ಹರಿಹರ ( :ಅ.29) : ಸರ್ಕಾರಕ್ಕೆ ಪಂಚಮಸಾಲಿ ಸಮಾಜದ ಶಕ್ತಿ ಬಗ್ಗೆ ಅರಿವಿದ್ದು, ಶೀಘ್ರ 2ಎ ಮೀಸಲಾತಿ ಘೋಷಣೆಯಾಗಲಿದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ ಹೇಳಿದ್ದಾರೆ. ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ಪಂಚಮಸಾಲಿ ಪೀಠದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಖಂಡರ ಮಧ್ಯೆ ಮಾತುಕತೆ ನಡೆದಿದ್ದು, ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆæ ಎಂದು ತಿಳಿಸಿದರು.
ಪಂಚಮಸಾಲಿ ಮೀಸಲಾತಿ: ಡಿ.12ಕ್ಕೆ 25 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆ, ಕೂಡಲ ಶ್ರೀ
ಪಂಚಮಸಾಲಿ ಸಮಾಜಕ್ಕೆ ರಾಜ್ಯದಲ್ಲಿ 2ಎ ಹಾಗೂ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ದೊರಕಿಸಿಕೊಡುವ ಹೋರಾಟಕ್ಕೆ 29 ವರ್ಷಗಳ ಇತಿಹಾಸವಿದೆ. ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಬೇಕೆಂದರೆ ರಾಜ್ಯ ಸರ್ಕಾರದ ಗೆಜೆಟ್‌ನ ಒಬಿಸಿ ಪಟ್ಟಿಯಲ್ಲಿ ಆ ಜಾತಿ ಹೆಸರಿರಬೇಕು. ಸಮಾಜದ ಮುಖಂಡರು ಹೋರಾಟ ಮಾಡಿ ಲಿಂಗಾಯಿತ ಎಂಬ ಹೆಸರಿನಲ್ಲಿ ಸೇರಿಕೊಂಡಿದ್ದ ಪಂಚಮಸಾಲಿ ಹೆಸರನ್ನು ಪ್ರತ್ಯೇಕಗೊಳಿಸುವಲ್ಲಿ ಯಶಸ್ವಿಯಾದರು. ನಂತರ 2021ರಲ್ಲಿ ಪಂಚಮಸಾಲಿ ಸಮುದಾಯವನ್ನು ಒಬಿಸಿ ಪಟ್ಟಿಸೇರ್ಪಡಗೆ ಕಾನೂನು ಹೋರಾಟ ನಡೆಸಿದ ಪರಿಣಾಮ ಈಗ ಕೇಂದ್ರ ಹಿಂದುಳಿದ ವರ್ಗದ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ವರದಿ ಕೇಳಿದೆ. ಕೇಂದ್ರ ಸಚಿವರೂ ಸಹ ತಮ್ಮನ್ನು ಸಂಪರ್ಕಿಸಿದ್ದು, ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದಷ್ಟುಶೀಘ್ರ ಸಮಾಜಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ದೊರಕಲಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ಸಮೀಕ್ಷೆ ನಡೆಸುತ್ತಿದೆ. ಅವರು ನೀಡುವ ಕುಲಶಾಸ್ತ್ರೀಯ ಅಧ್ಯಯನ ವರದಿ ಆಧರಿಸಿ ಮೀಸಲಾತಿ ನೀಡುವ ವಿಶ್ವಾಸವಿದೆ. ಇತ್ತೀಚಿಗೆ ಸರ್ಕಾರ 2020ರಲ್ಲಿ ಸಲ್ಲಿಸಿದ್ದ ನಾಗಮೋಹನ ದಾಸ್ ವರದಿ ಆಧರಿಸಿ ಎಸ್ಸಿಎಸ್ಟಿಸಮುದಾಯಗಳ ಮೀಸಲಾತಿ ಹೆಚ್ಚಿಸಿದೆ. ಇದೇ ರೀತಿ ಪಂಚಮಸಾಲಿಗಳ ಕುಲಶಾಸ್ತ್ರೀಯ ವರದಿ ಬಂದ ನಂತರ 2ಎ ಮೀಸಲಾತಿ ನೀಡಿದರೆ ಮಾತ್ರ ಅದು ಕಾನೂನುಬದ್ಧವಾಗುತ್ತದೆ ಎಂದರು.
ಈಗಾಗಲೆ ಸಂಬಂಧಿಸಿದ ಸಚಿವರಿಗೆ ಮೀಸಲಾತಿ ಏಕೆ ನೀಡಬೇಕೆಂಬ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸ್ವತಃ ಸಿಎಂ ಬೊಮ್ಮಾಯಿ, ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಕೇಂದ್ರದ ನಾಯಕರೂ ಸಹ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.
ಜನಜಾಗೃತಿಗೆ ಪ್ರವಾಸ:
ಸಮಾಜದ ಬಹುತೇಕರು ದಾಖಲೆಗಳಲ್ಲಿ ಇನ್ನೂ ಹಿಂದೂ ಲಿಂಗಾಯತ ಎಂದೇ ದಾಖಲಿಸುತ್ತಿದ್ದು, 2ಎ ಮೀಸಲಾತಿ ನೀಡಿದರೂ ಅದನ್ನು ಪಡೆದುಕೊಳ್ಳುವಲ್ಲಿ ತಾಂತ್ರಿಕ ತೊಂದರೆಯಾಗಲಿದೆ. ಆದ್ದರಿಂದ ಶಾಲಾ ದಾಖಲೆ ಸೇರಿ ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ನಮೂದಿಸುವ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೆ ಗದಗ ಜಿಲ್ಲೆಯ 60 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ್ದು, ಹಾವೇರಿ, ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡುವುದಾಗಿ ಶ್ರೀಗಳು ತಿಳಿಸಿದರು.
ಟೀಕೆ ಮಾಡೋರನ್ನ ಉದಾಸೀನ ಮಾಡಬೇಕು: ಕಾಂತಾರ ಬಗ್ಗೆ ಅಪಸ್ವರ ಎತ್ತಿದ ನಟ ಚೇತನ್‌ಗೆ ವಚನಾನಂದ ಶ್ರೀ ಕೌಂಟರ್
ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳ ವಿಧಾನಸೌಧ ಮುತ್ತಿಗೆ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಸಮಿತಿ ವರದಿ ಸಲ್ಲಿಸುವ ಮುಂಚೆಯೆ ಸರ್ಕಾರಕ್ಕೆ ಗಡುವು ಹಾಕುವುದು ಸರಿಯಲ್ಲ. ಅವರ ಹೋರಾಟಕ್ಕೆ ಬೆಂಬಲಿಸುವ ಕುರಿತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ನಿರ್ಣಯಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ರಾಜ್ಯ ಪಂಚಮಸಾಲಿ ಸಂಘದ ಅಧ್ಯಕ್ಷ ಜಿ.ಪಿ. ಪಾಟೀಲ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಟ್ರಸ್ಟಿಗಳಾದ ಬಿ.ಸಿ. ಉಮಾಪತಿ, ಬಾವಿ ಬೆಟ್ಟಪ್ಪ, ಬಿ.ಡಿ. ಶೀರೂರ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಸಮಾಜದ ಹಾವೇರಿ ಜಿಲ್ಲಾಧ್ಯಕ್ಷ ನಾಗರಾಜ ಕಡಕೋಳ, ಗದಗ ಜಿಲ್ಲಾಧ್ಯಕ್ಷ ಕರಿಬಸಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಇದ್ದರು.