ಮಂಚಾಲಮ್ಮ ದೇವಿಯ ದರ್ಶನದ ಬಳಿಕ ರಾಯರ ವೃಂದಾವನ ದರ್ಶನ ಪಡೆದುಕೊಂಡು ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ
ರಾಯಚೂರು(ಅ.20): ನಾಳೆ(ಶುಕ್ರವಾರ) ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು(ಗುರುವಾರ) ಮಂತ್ರಾಲಯದಲ್ಲಿರುವ ರಾಯರ ದರ್ಶನಕ್ಕಾಗಿ ಶ್ರೀಮಠಕ್ಕೆ ಆಗಮಿಸಿದ್ದಾರೆ. ಈ ಮೂಲಕ ಇದೇ ಮೊದಲ ನೆಹರು ಕುಟುಂಬದ ಸದಸ್ಯರೊಬ್ಬರು ರಾಯರ ದರ್ಶನವನ್ನ ಪಡೆದುಕೊಂಡಿದ್ದಾರೆ. ಶ್ರೀಮಠದ ಸಂಪ್ರದಾಯದಂತೆ ರಾಹುಲ್ ಗಾಂಧಿ ವಸ್ತ್ರ ಧರಿಸಿ ರಾಯರ ದರ್ಶನಕ್ಕೆ ಆಗಮಿಸಿದ್ದರು. ಮಂತ್ರಾಲಯ ಗ್ರಾಮ ದೇವತೆ ಮಂಚಲಮ್ಮ ದೇವಿಯ ದರ್ಶನವನ್ನೂ ರಾಹುಲ್ ಗಾಂಧಿ ಪಡೆದಿದ್ದಾರೆ. ಬಳಿಕ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ.
ಮಂಚಾಲಮ್ಮ ದೇವಿಯ ದರ್ಶನದ ಬಳಿಕ ರಾಯರ ವೃಂದಾವನ ದರ್ಶನ ಪಡೆದುಕೊಂಡು ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಆಶಿರ್ವಚನ ಪಡೆದಿದ್ದಾರೆ. ಬಳಿಕ ಶ್ರೀಗಳೊಂದಿಗೆ ರಾಹುಲ್ ಗಾಂಧಿ ಕೆಲ ಕಾಲ ಚರ್ಚೆ ನಡೆಸಲಿದ್ದಾರೆ. ರಾಹುಲ್ ಗಾಂಧಿಗೆ ಶ್ರೀಮಠದ ಕುರಿತು ಶ್ರೀಗಳು ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮೀಜಿಗಳ ಪವಾಡಗಳನ್ನ ರಾಹುಲ್ ಗಾಂಧಿ ಕೇಳಿದ್ದಾರೆ. ಬಳಿಕ ಶ್ರೀಮಠದಿಂದ ರಾಹುಲ್ ಗಾಂಧಿಗೆ ಶ್ರೀಗಳು ಸನ್ಮಾನಿಸಿದ್ದಾರೆ. ರಾಹುಲ್ ಗಾಂಧಿ ಮಂತ್ರಾಲಯದ ಹೊರವಲಯದಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಿಗ್ಗೆ 6:30 ರಿಂದ ತುಂಗಭದ್ರಾ ಸೇತುವೆಯಿಂದ ಪಾದಯಾತ್ರೆ ಆರಂಭವಾಗಲಿದೆ.
undefined
Bharat Jodo Yatra: ಅ.21 ರಿಂದ 23ರವರೆಗೆ ರಾಯಚೂರಲ್ಲಿ ಭಾರತ್ ಜೋಡೊ ಯಾತ್ರೆ
ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಬಸನಗೌಡ ಬಾದರ್ಲಿ ಸಾಥ್ ನೀಡಿದ್ದರು.
ಮಂತ್ರಾಲಯದ ರಾಯರ ಮಠದಲ್ಲಿ ರಾಹುಲ್ ಗಾಂಧಿ ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಶ್ರೀಗಳಿಂದ ಆಶಿರ್ವಾದ ಪಡೆದಿದ್ದಾರೆ. ರಾಹುಲ್ ಗಾಂಧಿ ಶ್ರೀಗಳಿಗೆ ಹಣ್ಣು ಹಂಪಲು ನೀಡಿ ಆಶಿರ್ವಾದ ಪಡೆದಿದ್ದಾರೆ. ಇದೇ ವೇಳೆ ನೀಡಿದ ಬೆಳ್ಳಿ ಖಡ್ಗ ಕಾಣಿಕೆಯನ್ನ ಸುಬುಧೇಂದ್ರ ತೀರ್ಥ ಶ್ರೀಗಳು ನಯವಾಗಿ ತಿರಸ್ಕರಿಸಿದ್ದಾರೆ.
ರಾಹುಲ್ ಗಾಂಧಿಗೆ ಆಶಿರ್ವಚನ ನೀಡಿದ ಬಳಿಕ ಮಾತನಾಡಿದ ಶ್ರೀಗಳು, ರಾಹುಲ್ ಗಾಂಧಿ ಜೋಡೋ ಯಾತ್ರೆ ನಿಮಿತ್ತ ಮಠಕ್ಕೆ ಆಗಮಿಸಿದ್ದಾರೆ. ರಾಯರ ದರ್ಶನ, ನಾಮಸ್ಮರಣೆ, ಪ್ರಸಾರ ಸ್ವಿಕರಿಸಿ ಧನ್ಯತೆಯಿಂದ ತೆರಳಿದ್ದಾರೆ. ರಾಹುಲ್ ಗಾಂಧಿ ಹಿಂದೂ ಸಂಸ್ಕೃತಿಯ ಉಡುಪು ಧರಿಸಿ ಮಠಕ್ಕೆ ಬಂದಿದ್ದರು. ದೇಶಕ್ಕೆ ಒಳ್ಳೆಯದಾಗಲಿ, ಶಾಂತಿ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶ್ರೀಮಠಕ್ಕೆ ಹಿಂದಿನಿಂದಲೂ ನೆಹರು ಕುಟುಂಬದ ಸೇವೆಯಿದೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮಠಕ್ಕೆ ಸೇವೆ ಸಲ್ಲಿಸಿದ್ದರು. ಕ್ಷೇತ್ರದ ಮಹಿಮೆ, ರಾಯರ ಪೂರ್ವಾವತಾರದ ಕುರಿತು ರಾಹುಲ್ ಗಾಂಧಿಗೆ ಮಾಹಿತಿ ನೀಡಿದ್ದೇವೆ ಅಂತ ಶ್ರೀಗಳು ತಿಳಿಸಿದ್ದಾರೆ.