ಸ್ಯಾಟಲೈಟ್ ಫೋಟೋದಾಗ ಹಸಿರು ಕಾಣಿಸ್ತೈತಿ ಅಂತಾ ಬರಪೀಡಿತ ಪಟ್ಯಾಗ ಕಲ್ಬುರ್ಗಿ ಕೈಬಿಟ್ರಲ್ಲೋ ಸರ್ಕಾರದವ್ರು!

Published : Sep 07, 2026, 11:09 AM IST
Kalaburagi Draught

ಸಾರಾಂಶ

ಸ್ಯಾಟಲೈಟ್‌ನಲ್ಲಿ ಹಸಿರು ಕಂಡಿದ್ದೇ ತಪ್ಪಾಯ್ತಾ?: ಬರ ಪಟ್ಟಿಯಿಂದ ಕಲಬುರಗಿ ಹೊರಗಿಟ್ಟ ಸರ್ಕಾರ! ಶೇ.50ಕ್ಕೂ ಹೆಚ್ಚು ಮಳೆ ಕೊರತೆಯಿದ್ದರೂ ಸ್ಯಾಟಲೈಟ್ ಫೋಟೋದಲ್ಲಿ ಹಸಿರು ಕಂಡಿದೆ ಎಂದು ಕಲಬುರಗಿಯನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ. ತಂತ್ರಜ್ಞಾನವೇ ಕೈಕೊಟ್ಟಿತಾ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ--ಶೇಷಮೂರ್ತಿ ಅವಧಾನಿ, ಚಂದ್ರ

ಕಲಬುರಗಿ (ಸೆ.07): ಕೇಂದ್ರದ ಡ್ರಾಟ್‌ ಮ್ಯಾನುವಲ್‌ (ಬರಗಾಲ ಸೂಚಿ ಮಾನದಂಡ) ಆಧರಿಸಿ ಬರಗಾಲ ಪಟ್ಟಿ ಸಿದ್ಧಪಡಸ್ಯಾರಂತ್ರಿ, ಸ್ಯಾಟಲೈಟ್ ಟೆಕ್ನಾಲಜಿಯಿಂದ್ಲೇ ನಮ್ಮೂರ ಹೊಲಗದ್ದಿ ಫೋಟೋ ತಗೊಂಡಾರ, ಸ್ಯಾಟಲೈಟ್‌ ಫೋಟೋದಾಗ ಕಲಬುರಗಿ ಹಚ್ಚಗ (ಹಚ್ಚ ಹಸಿರು) ಕಾಣಸ್ಯದಂತ, ಅದ್ಕೇ ಇಲ್ಲಿನ ಯಾವ ತಾಲೂಕೂ ಬರಗಾಲ ಪಟ್ಟಿ ಸೇರಿಲ್ಲ.

ಇದು ಟೆಕ್ನಾಲಜಿ ಯುಗ, ಎಲ್ಲದಕ್ಕೂ ತಂತ್ರಜ್ಞಾನ ಬಳಸೋ ಕಾಲದಲ್ಲಿ ನಾವಿರೋವಾಗಲೇ ಬರಗಾಲದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರೋ ಕಲಬುರಗಿ ರೈತರ ಪಾಲಿಗೆ ಈ ಟೆಕ್ನಾಲಜಿಯೇ ಕೈ ಕೊಟ್ಟಿದೆಯಾ...? ಇಂಥ ಅನುಮಾನ ಈಗ ಜಿಲ್ಲೆಯ ಜನರಲ್ಲಿ ಮೂಡಿದೆ. ಮಳೆ ಕೊರತೆಯಾಗಿ ಭೀಕರ ಬರಗಾಲದ ದವಡೆಗೆ ಸಿಲುಕಿರುವಾಗ ರಾಜ್ಯ ಸರ್ಕಾರ ಘೋಷಿಸಿರೋ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ 11 ತಾಲೂಕುಗಳಲ್ಲಿ ಒಂದೂ ಸೇರದೆ ಹೋಗಿರೋದು ಇಲ್ಲಿನ ಜನರನ್ನು, ರೈತರನ್ನು ಕೆರಳಿಸಿದೆ.

ಅದರ ಪರಿಣಾಮ ಈಚೆಗಿನ ಯಾವುದೇ ಸಮಾರಂಭದ ವೇದಿಕೆ ಇರಲಿ, ಅಲ್ಲಿ ಬರಗಾಲದ್ದೇ ಮಾತು. ಎಲ್ಲೇ ಹೋರಾಟಗಳು ನಡೆಯಲಿ, ಬರಗಾಲ ಘೋಷಿಸದ ಸರ್ಕಾರ ವಿರುದ್ಧ ಧಿಕ್ಕಾರ ಕೂಗಲಾಗ್ತಿದೆ. ಮೊನ್ನೆ ಹೀಂಗೆ ಆಯ್ತು, ಹೆದ್ದಾರಿ ಪ್ರಾಧಿಕಾರದವರು 7 ಕೊಳವೆ ತುಂಡರಿಸಿದ್ದರಿಂದ ಬೋರಿ ಹಳ್ಳದಿಂದ ಅಫಜಲ್ಪುರ ಹಾಗೂ ಆಳಂದ ಕೆರೆ, ಕಟ್ಟೆ ತುಂಬಿಸೋ ಯೋಜನೆಗೆ ಆಘಾತವಾಗಿದೆ ಎಂದು ಬಡದಾಳ-ಅರ್ಜುಣಗಿ ಬಳಿ ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌.ಕೆ.ಪಾಟೀಲ್‌ ನೇತೃತ್ವದ ಧರಣಿ ವೇಳೆ ಬರಗಾಲ ಪಟ್ಟಿಯಿಂದ ಕಲಬುರಗಿ ಔಟ್‌ ಆಗಿರೋ ವಿಷಯ, ಯಾಕೆ ಹಿಗಾಯ್ತೆಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಯ್ತು.

ಉಪಗ್ರಹ ಫೋಟೋದಾಗ ಕಲಬುರಗಿ ಹೊಲಗದ್ದಿ ಎಲ್ಲಾ ಹಚ್ಚ ಹಸಿರು

ಹೋರಾಟ ಬೆಂಬಲಿಸಲು ಬಂದಿದ್ದ ಆತನೂರ್‌-ಅಂಕಲಗಿ ಮಠದ ಗುರುಬಸವ ಶಿವಾಚಾರ್ಯರು, ಕಲಬುರಗ್ಯಾಗ ಶೇ.50 ಕ್ಕಿಂತ ಅಧಿಕ ಮಳೆ ಕೊರತೆ ಕಾಡಿದ್ರೂ ಉಪಗ್ರಹ ಫೋಟೋದಾಗ ಕಲಬುರಗಿ ಹೊಲಗದ್ದಿ ಎಲ್ಲಾ ಹಚ್ಚ ಹಸಿರು ಕಂಡಾವಂತ, ಅದ್ಕೇ ಇಲ್ಲೆಲ್ಲಿದೆ ಬರಗಾಲ ಎಂದು ಕೇಳ್ತಾ ಆಫೀಸರ್‌ ಮಂದಿ ಬರಗಾಲ ಪಟ್ಟಿಯಿಂದ ಕಲಬುರಗಿ ಜಿಲ್ಲಾ ದೂರ ಇಟ್ಟಾರಂತ ಹೇಳಾಕತ್ತಾರ್ರಿ, ನಮಗ ಮನಷ್ಯಾರಷ್ಟೇ ಕೈ ಕೊಡ್ತಾರ ಅಂದ್ಕೊಂಡಿದ್ವಿ, ಈಗ ನೋಡಿದ್ರ ಕಲಬುರಗಿ ಪಾಲಿಗೆ ಟೆಕ್ನಾಲಜಿನೂ ಕೈ ಕೊಟ್ಟದ ನೋಡ್ರಿ ಅಂದ್ರು!

ಕೇಂದ್ರದ ಡ್ರಾಟ್‌ ಮ್ಯಾನುವಲ್‌ (ಬರಗಾಲ ಸೂಚಿ ಮಾನದಂಡ) ಆಧರಿಸಿ ಬರಗಾಲ ಪಟ್ಟಿ ಸಿದ್ಧಪಡಸ್ಯಾರಂತ್ರಿ, ಸ್ಯಾಟಲೈಟ್ ಟೆಕ್ನಾಲಜಿಯಿಂದ್ಲೇ ನಮ್ಮೂರ ಹೊಲಗದ್ದಿ ಫೋಟೋ ತಗೊಂಡಾರ, ಸ್ಯಾಟಲೈಟ್‌ ಫೋಟೋದಾಗ ಕಲಬುರಗಿ ಹಚ್ಚಗ (ಹಚ್ಚ ಹಸಿರು) ಕಾಣಸ್ಯದಂತ, ಅದ್ಕೇ ಇಲ್ಲಿನ ಯಾವ ತಾಲೂಕೂ ಬರಗಾಲ ಪಟ್ಟಿ ಸೇರಿಲ್ಲ. ಟೆಕ್ನಾಲಜಿ ಕೂಡಾ ಹೀಂಗ ಕಲಬುರಗಿಗೆ ಮೋಸ ಮಾಡ್ಬೇಕಾ? ಎಂದಾಗ ಸೇರಿದ್ದ ರೈತರು ತಮ್ಮ ಹಣೆಬರಹ ಹಳಿಯುತ್ತ ಹಣಿಹಣಿ ಬಡ್ಕೊಂಡ್ರು.

PREV
Read more Articles on
click me!

Recommended Stories

ಪರಿಸರ ಸೂಕ್ಷ್ಮ ವಲಯ ಸಮಸ್ಯೆ: ಅಧಿಸೂಚನೆ ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಗಡುವು 25ಕ್ಕೆ ಅಂತ್ಯ!
ಬೆಂಗಳೂರು ನೈಸ್ ರೋಡ್ ಟೋಲ್ ಕಟ್ಟದೆ, ಪ್ರಶ್ನೆ ಮಾಡಿ ಯುವತಿ; ತರಾಟೆ ತೆಗೆದುಕೊಂಡ ನಂತರ ಏನಾಯ್ತು ನೋಡಿ!