ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಿರ್ಧಾರ| ಜನರ ಅಲೆದಾಟ ತಪ್ಪಿಸಲು ಹಳ್ಳಿಗೆ ಅಧಿಕಾರಿಗಳ ತಂಡ| ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟಿಸಿದ ಕಂದಾಯ ಸಚಿವ ಆರ್ ಅಶೋಕ್|
ಭಟ್ಕಳ(ಜ.26): ಕಂದಾಯ ಕಚೇರಿಗೆ ಜನರ ಅಲೆದಾಟ ತಪ್ಪಿಸಲು ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಅಧಿಕಾರಿಗಳನ್ನು ಹಳ್ಳಿಯ ಕಡೆಗೆ ಕಳುಹಿಸಿ ಜನರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.
ಭಟ್ಕಳದಲ್ಲಿ 10.90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಕಚೇರಿಯಲ್ಲಿ ಕೆಲಸವಾಗುತ್ತಿಲ್ಲ. ಅಲೆದಾಡಿಸಲಾಗುತ್ತಿದೆ ಎನ್ನುವ ಆರೋಪವಿದ್ದು, ಇದನ್ನು ಹೋಗಲಾಡಿಸಲು ಮತ್ತು ಜನರಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಲು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್ ಮತ್ತಿತರ ಅಧಿಕಾರಿಗಳನ್ನು ತಿಂಗಳಿಗೆ ಒಂದು ದಿವಸ ಹಳ್ಳಿಗಳಿಗೆ ಕಳುಹಿಸಿ ಸ್ಥಳದಲ್ಲೇ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಜ. 27ರಂದು ವಿಧಾನಸೌಧದಲ್ಲಿ ಈ ಕುರಿತು ಮಹತ್ವದ ಸಭೆ ಇದ್ದು, ಇದರಲ್ಲಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರದಂತೆ ಫಲಾನುಭವಿಗಳ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಏಜೆಂಟರ ಹಾವಳಿ ತಪ್ಪಿಸಲು ಕೂಡ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ 7500 ಕೋಟಿ ಪಿಂಚಣಿ ಹಣ ವಿತರಿಸಲಾಗುತ್ತಿದ್ದು, ಅದರಲ್ಲಿ ಕೆಲವರು ಬೋಗಸ್ ಮಾಡಿ ಹಣ ಲಪಟಾಯಿಸುತ್ತಿರುವುದರ ಬಗ್ಗೆಯೂ ಸರ್ಕಾರದ ಗಮನಕ್ಕಿದೆ. ಅದನ್ನು ತಡೆಯಲು ಮುಂದಿನ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಆಧಾರ ಲಿಂಕ್ ಮಾಡಲಾಗುತ್ತದೆ ಎಂದು ಹೇಳಿದರು.
ಶಿರಸಿ: ನೇಣು ಬಿಗಿದು ಪ್ರೇಮಿಗಳ ಆತ್ಮಹತ್ಯೆ, ಕಾರಣ..?
ಕಂದಾಯ ಇಲಾಖೆಯಲ್ಲಿ ಹಣಕಾಸಿನ ವ್ಯವಸ್ಥೆಗೂ ಸಮಸ್ಯೆ ಇಲ್ಲ. ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಖಾತೆಯಲ್ಲೂ ಹಣವಿದೆ. ಕಡಿಮೆ ಬಿದ್ದರೆ ಜಮಾ ಮಾಡುವ ಕೆಲಸ ಇಲಾಖೆ ಮಾಡುತ್ತದೆ. ಕಂದಾಯ ಇಲಾಖೆಯಲ್ಲಿ ಬದಲಾವಣೆ ತೀರಾ ಅಗತ್ಯವಿದ್ದು, ಜನರ ಕೆಲಸ ತ್ವರಿತವಾಗಿ ಆಗಬೇಕು. ರಾಜ್ಯದಲ್ಲಿ 9,2,4631 ರೈತರ ಖಾತೆಗೆ ಪರಿಹಾರಾರ್ಥವಾಗಿ 709.67 ಕೋಟಿ ಜಮಾ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕ ಸುನೀಲ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಪಂ ಸಿಇಒ ಪ್ರಿಯಾಂಗಾ ಎಂ., ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಮಜಿ, ಜಾಲಿ ಪಪಂ ಅಧ್ಯಕ್ಷೆ ಶಮೀಮಾಬಾನು ಇದ್ದರು. ಸಹಾಯಕ ಆಯುಕ್ತ ಭರತ್ ಎಸ್. ಸ್ವಾಗತಿಸಿದರು. ತಹಸೀಲ್ದಾರ್ ರವಿಚಂದ್ರ ಎಸ್. ವಂದಿಸಿದರು.
ಆನಂದ ಸಿಂಗ್ ರಾಜೀನಾಮೆ ಗಮನಕ್ಕಿಲ್ಲ
ಸಚಿವ ಆನಂದ ಸಿಂಗ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆನ್ನುವುದು ನನಗೆ ಗೊತ್ತಿಲ್ಲ. ಒಂದೊಮ್ಮೆ ಅವರು ರಾಜೀನಾಮೆ ನೀಡಿರುವುದು ಹೌದೆಂದಾದಲ್ಲಿ ಅವರ ಬಳಿ ನಾನು ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಭಟ್ಕಳದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಆನಂದ ಸಿಂಗ್ ದಿಢೀರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸರಿಯಲ್ಲ. ನಾನು ಪ್ರವಾಸದಲ್ಲಿರುವುದರಿಂದ ಅವರು ಯಾಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವುದು ತಿಳಿದಿಲ್ಲ ಎಂದ ಅವರು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೂ ಮಾತನಾಡುತ್ತಾನೆ ಎಂದರು.
ಒಂದೇ ಬ್ಯಾನರ್‌ನಲ್ಲಿ ಶಿವರಾಮ, ಸಿದ್ದು, ಜಯಚಂದ್ರ ಫೋಟೋ: ಹೆಬ್ಬಾರ್ ಕಾಂಗ್ರೆಸ್‌ನವರೋ-ಬಿಜೆಪಿಯವರೋ?
ಕಾಂಗ್ರೆಸ್ ಪ್ರಚೋದಿತ ಪ್ರತಿಭಟನೆ
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು, ಇದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಇದೊಂದು ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ. ಕಾಂಗ್ರೆಸ್‌ಗೆ ರೈತರ ಹಿತ ಬೇಕಿಲ್ಲ. ಪ್ರತಿಭಟನೆಗೆ ಪ್ರಚೋದನೆ ನಡೆಸುವ ಮೂಲಕ ಹಿಂಬಾಗಿಲಿನ ರಾಜಕೀಯದಲ್ಲಿ ಕಾಂಗ್ರೆಸ್ ನಿರತವಾಗಿದೆ ಎಂದ ಅವರು ಕೃಷಿ ಕಾಯ್ದೆ ಬಗ್ಗೆ ಸಾಧಕ ಬಾಧಕ ತಿಳಿದುಕೊಳ್ಳದೇ ಕಾಂಗ್ರೆಸ್ ರೈತರನ್ನು ಎತ್ತಿಕಟ್ಟುತ್ತಿರುವುದು ಸರಿಯಲ್ಲ ಎಂದರು.
ಶಿವಮೊಗ್ಗ ಸ್ಫೋಟ ಗಂಭೀರ ಪರಿಗಣನೆ
ಶಿವಮೊಗ್ಗ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಫೋಟಕ ಕಳುಹಿಸುವ ವ್ಯವಸ್ಥೆ, ಸ್ಟೋರೇಜ್ ಮತ್ತು ಖರೀದಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ಮೇಲ್ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಅಭಿಪ್ರಾಯಪಟ್ಟರು.
ಶಿವಮೊಗ್ಗದಲ್ಲಿ ಸ್ಫೋಟವಾದ ತಕ್ಷಣವೇ ಕಂದಾಯ ಇಲಾಖೆ ಅಲ್ಲಿಗೆ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸಿ ಪರಿಶೀಲಿಸಿದೆ. ಈ ಹಿಂದೆ ಸ್ಫೋಟಕ ಕಳುಹಿಸುವ ವ್ಯವಸ್ಥೆ, ಸ್ಟೋರೇಜ್ ಮತ್ತು ಖರೀದಿ ವಿಚಾರಕ್ಕೆ ಸರಿಯಾದ ಗೈಡ್‌ಲೈನ್ಸ್ ಇಲ್ಲವಾಗಿದ್ದು, ಇನ್ನು ಮುಂದೆ ಇದನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಮುಖ್ಯಮಂತ್ರಿ ಜತೆ ಈ ಬಗ್ಗೆ ಚರ್ಚಿಸಿ ಅಕ್ರಮಕ್ಕೆ ಕಡಿವಾಣ ಹಾಕುತ್ತೇವೆ ಎಂದರು.
ಸಚಿವ ಅಶೋಕ್‌ಗೆ ಸಿಎಂ ಕರೆ
ಭಟ್ಕಳದಲ್ಲಿ ಮಿನಿವಿಧಾನಸೌಧದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಕರೆ ಬಂದಿದ್ದರಿಂದ ಅವರು ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ಇಳಿದು ಹೋಗಿ ಮುಖ್ಯಮಂತ್ರಿ ಬಳಿ ಮಾತನಾಡಿದರು. ಮುಖ್ಯಮಂತ್ರಿ ಬಳಿ ಮೊಬೈಲ್‌ನಲ್ಲಿ ಐದು ನಿಮಿಷಕ್ಕೂ ಹೆಚ್ಚು ಸಮಯ ಮಾತನಾಡಿದ ಸಚಿವರು ನಾನು ಭಟ್ಕಳದಲ್ಲಿದ್ದು, ರಾತ್ರಿಯೊಳಗೆ ಬೆಂಗಳೂರಿಗೆ ಬಂದು ತಮ್ಮನ್ನು ಕಾಣುತ್ತೇನೆ ಎಂದು ಹೇಳುತ್ತಿರುವುದು ಕೇಳಿ ಬಂತು. ಆನಂತರ ವೇದಿಕೆಗೆ ಆಗಮಿಸಿದ ಸಚಿವ ಅಶೋಕ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರರಲ್ಲೂ ಮುಖ್ಯಮಂತ್ರಿಯಿಂದ ಕರೆ ಬಂದಿರುವುದಾಗಿ ಹೇಳಿದರು.