ಈ ಸಾವುಗಳು ಕೋವಿಡ್ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ಪರಿಹಾರ ನೀಡದಿದ್ದರೆ ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದ ರಾಹುಲ್ ಗಾಂಧಿ
ದೇವರಾಜು ಕಪ್ಪಸೋಗೆ
ಚಾಮರಾಜನಗರ(ಅ.01): ಭಾರತ್ ಜೋಡೋ ಯಾತ್ರೆಯ ನಡುವೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸ್ ಬಳಿ ಸೋಲಿಗರು ಮತ್ತು ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬದ ಜೊತೆಗೆ ಸಂವಾದ ನಡೆಸಿದರು.
undefined
ಆಕ್ಸಿಜನ್ ದುರಂತದ ಸಂತ್ರಸ್ತರು ಅಂದು ನಡೆದ ಕರುಣಾಜನಕ ಕಥೆಗಳನ್ನು ತೆರೆದಿಟ್ಟರು, ಕೊರೋನಾದಿಂದಲೇ ಸತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ ಇದು ಮೊದಲು ಸರಿಯಾಗಬೇಕು. ಸರ್ಕಾರ ನಿರ್ಲಕ್ಷ್ಯದಿಂದ ಯಾರು ಸತ್ತಿಲ್ಲ ಎಂದು ಸತ್ಯವನ್ನು ಮರೆಮಾಚುತ್ತಿದ್ದಾರೆ. ಈ ಸಾವುಗಳು ಕೋವಿಡ್ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ಪರಿಹಾರ ನೀಡದಿದ್ದರೆ ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದರು. ಸರ್ಕಾರ ನಿಮ್ಮ ನೆರವಿಗೆ ಬಾರದಿದ್ದಾಗ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರು ನಿಮ್ಮನ್ನು ಭೇಟಿ ಮಾಡಿ ತಲಾ 1 ಲಕ್ಷ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದ್ದಾರೆ ಎಂದರು.
ರಾಹುಲ್ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!
ಸರ್ಕಾರದ ನಿರ್ಲಕ್ಷ್ಯದಿಂದ ತಮ್ಮ ಕುಟುಂಬದ ಆಧಾರಸ್ತಂಭ ಕಳೆದುಕೊಂಡಿದ್ದು, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಸಂತ್ರಸ್ತರು ಬೇಡಿಕೆ ಇಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕೆಲಸ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ನಿಮ್ಮನ್ನು ನೋಡಿ ಕಲಿಯಬೇಕು:
ರಾಹುಲ್ ಗಾಂಧಿ ಅವರು ಬುಡಕಟ್ಟು ಜನರ ಜತೆ ಸಂವಾದ ಮಾಡುತ್ತಾ, ‘ಇಂದು ವಿಶ್ವ ಹವಾಮಾನ ವೈಪರಿತ್ಯದ ಸಮಸ್ಯೆ ಎದುರಿಸುತ್ತಿದ್ದು, ನಮ್ಮ ಪರಿಸರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಅಂಶವನ್ನು ನಿಮ್ಮನ್ನು ನೋಡಿ ಕಲಿಯಬೇಕು. ಈ ವಿಚಾರದಲ್ಲಿ ನಿಮಗೆ ಇರುವ ಜ್ಞಾನ ನಮಗಿಲ್ಲ. ಶತಮಾನಗಳಿಂದ ಅರಣ್ಯದ ಜತೆ ಸಾಮರಸ್ಯದ ಬದುಕು ಸಾಗಿಸುತ್ತಿರುವ ನಿಮ್ಮಿಂದ ಅರಣ್ಯ ಹಾಗೂ ಪರಿಸರವನ್ನು ನಿಭಾಯಿಸುವುದನ್ನು ಕಲಿಯಬೇಕು’ ಎಂದರು.
ಸಂವಾದದಲ್ಲಿ ಜೇನುತುಪ್ಪ ಗಿಫ್ಟ್:
ಬಿಳಿಗಿರಿರಂಗನ ಬೆಟ್ಟದ ಮುತ್ತುಗದ್ದೆಪೋಡಿನ ವ್ಯಕ್ತಿಯೊಬ್ಬರು ರಾಹುಲ್‌ಗಾಂಧಿಗೆ ಶುದ್ಧ ಜೇನನ್ನು ನೀಡಿದರು. ಬಳಿಕ, ಸಂವಾದದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅವಕಾಶ, ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬಾರದೆಂದು ಸೋಲಿಗರು ಒತ್ತಾಯಿಸಿದರು ಇದಕ್ಕೆ ರಾಹುಲ್ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದರು.