ಬಿಜೆಪಿಗರು ವಾಸ್ತವ ಅರಿಯಲಿ, ಹಿರಿಯೂರು ಕ್ಷೇತ್ರದಲ್ಲಿ JDS ಪರ ಒಲವಿದೆ : ಹೆಚ್‌ಡಿಕೆ

Published : Nov 16, 2026, 06:53 AM IST
HD Kumaraswamy

ಸಾರಾಂಶ

ಹಿರಿಯೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ತಮಗೆ ಪ್ರತಿಷ್ಠೆಯ ವಿಷಯವಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದ್ದು, ವಾಸ್ತವವನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ರಾಮನಗರ : ಹಿರಿಯೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ನನಗೆ ಪ್ರತಿಷ್ಠೆಯ ವಿಷಯವಲ್ಲ. ಬದಲಾಗಿ, ಕ್ಷೇತ್ರದ ಜನರ ಅಭಿಪ್ರಾಯವನ್ನು ಗೌರವಿಸಬೇಕಿದೆ. ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಬೇಕು ಎಂಬುದು ಸ್ಥಳೀಯ ನಾಯಕರ, ಜನರ ಅಭಿಪ್ರಾಯ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಮನವೊಲಿಸುತ್ತೇವೆ ಎಂಬ ಹೇಳಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ಕುರಿತು ಜೆಡಿಎಸ್ ಮನವೊಲಿಸುತ್ತೇವೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಲ್ಲಿ ಜೆಡಿಎಸ್ ಸ್ಪರ್ಧಿಸಬೇಕೋ ಅಥವಾ ಬಿಜೆಪಿ ಸ್ಪರ್ಧಿಸಬೇಕೋ ಎಂಬುದಕ್ಕಿಂತ ಜನರ ಅಭಿಪ್ರಾಯ ಮುಖ್ಯ. ರಾಜ್ಯದಲ್ಲಿ ಮೈತ್ರಿಯ ರಾಜಕೀಯ ಭವಿಷ್ಯಕ್ಕಾಗಿ ಈ ಚುನಾವಣೆ ಗೆಲ್ಲುವುದು ಮುಖ್ಯ. ಈ ವಿಚಾರದಲ್ಲಿ ಎರಡೂ ಪಕ್ಷಗಳಿಗೂ ಜವಾಬ್ದಾರಿ ಇದೆ ಎಂದರು.

ವಾಸ್ತವಿಕ ಪರಿಸ್ಥಿತಿ ಏನಿದೆ?

ಅಲ್ಲಿನ ವಾಸ್ತವಿಕ ಪರಿಸ್ಥಿತಿ ಏನಿದೆ ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಹಿರಿಯೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಬೇಕು ಎಂಬುದು ಸ್ಥಳೀಯ ನಾಯಕರ, ಜನರ ಅಭಿಪ್ರಾಯ. ನನಗೆ ಇಲ್ಲಿ ಯಾವುದೇ ಪ್ರತಿಷ್ಠೆಯಿಲ್ಲ. ಹಿರಿಯೂರು ಕ್ಷೇತ್ರದ ಜನರ ಅಭಿಪ್ರಾಯವನ್ನು ಗೌರವಿಸಬೇಕು. ಕ್ಷೇತ್ರದ ಜನರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡಬೇಕು. ಇದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಹಿರಿಯೂರು ಟಿಕೆಟ್‌ ಬಿಜೆಪಿಗೆ: ಅಶೋಕ್‌ - ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿದೆ

ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗೆ ಹಿರಿಯೂರು ಟಿಕೆಟ್ ಅಂತ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿದೆ. ಇದರ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜತೆ ಮಾತಾಡುತ್ತೇವೆ. ನಾನೂ ಅವರೊಂದಿಗೆ ಮಾತಾಡುತ್ತೇನೆ. ಅಂತಿಮವಾಗಿ ಕೇಂದ್ರದ ನಾಯಕರು ಜೆಡಿಎಸ್ ಮನವೊಲಿಸಿ ಬಿಜೆಪಿಗೇ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲೂ ಹೊಂದಾಣಿಕೆ ಆಗಬೇಕು ಅಂತ ಹಲವರ ಅಭಿಪ್ರಾಯ ಇದೆ. ರಾಜ್ಯದಲ್ಲಿ ಒಂದೊಂದು ಕಡೆ ಒಂದೊಂದು ವಾತಾವರಣ ಇದೆ. ನಾವು ಶೀಘ್ರ ಸಮನ್ವಯ ಸಮಿತಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯಗಳ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಕೇಂದ್ರ ಬಿಜೆಪಿ ನಿರ್ಧಾರ ಏನಿರುತ್ತೋ ಅದಕ್ಕೆ ಬದ್ಧ ಎಂದು ತಿಳಿಸಿದರು.

ಹಿರಿಯೂರು ಕುತೂಹಲ

ಸಚಿವರಾಗಿದ್ದ ಡಿ. ಸುಧಾಕರ್‌ ಅವರ ನಿಧನದಿಂದ ತೆರವಾಗಿರುವ ಚಿತ್ರದುರ್ಗದ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ನಿರೀಕ್ಷೆಯಲ್ಲಿರುವ ರಾಜ್ಯದ ಮೂರೂ ಪಕ್ಷಗಳು ದಾಳ ಉರುಳಿಸಲು ಆರಂಭಿಸಿವೆ. ಆ ಕ್ಷೇತ್ರದಲ್ಲಿ ಎನ್‌ಡಿಎ ಕೂಟದಿಂದ ತನ್ನ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ಹೇಳಿದ್ದರೆ, ಅದಕ್ಕೆ ಮಿತ್ರಪಕ್ಷ ಜೆಡಿಎಸ್‌ ಅಪಸ್ವರ ತೆಗೆದಿದೆ. ಈ ನಡುವೆ ಉಪಚುನಾವಣೆ ಹಿನ್ನೆಲೆಯಲ್ಲಿ ಹಿರಿಯೂರಿನಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜನೆಗೆ ಮುಖ್ಯಮಂತ್ರಿ ಮುಂದಾಗಿದ್ದಾರೆ.

PREV
Read more Articles on
click me!

Recommended Stories

ಕುಮಾರ ಕೃಪಾ ಈ ಹೆಸರು ಬಂದಿದ್ದು ಹೇಗೆ? ಡಿಕೆ ಶಿವಕುಮಾರ್‌ 'ಗಂಗಾ' ನಿವಾಸದ ಹಿಂದಿನ 125 ವರ್ಷಗಳ ರೋಚಕ ಇತಿಹಾಸ
ದಕ್ಷಿಣ ಆಫ್ರಿಕಾದ ಜಲಕ್ಷಾಮಕ್ಕೆ ಚಿಕ್ಕಮಗಳೂರಿನ ರೈನಿ ತಂತ್ರಜ್ಞಾನದ ಆಸರೆ!