ಅಕ್ರಮ ಮರಳು ಸಾಗಾಟ, ಮಟ್ಕಾ ದಂಧೆಗೆ ಬ್ರೆಕ್‌ ಹಾಕಿ: ಸಚಿವ ಜಮೀರ್‌ ಅಹ್ಮದ್‌

By Kannadaprabha NewsFirst Published Aug 13, 2023, 8:32 PM IST
Highlights

ವೈದ್ಯಕೀಯ ಸೌಲಭ್ಯಕ್ಕೆ ರೇಷನ್‌ ಕಾರ್ಡ್‌ಗಳನ್ನು ತಕ್ಷಣದಲ್ಲಿ ಕೊಡಲಿಕ್ಕೆ ಸರ್ಕಾರ ಆದೇಶ ಮಾಡಿದೆ. ಯಾವುದೇ ರೇಷನ್‌ ಕಾರ್ಡ್‌ ಕೊಡುತ್ತಿಲ್ಲ ಎಂದು ಮಾಹಿತಿ ಇಲ್ಲದೇ ಸಭೆಗೆ ಬಂದು ಸಾರ್ವಜನಿಕರಿಗೆ ಅನ್ಯಾಯ ಮಾಡಬೇಡಿ ಎಂದು ಆಹಾರ ಸರಬರಾಜು ಇಲಾಖೆ ಅಧಿಕಾರಿ ವಿರುದ್ಧ ಕಿಡಿಕಾರಿದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ 

ಹಗರಿಬೊಮ್ಮನಹಳ್ಳಿ(ಆ.13): ತಾಲೂಕಿನಲ್ಲಿ ಕಾನೂನುಬಾಹಿರ ಮರುಳು ಸಾಗಾಣೆ, ಮಟ್ಕಾ ದಂದೆ ಹೆಚ್ಚಾಗಿದೆ ಎಂದು ದೂರುಗಳಿವೆ. ಪೊಲೀಸ್‌ ಇಲಾಖೆ ಕೂಡಲೇ ಕ್ರಮ ಜರುಗಿಸಿ ಇದಕ್ಕೆ ಬ್ರೇಕ್‌ ಹಾಕಬೇಕು ಎಂದು ವಸತಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಿ ಎಂದು ಎಸ್‌ಪಿ ಶ್ರೀಹರಿಬಾಬು ಅವರಿಗೆ ತಾಕೀತು ಮಾಡಿದರು. ಇದಕ್ಕೆ ಶಾಸಕ ನೇಮರಾಜನಾಯ್ಕ ಧ್ವನಿಗೂಡಿಸಿ, ಮಟ್ಕಾ ಹಾವಳಿಯಿಂದ ತಾಲೂಕಿನಲ್ಲಿ ಕಳ್ಳತನ ಹೆಚ್ಚಾಗುತ್ತಿದೆ. ಅಕ್ರಮ ಮರಳು ಸಾಗಾಟ ನಿರಂತರವಾಗಿದ್ದರೂ ಪೊಲೀಸ್‌ ಇಲಾಖೆ ಕ್ರಮವಹಿಸುತ್ತಿಲ್ಲ ಎಂದು ದೂರಿದರು
ವೈದ್ಯಕೀಯ ಸೌಲಭ್ಯಕ್ಕೆ ರೇಷನ್‌ ಕಾರ್ಡ್‌ಗಳನ್ನು ತಕ್ಷಣದಲ್ಲಿ ಕೊಡಲಿಕ್ಕೆ ಸರ್ಕಾರ ಆದೇಶ ಮಾಡಿದೆ. ಯಾವುದೇ ರೇಷನ್‌ ಕಾರ್ಡ್‌ ಕೊಡುತ್ತಿಲ್ಲ ಎಂದು ಮಾಹಿತಿ ಇಲ್ಲದೇ ಸಭೆಗೆ ಬಂದು ಸಾರ್ವಜನಿಕರಿಗೆ ಅನ್ಯಾಯ ಮಾಡಬೇಡಿ ಎಂದು ಆಹಾರ ಸರಬರಾಜು ಇಲಾಖೆ ಅಧಿಕಾರಿ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್‌ನಲ್ಲಿ ಅಸಮಾಧಾನದ ಬೇಗುದಿ: 'ಕೈ'ನಲ್ಲಿ ಕಾಣದ ಒಗ್ಗಟ್ಟು..!

ಬೆಡ್‌ ಸೌಲಭ್ಯ:

ತಾಲೂಕಿನ 1404 ಹಾಸ್ಟೆಲ್‌ ವಿದ್ಯಾರ್ಥಿಗಳ ಪೈಕಿ, ಕೇವಲ 150 ವಿದ್ಯಾಥಿಗಳಿಗೆ ಮಾತ್ರ ಬೆಡ್‌ಗಳಿದ್ದು, ಇನ್ನುಳಿದ ವಿದ್ಯಾರ್ಥಿಗಳು ನೆಲದ ಮೇಲೆ ಮಲಗುತ್ತಿರುವುದು ಬೇಸರದ ವಿಷಯ. ಇನ್ನು 6 ತಿಂಗಳ ಒಳಗೆ ವಸತಿ ನಿಲಯದ ಎಲ್ಲ ವಿದ್ಯಾರ್ಥಿಗಳಿಗೆ ಬೆಡ್‌ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ತಾಲೂಕಿನಲ್ಲಿ 65 ಶಾಲೆಗಳು ಅವಸಾನ ಅಂಚಿನಲ್ಲಿವೆ ಎಂದು ಬಿಇಒ ವರದಿ ನೀಡಿದಾಗ, ಜಿಲ್ಲಾಧಿಕಾರಿ ದಿವಾಕರ ಅವರು ಬಿಇಒ ಮತ್ತು ಪಿಡಬ್ಲೂಡಿ ಅಧಿಕಾರಿಗಳು ಸೇರಿ ತಾಲೂಕಿನ ಶಾಲಾ ಸ್ಥಿತಿಗತಿಗಳ ಬಗ್ಗೆ ಜಂಟಿ ವರದಿ ಸಲ್ಲಿಸಲು ಹೇಳಿದರು.

ಈಗಾಗಲೇ ಮಳೆ ಕೈಕೊಟ್ಟಿದ್ದು ತಾಲೂಕಿನ ರೈತರ ಬೆಳೆಗಳು ಒಣಗಲಾರಂಭಿಸಿವೆ. ಸರ್ಕಾರಕ್ಕೆ ರೈತರ ಬೆಳೆನಷ್ಟದ ಸಂಪೂರ್ಣ ಮಾಹಿತಿ ಸಲ್ಲಿಸಬೇಕು ಎಂದು ಶಾಸಕ ನೇಮರಾಜನಾಯ್ಕ ಕೃಷಿ ಅಧಿಕಾರಿ ಸುನೀಲ್‌ ನಾಯ್ಕ ಅವರಿಗೆ ತಿಳಿಸಿದರು. ಬೆಳೆ ವಿಮೆ ತುಂಬಿ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಗೆ ಅಗತ್ಯ ಮಾಹಿತಿ ಒದಗಿಸಿ ಎಂದು ಸಚಿವರು ತಿಳಿಸಿದರು. ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮೇ, ಶಕ್ತಿ, ಗೃಹಜ್ಯೋತಿ ಯೋಜನೆಗಳ ಕುರಿತು ಅಸಡ್ಡೆ ತೋರದೆ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಿ ಎಂದರು.

ದಶಕ ಕಳೆದರೂ ದಕ್ಕದ ಪರಿಹಾರ: ಸಿಂಗಟಾಲೂರು ಏತ ನೀರಾವರಿಗಾಗಿ ಭೂಮಿ ನೀಡಿದ ರೈತರ ಗೋಳು..!

ಬಯೋಮೆಟ್ರಿಕ್‌ ಅಳವಡಿಸಿ:

ಶಾಸಕ ನೇಮರಾಜನಾಯ್ಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರ ಕಾರ್ಯವೈಖರಿ ಕುರಿತು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಇಒಗೆ ತಿಳಿಸಿದರು. ಗ್ರಾಪಂ ಸೌಲಭ್ಯಗಳನ್ನು ಜನರಿಗೆ ತಡಮಾಡದೆ ತಲುಪಿಸಿ, ಪಿಡಿಒಗಳಿಂದ ಸಮರ್ಪಕವಾಗಿ ಕೆಲಸ ತೆಗೆದುಕೊಳ್ಳಿ, ತಾಲೂಕಿನ ಕೆಲವು ಪಿಡಿಒಗಳು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಇದೆ. ಪಿಡಿಒಗಳಿಗೆ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಿ ಎಂದು ಸಿಒಒ ಸದಾಶಿವ ಪ್ರಭು ಅವರಿಗೆ ಜಿಲ್ಲಾಧಿಕಾರಿ ದಿವಾಕರ್‌ ತಿಳಿಸಿದರು.

ಹೆರಿಗೆ ಕಡಿಮೆ:

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಳು ಕಡಿಮೆ ಆಗುತ್ತಿವೆ ಎಂದರೆ, ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಯ ಡಾಕ್ಟರ್‌ಗಳ ಮೇಲೆ ನಂಬಿಕೆ ಇಲ್ಲ ಎಂಬಂತಾಗಿದೆ ಎಂದು ಜಿಲ್ಲಾಧಿಕಾರಿ ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಿಂಗಳಿಗೆ 50ರಿಂದ 60 ಹೆರಿಗೆಗಳು ಆಗುತ್ತಿವೆ ಎಂದು ಡಾ. ಶಿವರಾಜ್‌ ತಿಳಿಸಿದಾಗ, ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದರು. ಮುಂದಿನ ಸಭೆ ಒಳಗೆ ಪಟ್ಟಣದ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 200ಕ್ಕೂ ಹೆಚ್ಚು ಹೆರಿಗೆಗಳು ಆಗಬೇಕು ಎಂದು ಸಚಿವರು ವೈದ್ಯರಿಗೆ ತಿಳಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಇದೆ ಶಾಸಕರು ದೂರಿದರು.

click me!