ಕೊಡಗಿನಲ್ಲಿ ಅನಧಿಕೃತ ಹೋಂಸ್ಟೇಗಳಲ್ಲಿ ಸಾಕಷ್ಟು ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಇದೀಗ ಹೋಂಸ್ಟೇಗೆಂದು ಪಂಚಾಯಿತಿಯಿಂದ ಪರ್ಮಿಷನ್ ತೆಗೆದುಕೊಂಡು ಅಕ್ರಮವಾಗಿ ಕಲ್ಯಾಣ ಮಂಟಪ ನಡೆಸಲಾಗುತ್ತಿದೆ. ಆ ಮೂಲಕ ಸರ್ಕಾರಕ್ಕೆ ಕಟ್ಟಬೇಕಾಗಿರುವ ಆದಾಯಕ್ಕೆ ಖೋತಾ ಮಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.19): ಕೊಡಗು ಜಿಲ್ಲೆಯಲ್ಲಿ ಅನಧಿಕೃತ ಹೋಂಸ್ಟೇಗಳಿಗೇನು ಕಡಿಮೆ ಇಲ್ಲ. ಆದರಲ್ಲೂ ಅನಧಿಕೃತ ಹೋಂಸ್ಟೇಗಳಲ್ಲಿ ಸಾಕಷ್ಟು ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಇದೀಗ ಹೋಂಸ್ಟೇಗೆಂದು ಪಂಚಾಯಿತಿಯಿಂದ ಪರ್ಮಿಷನ್ ತೆಗೆದುಕೊಂಡು ಅಕ್ರಮವಾಗಿ ಕಲ್ಯಾಣ ಮಂಟಪ ನಡೆಸಲಾಗುತ್ತಿದೆ. ಆ ಮೂಲಕ ಪಂಚಾಯಿತಿ ಮತ್ತು ಸರ್ಕಾರಕ್ಕೆ ಕಟ್ಟಬೇಕಾಗಿರುವ ಆದಾಯಕ್ಕೆ ಖೋತಾ ಮಾಡಿದ್ದಾರೆ. ಹೆಸರಿಗೆ ಹೋಂಸ್ಟೇ, ಆದರೆ ಇಲ್ಲಿ ನಡೆಯುವ ಕಾರ್ಯಕ್ರಮಗಳೇ ಬೇರೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಟುಹೊಳೆ ಬಳಿ ಅಂಬೆಕಲ್ ಜೀವನ್ ಎಂಬುವವರು ಅಹನ್ ಹೆಸರಿನ ಹೋಂಸ್ಟೇ ಮಾಡಿದ್ದಾರೆ. ಆದರೆ ಅದನ್ನು ಅನಧಿಕೃತವಾಗಿ ಕಲ್ಯಾಣ ಮಂಟಪವಾಗಿ ಮಾರ್ಪಾಡು ಮಾಡಿದ್ದಾರೆ. ಹೋಂಸ್ಟೇಗೆ ಪಂಚಾಯಿತಿಯಿಂದ ಪರವಾನಗಿ ಪಡೆದಿದ್ದು, ನಿಯಮ ಮೀರಿ ಇಲ್ಲಿ ಕಲ್ಯಾಣ ಮಂಟಪ ನಡೆಸುತ್ತಿದ್ದಾರೆ. ಪ್ರತೀ ಮದುವೆ ಅಥವಾ ಯಾವುದೇ ಕಾರ್ಯಕ್ರಮಕ್ಕೆ ದಿನಕ್ಕೆ 30 ರಿಂದ 35 ಸಾವಿರ ರೂಪಾಯಿ ಪಡೆದು ಅದನ್ನು ಜನರಿಗೆ ಬಾಡಿಗೆ ನೀಡುತ್ತಿದ್ದಾರೆ. ಆ ಮೂಲಕ ಪಂಚಾಯಿತಿ ಮತ್ತು ಸರ್ಕಾರಕ್ಕೆ ಕಟ್ಟಬೇಕಾಗಿರುವ ತೆರಿಗೆಯನ್ನು ಕಳೆದ ಎರಡು ವರ್ಷಗಳಿಂದ ವಂಚಿಸಿದ್ದಾರೆ.
ಆದರೆ ಇದಕ್ಕಿಂತ ಮುಖ್ಯವಾಗಿ ಮದುವೆ ಮತ್ತು ಇತರೆ ಕಾರ್ಯಕ್ರಮಗಳು ನಡೆಯುವುದರಿಂದ ದೊಡ್ಡದಾಗಿ ಡಿ.ಜೆ ಮತ್ತು ಬ್ಯಾಂಡ್ ಸೆಟ್ ಬಾರಿಸಲಾಗುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಜನರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ನಿವೃತ ಮೇಜರ್ ಡಾ. ನಿರ್ಮಲ ಅವರು ಕೊಡಗು ಜಿಲ್ಲಾಧಿಕಾರಿ, ಎಸ್‍ಪಿ, ಅಷ್ಟೇ ಏಕೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೆಗೆ ದೂರು ನೀಡಿದ್ದಾರೆ. ಅದರೆ ಇದುವರೆಗೆ ಯಾರೂ ಹೋಂಸ್ಟೇ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ನಿವೃತ ಮೇಜರ್ ಡಾ. ನಿರ್ಮಲ ಮತ್ತು ಅವರ ತಂದೆ ದಿನೇಶ್ ಅವರು ದೂರಿದ್ದಾರೆ.
undefined
ಕೊಡಗು ಎಸ್‍ಪಿ ಮತ್ತು ಡಿಸಿ ಅವರಿಗೆ ದೂರು ನೀಡಿದ ಬಳಿಕ ಮಡಿಕೇರಿ ಗ್ರಾಮಾಂತರ ಪೊಲೀಸರು ಹೋಂಸ್ಟೇ ಮಾಲೀಕ ಜೀವನ್ ಕುಶಾಲಪ್ಪ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಹೋಂಸ್ಟೇನಲ್ಲಿ ಅನಧಿಕೃತವಾಗಿ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬಾಡಿಗೆ ಕೊಡುತ್ತಿದ್ದು, ಅದರಲ್ಲಿ ತೀವ್ರ ಸ್ವರೂಪದ ಧ್ವನಿ ವರ್ಧಕಗಳನ್ನು ಬಳಸುತ್ತಿರುವುದನ್ನು ನಿಲ್ಲಿಸುವಂತೆ ಸೂಚಿಸಿ ಕಳುಹಿಸಿದ್ದಾರೆ. ಆದರೂ ಹೋಂಸ್ಟೇನಲ್ಲಿ ಹಿಂದಿನಂತೆ ತಿಂಗಳಿಗೆ ನಾಲ್ಕೈದು ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುತ್ತಿದ್ದು, ಡಿ.ಜೆ ಸೌಂಡ್ಸ್ ಬಳಸುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಮನೆಯಲ್ಲಿ ಸಾಕುತ್ತಿರುವ ಪ್ರಾಣಿಗಳಿಗೂ ತೊಂದರೆ ಆಗುತ್ತಿದೆ ಎಂದು ನಿವೃತ ಮೇಜರ್ ನಿರ್ಮಲ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನವೆಂಬರ್ ತಿಂಗಳಲ್ಲಿ ದೂರು ನೀಡಿದ್ದಾರೆ.
Kodagu: ಅನೈತಿಕ ಚಟುವಟಿಕೆ ತಾಣವಾಯ್ತಾ ಗಾಂಧಿ ಭವನ, ಕಾಮಗಾರಿ ಮುಗಿದರೂ ಉದ್ಘಾಟನೆಯಿಲ್ಲ
ಇಷ್ಟಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಕೆ. ನಿಡುಗಣೆ ಗ್ರಾಮ ಪಮಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ ಅವರನ್ನು ಕೇಳಿದರೆ, ನಾವು ಫಾರಂ 11 ರ ಬಿ ನಿಯಮ ಪ್ರಕಾರ ಹೋಂಸ್ಟೇಗೆ ಮಾತ್ರ ಒಪ್ಪಿಗೆ ನೀಡಿದ್ದೇವೆ. ಅದನ್ನು ಅವರು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಹೀಗಾಗಿ ಅದಕ್ಕೆ ವಿಧಿಸುತ್ತಿರುವ ಶುಲ್ಕ ಕೂಡ ಕಡಿಮೆ. ಆದರೆ ಮದುವೆ ಮತ್ತಿತರ ಕಾರ್ಯಕ್ರಮಗಳು ನಡೆಯಬೇಕಾದರೆ, ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿಯೇ ಪರಿವರ್ತನೆ ಮಾಡಿರಬೇಕು. ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಕಾರ್ಯಗಳಿಗೂ ಬಾಡಿಗೆ ನೀಡುತ್ತಿರುವುದರಿಂದ ಪಂಚಾಯಿತಿ ಮತ್ತು ಸರ್ಕಾರಕ್ಕೆ ಕಟ್ಟಬೇಕಾಗಿರುವ ಆದಾಯದಲ್ಲೂ ಕತ್ತಿರಿ ಬೀಳುತ್ತಿದೆ ಎಂದು ಕೆ. ನಿಡುಗಣೆ ಪಂಚಾಯ್ತಿ ಅಧ್ಯಕ್ಷ ಡೀನ್ ಬೋಪಣ್ಣ ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರವಾಸ- ಶಬರಿಮಲೆ ಯಾತ್ರೆ , ಉಡುಪಿ ಜಿಲ್ಲೆಯಾದ್ಯಂತ ಪ್ರವಾಸಿಗರ ದಂಡು
ಒಟ್ಟಿನಲ್ಲಿ ಕೊಡಗಿನಲ್ಲಿ ಅನಧಿಕೃತ ಹೋಂಸ್ಟೇಗಳ ಕಾರುಬಾರು ಹೆಚ್ಚಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳ ಜೊತೆಗೆ ಸರ್ಕಾರದ ಆದಾಯಕ್ಕೂ ಕತ್ತರಿ ಹಾಕಿ ಸ್ಥಳೀಯರಿಗೂ ತೊಂದರೆ ಕೊಡುತ್ತಿರುವ ಇಂತಹವುಗಳ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಕ್ರಮಕೈಗೊಳ್ಳುತ್ತಾರಾ ಕಾದು ನೋಡಬೇಕಾಗಿದೆ.