಣವನ್ನೇ ಉಳಿಸಿ ಈ ತನಕ ದೇವಸ್ಥಾನಗಳಿಗೆ ಸುಮಾರು 9 ಲಕ್ಷ ರು. ದೇಣಿಗೆ ನೀಡಿ ಮಾದರಿ ಎನಿಸಿದ್ದಾರೆ.
ಬಪ್ಪನಾಡು ದೇಗುಲ ಹಸರು ತಿರುಚಿದ ದುಷ್ಕರ್ಮಿಗಳು!
ಕುಂದಾಪುರ ತಾಲೂಕು ಸಾಲಿಗ್ರಾಮದ 80 ವೃದ್ಧೆ ಅಶ್ವತ್ಥಮ್ಮ ಒಂಟಿ ಮಹಿಳೆ. ಹಲವು ವರ್ಷಗಳಿಂದ ದೇವಸ್ಥಾನ, ಟೋಲ್‌ಗೇಟ್ ಪರಿಸರಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಉಳಿಸಿ ದೇವಸ್ಥಾನಗಳ ಅನ್ನದಾನ ಕೈಂಕರ್ಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಇವರು ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮೊದಲು ಗಂಡ, ಬಳಿಕ ಮಕ್ಕಳು ತೀರಿ ಹೋದ ಬಳಿಕ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆ ತೊರೆದರು. ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಬಳಿ ಭಿಕ್ಷೆ ಬೇಡಲು ಆರಂಭಿಸಿ, ದೇವಾಲಯ ಪರಿಸರದಲ್ಲಿ ವಾಸ್ತವ್ಯ ಹೂಡಿದರು.
ಪಿಗ್ಮಿ ಕಟ್ಟಿಹಣ ಉಳಿಕೆ!: ತನ್ನವರಿಲ್ಲದ ಕೊರಗು ಮರೆಯಲು ತನ್ನಿಂದ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಸಂಕಲ್ಪ ಮಾಡಿದರು. ಗಟ್ಟಿನಿರ್ಧಾರ ಮಾಡಿ ಭಿಕ್ಷೆ ಬೇಡಲು ಆರಂಭಿಸಿ ಭಿಕ್ಷೆಯಲ್ಲಿ ಸಂಗ್ರಹವಾಗುವ ಹಣವನ್ನು ಪ್ರತಿದಿನ ಪಿಗ್ಮಿಗೆ ಹಾಕಲು ಆರಂಭಿಸಿದರು. ಹಗಲಿಡೀ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಪಿಗ್ಮಿಗೆ ಹಾಕತೊಡಗಿದರು. ಸಂಗ್ರಹವಾದ ಮೊತ್ತ ಲಕ್ಷ ತಲುಪಿದಾಗ ಆರಂಭದಲ್ಲಿ ತಾನು ಭಿಕ್ಷೆ ಬೇಡಲು ಆಸರೆ ನೀಡಿದ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿ ಕೃತಾರ್ಥರಾದರು.
ಶಬರಮಲೆಗೂ ಈಕೆಯ ಕೊಡುಗೆ:
ಕೋವಿಡ್ ಅವಧಿಯಲ್ಲಿ ಅಯ್ಯಪ್ಪ ವ್ರತಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಹೋಗಿದ್ದರು. ಆಗ ಅಲ್ಲಿನ ಎರಿಮಲೆ ಪಂಪಾ ಸನ್ನಿಧಾನದಲ್ಲಿ ಅನ್ನದಾನಕ್ಕೆ ರು. 1.5 ಲಕ್ಷ ಕೊಡುಗೆ ನೀಡಿದ್ದಾರೆ. ಬಳಿಕ, ಇದೇ ಮಾದರಿಯಲ್ಲಿ ಗಂಗೊಳ್ಳಿಯ ದೇವಳಕ್ಕೆ 1 ಲಕ್ಷ, ಕಂಚುಗೋಡು ಕುಂದಾಪುರ ದೇವಳಕ್ಕೆ 1 ಲಕ್ಷ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶದ ಸಂದರ್ಭ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಅನ್ನದಾನಕ್ಕೆ 1 ಲಕ್ಷ, ಪೊಳಲಿಯ ಅಖಿಲೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರು. ದೇಣಿಗೆ ನೀಡಿದ್ದಾರೆ.
ಸ್ವಂತಕ್ಕೆ ದುಬಾರಿ ಖರ್ಚುಗಳಿಲ್ಲ:
ಈಕೆ 80ರ ವಯಸ್ಸಿನಲ್ಲಿ ಕೂಡ ಆರೋಗ್ಯವಂತರಾಗಿದ್ದು, ಸ್ವಂತಕ್ಕೋಸ್ಕರ ಹಣ ಖರ್ಚು ಮಾಡುವುದಿಲ್ಲ. ದೇವಳದಲ್ಲಿ ಸಿಗುವ ಅನ್ನ ಪ್ರಸಾದವೇ ಅವರಿಗೆ ಆಹಾರ. ಸಮಾಜ ಇವರ ನಿಸ್ವಾರ್ಥ ಮನೋಭಾವ ಹಾಗೂ ಔದಾರ್ಯವನ್ನು ಗುರುತಿಸಿ ಸನ್ಮಾನಿಸಬೇಕಿದೆ. ಸೋಮವಾರ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವಳದ ಅನ್ನದಾನಕ್ಕೆ 1 ಲಕ್ಷ ಕೊಡುಗೆಯಾಗಿ ನೀಡಿದ್ದಾರೆ.
ಕುದ್ರೋಳಿ ದೇವಸ್ಥಾನ ನಿರ್ಮಾಣದ ಹಿಂದಿದೆ ಐದು ಪೈಸೆ ಭಿಕ್ಷೆಯ ಕಥೆ!
ದೇವಳದ ಅರ್ಚಕ ನರಸಿಂಹ ಭಟ್ ಪ್ರಸಾದ ನೀಡಿ ಹರಸಿದರು. ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿದೇವಳದ ವತಿಯಿಂದ ಗೌರವಿಸಿದರು. ಅರ್ಚಕ ಪ್ರಸಾದ್ ಭಟ್, ಅಕೌಟೆಂಟ್ ಶಿವಶಂಕರ್ ವರ್ಮ, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಇದ್ದರು. ಈ ಮೂಲಕ ಅವರು ಈ ವರೆಗೆ ಸುಮಾರು 9 ಲಕ್ಷ ಹಣವನ್ನು ವಿವಿಧ ದೇವಳಗಳಿಗೆ ಅನ್ನದಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ನನಗೆ ಯಾರೂ ಇಲ್ಲ. ಯಾವುದೇ ಆಕಾಂಕ್ಷೆಗಳಿಲ್ಲ. ನಾನು ಇರುವ ತನಕ ಭಿಕ್ಷೆ ಬೇಡುತ್ತೇನೆ. ಹಾಗೂ ಸಂಗ್ರಹವಾಗುವ ಹಣವನ್ನು ದೇವಳಗಳಲ್ಲಿ ಕೇವಲ ಅನ್ನ ದಾನಕ್ಕೆ ಮಾತ್ರ ನೀಡುತ್ತೇನೆ.
-ಅಶ್ವತ್ಥಮ್ಮ, ಭಿಕ್ಷೆ ಬೇಡಿ ದೇಣಿಗೆ ನೀಡುವ ದಾನಿ.