
ರಾಯಚೂರು (ಸೆ.7): ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನದ ಹೆಸರಲ್ಲಿ ಭಕ್ತರಿಗೆ ವಂಚಿಸುವ ಜಾಲವೊಂದು ತಲೆಯೆತ್ತಿದ್ದು, ಈ ಬಗ್ಗೆ ಮೋಸ ಹೋಗದೆ ಎಚ್ಚರಿಕೆಯಿಂದ ಇರುವಂತೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರಿಗೆ ಸಲಹೆ ನೀಡಿದ್ದಾರೆ.
ಮಂತ್ರಾಲಯದ ರಾಯರ ಹೆಸರಲ್ಲಿ ಆನ್‌ಲೈನ್ ಮೂಲಕ ಭಕ್ತರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಶ್ರೀಗಳು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ.
ಕಳೆದೊಂದು ವಾರದಿಂದ ರಾಯರ ಮಠದಲ್ಲಿ ಆರಾಧಾನೆ, ಗುರುವೈಭೋತ್ಸವ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾಯರ ದರ್ಶನ ಪಡೆಯಲು ಕರ್ನಾಟಕ ಸೇರಿ ದೇಶದ ಮೂಲೆಮೂಲೆಗಳಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು. ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್, ರಾಯರ ಹೆಸರಿನಲ್ಲಿ ಭಕ್ತರಿಂದ ಆನ್‌ಲೈನ್ ಮೂಲಕ ದೇಣಿಗೆ ಸಂಗ್ರಹ, ವಿಐಪಿ ದರ್ಶನ, ಪರಿಮಳ ಪ್ರಸಾದ ವಿತರಣೆ ಹೆಸರಿನಲ್ಲಿ ಭಕ್ತರಿಗೆ ವಂಚಿಸುತ್ತಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಖಾಸಗಿ ವೆಬ್‌ಸೈಟ್, ವಾಟ್ಸಪ್ ಗ್ರೂಪ್ ಎಚ್ಚರಿಕೆಯಿಂದ ಇರುವಂತೆ ಖುದ್ದಾಗಿ ಮಂತ್ರಾಲಯ ಶ್ರೀಗಳು ಸಲಹೆ ನೀಡಿದ್ದಾರೆ.
ರಾಯರ ಹೆಸರಲ್ಲಿ ದರ್ಶನ, ದೇಣಿಗೆ ಸಂಗ್ರಹದಂತಹ ಯಾವುದೇ ಆನ್‌ಲೈನ್ ಸೇವೆಗಳು ಶ್ರೀಮಠದಿಂದ ಇಲ್ಲ. ಪರಿಮಳ ಪ್ರಸಾದ ಕೂಡ ಆನ್‌ಲೈನ್‌ನಲ್ಲಿ ಒದಗಿಸುವ ವ್ಯವಸ್ಥೆ ಇಲ್ಲ. ದೇಣಿಗೆ ನೀಡಲು ಬಯಸುವ ಭಕ್ತರು ಯಾವುದೇ ಸೇವೆ ಬೇಕಿದ್ದಲ್ಲಿ ರಾಘವೇಂದ್ರ ಸ್ವಾಮಿ ಮಠದ ಕಾರ್ಯಾಲಯದ ಆಡಳಿತ ಮಂಡಳಿ ಸಂಪರ್ಕಿಸುವಂತೆ ಶ್ರೀಗಳು ತಿಳಿಸಿದ್ದಾರೆ.
ಇತ್ತೀಚೆಗೆ ಹಿಂದೂಗಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಹೆಸರಿನಲ್ಲೂ ಭಕ್ತರಿಗೆ ವಂಚಿಸುತ್ತಿದ್ದ ಸುಮಾರು 249 ನಕಲಿ ವೆಬ್‌ಸೈಟ್‌ಗಳು ಪತ್ತೆಯಾಗಿದ್ದವು. ಇದಲ್ಲದೆ ತಿರುಪತಿ ದರ್ಶನ, ಹೋಟೇಲ್ ಬುಕಿಂಗ್, ಪ್ರಸಾದ್ ವಿತರಣೆ ಹೆಸರಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾದ ಬಳಿಕ ಟಿಟಿಡಿ ಇದರ ವಿರುದ್ಧ ಕಠಿಣ ಕ್ರಮ ಕ್ರಮಕ್ಕೆ ಮುಂದಾಗಿ ಪ್ರಕರಣ ದಾಖಲಿಸಿತ್ತು. ತಿರುಪತಿ ದೇವಸ್ಥಾನ ಬಳಿಕ ವಂಚಕರು ಇದೀಗ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲೂ ಭಕ್ತರನ್ನ ಮೋಸಗೊಳಿಸುವ ಸಂಚು ನಡೆಸಿದ್ದಾರೆ. ಹೀಗಾಗಿ ಭಕ್ತರು ಆನ್‌ಲೈನ್ ಅಥವಾ ವಾಟ್ಸಪ್ ಗ್ರೂಪ್‌ಗಳ ಮೂಲಕ ಬರುವ ಯಾವುದೇ ಸಂದೇಶಗಳನ್ನ ನಂಬಿ ಮೋಸ ಹೋಗಬಾರದು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.