8 ಡಿಸಿಗಳೊಂದಿಗೆ ಸಿಎಂ ಸಂವಾದ, ಈ ಜಿಲ್ಲೆಗಳಲ್ಲಿ ರೂಲ್ಸ್ ಮತ್ತಷ್ಟು ಕಟ್ಟುನಿಟ್ಟು

By Suvarna News  |  First Published Jun 10, 2021, 3:32 PM IST

* ಎಂಟು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್
* ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ
* ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ
* ಪಾಸಿಟಿವಿಟಿ ದರ ಗಣನೀಯ ಇಳಿಕೆ


ಬೆಂಗಳೂರು(ಜೂ. 10)  ಕೋವಿಡ್ ಸೋಂಕು ತೀವ್ರವಾಗಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಡಿಯೊ ಕಾನ್ಫರೆನ್ಸ್ ನಡೆಸಿ ಸೋಂಕು ನಿಯಂತ್ರಣ ಕುರಿತಂತೆ ಚರ್ಚಿಸಿದರು.

ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು. ರಾಜ್ಯದ ಒಟ್ಟು ಪ್ರಕರಣಗಳಲ್ಲಿ 65 ಸಾವಿರ ಸಕ್ರಿಯ ಪ್ರಕರಣಗಳು ಈ ಎಂಟು ಜಿಲ್ಲೆಗಳಲ್ಲಿವೆ. ಈ ಜಿಲ್ಲೆಗಳಲ್ಲಿ ಸೋಂಕಿನ ಇಳಿಕೆಯ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆ  ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.

Tap to resize

Latest Videos

ಕೊರೋನಾ ಗೆದ್ದ  ಹುಬ್ಬಳ್ಳಿಯ ದೊಡ್ಡ ಕುಟುಂಬ

ರಾಜ್ಯದಲ್ಲಿ ಕೋವಿಡ್ 2ನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕಠಿಣ ನಿರ್ಬಂಧಗಳಿಂದಾಗಿ ಸೋಂಕಿನ ತೀವ್ರತೆ ಇಳಿಮುಖವಾಗುತ್ತಿದೆ. ಆದರೆ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ. ಜೊತೆಗೆ ಮೈಸೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿರುವ ಕುರಿತು ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಅತಿ ಹೆಚ್ಚು ಅಂದರೆ, ಸರಾಸರಿ ಶೇಕಡಾ 25.17 ಪಾಸಿಟಿವಿಟಿ ದರ ದಾಖಲಾಗಿದೆ. ಮೈಸೂರಿನಲ್ಲಿಯೂ ಶೇಕಡಾ 22 ರಷ್ಟಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಸೋಂಕಿತರಿಗೆ ಸರಾಸರಿ ಕೇವಲ 6.1 ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವುದನ್ನು ಖಾತರಿ ಪಡಿಸಬೇಕು. ಜನರು ನಿರ್ಬಂಧಗಳನ್ನು ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಬೇಕು. ಮೈಕ್ರೋ ಕಂಟೈನ್‌ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡಬೇಕು. ಕೋವಿಡ್ ಪ್ರಕರಣಗಳ ಪ್ರಮಾಣ ತೀವ್ರಗತಿಯಲ್ಲಿ ಇಳಿಕೆಯಾಗುವಂತೆ ಮಾಡಿ ಪಾಸಿಟಿವಿಟಿ ರೇಟ್ ಶೇಕಡಾ 5ರ ಒಳಗಿರುವಂತೆ ಖಾತರಿ ಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಬೆಳಗಾವಿ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ರಾಪಿಡ್ ಆಂಟಿಜೆನ್ ಟೆಸ್ಟ್ ಜಾಸ್ತಿ ಮಾಡಲಾಗುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಶೇ. 30 ರಷ್ಟು ನಡೆಸಲು ಸೂಚಿಸಲಾಯಿತು. ಉಳಿದ ಶೇ. 70 ರಷ್ಟು ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನಡೆಸಬೇಕು. ಸೋಂಕಿನ ಲಕ್ಷಣ ಇರುವವರಿಗೆ ಮಾತ್ರ ಆಂಟಿಜೆನ್ ಟೆಸ್ಟ್ ಮಾಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ವರದಿ 24 ಗಂಟೆಗಳ ಒಳಗೆ ನೀಡಬೇಕು, ಸೋಂಕಿತರ ಆರೋಗ್ಯ ಸ್ಥಿತಿಗನುಗುಣವಾಗಿ ವರ್ಗೀಕರಣ ಮಾಡುವ ಪ್ರಕ್ರಿಯೆ ತ್ವರಿತವಾಗಿ ನಡೆಸಬೇಕು. ಮೈಸೂರು ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ತೀವ್ರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸುವಂತೆ ತಿಳಿಸಿದರು. ಸಂಪರ್ಕಿತರ ಟ್ರೇಸಿಂಗ್ ಹೆಚ್ಚಿಸಲು ಸೂಚಿಸಲಾಯಿತು.

ಎಲ್ಲ ಜಿಲ್ಲೆಗಳಲ್ಲಿ, ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು ಸೂಚಿಸಿದರು. ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ, ನಿರ್ಬಂಧಗಳನ್ನು ಮುಂದುವರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಈ ಬಗ್ಗೆ ಸಂಜೆ ಸಚಿವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

 

 

ಮುಖ್ಯಮಂತ್ರಿ ರವರು ಇಂದು - ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು - ಈ ಎಂಟು ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದ ಕುರಿತಂತೆ ವೀಡಿಯೋ ಸಂವಾದ ನಡೆಸಿದರು. (1/2) pic.twitter.com/7gAwjk0Za2

— CM of Karnataka (@CMofKarnataka)

"

 

click me!