
ರಮೇಶ್ ಕೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ನಗರದ ದೊಡ್ಡಕೆರೆಯ ತುಂಬಾ ತ್ಯಾಜ್ಯದಿಂದ ಕೂಡಿದ್ದು ಕೆರೆಯಲ್ಲಿನ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದರೂ ನಗರಸಭೆ ಕೆರೆಯಲ್ಲಿ ತ್ಯಾಜ್ಯ ಎಸೆಯದಂತೆ ತೆಡೆಯುವಲ್ಲಿ ವಿಫಲರಾಗಿದ್ದಾರೆ.
ಒಂದು ಕಾಲದಲ್ಲಿ ನಗರದ ನಾಗರಿಕರಿಗೆ ಕುಡಿಯುವ ನೀರಿನ ಆಶ್ರಯವಾಗಿದ್ದ ದೊಡ್ಡಕೆರೆ ಒತ್ತುವರಿದಾರರಿಂದ ಈಗ ಚಿಕ್ಕಕೆರೆಯಾಗಿದೆ. ಕೆರೆಗೆ ಮಳೆ ನೀರು ಹರಿಯುತ್ತಿದ್ದ ರಾಜಕಾಲುವೆಗಳನ್ನು ರಿಯಲ್ ಎಸ್ಟೇಟ್ ಮಾಫಿಯಾದವರು ಒತ್ತುವರಿ ಮಾಡಿಕೊಂಡಿದ್ದರಿಂದ ನೀರು ಹರಿಯದೆ ಕೆರೆ ಸ್ವರೂಪವೇ ಬದಲಾಗಿತ್ತು. ಈಗ ನಗರದ ತ್ಯಾಜ್ಯ ನೀರೆಲ್ಲಾ ಕೆರೆಗೆ ಹರಿಯುತ್ತಿದೆ, ತಾಲೂಕುನಾದ್ಯಂತ ಯಾವ ಕೆರೆಯಲ್ಲಿಯೂ ನೀರಿಲ್ಲದೆ ಒಣಗುತ್ತಿದೆ. ಆದರೆ ದೊಡ್ಡಕೆರೆಯಲ್ಲಿ ಮಾತ್ರ ತುಂಬಾ ನೀರು ಶೇಖರಣೆಯಾಗಿದೆ, ಆದರೆ ಶೇಖರಣೆಯಾಗಿರುವ ನೀರು ಶುದ್ದವಾದ ನೀರಲ್ಲ ತ್ಯಾಜ್ಯ ನೀರಾಗಿದೆ.
ಇದರೊಟ್ಟಿಗೆ ಕೆರೆ ಅಕ್ಕಪಕ್ಕದಲ್ಲಿರುವ ನಾಗರಿಕರು ಅಂಗಡಿಗಳ ಮಾಲೀಕರು ದಿನ ನಿತ್ಯ ಸಂಗ್ರಹವಾಗುವ ಕಸವನ್ನು ನಗರಸಭೆಯ ವಾಹನಕ್ಕೆ ಹಾಕದೆ ನೇರವಾಗಿ ಕೆರೆಯಲ್ಲಿ ಎಸೆಯುತ್ತಿರುವುದರಿಂದ ಕೆರೆಯ ನೀರು ಕಲ್ಮಶದಿಂದ ಕೂಡಿದೆ. ಕೆರೆಯ ಬಳಿ ಹೋಗುತ್ತಿದ್ದಂತೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ, ಅಷ್ಟರ ಮಟ್ಟಿಗೆ ಕೆರೆ ಕಲ್ಮಶದಿಂದ ಆವರಿಸಿದೆ. ಕ್ಷೇತ್ರದಲ್ಲಿ ಈಬಾರಿಯೂ ಸಮರ್ಪಕವಾಗಿ ಮಳೆಯಾಗದ ಕಾರಣ ಕೆರೆಗಳ ತವರೂರಾದ ತಾಲೂಕಿನಲ್ಲಿ ಯಾವ ಕೆರೆಯಲ್ಲಿಯೂ ನೀರಿಲ್ಲದೆ ಮೂಖ ಪ್ರಾಣಿಗಳು, ಪಕ್ಷಿಗಳು ಕುಡಿಯುವ ನೀರು ಸಿಗದೆ ಪರಿತಪಿಸುವಂತಾಗಿದೆ. ಇದಲ್ಲದೆ ಮೂರು ತಾಲೂಕಿನ ನಾಗರಿಕರಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ರೂಪಿಸಿರುವ ಯರಗೋಳ್ ಡ್ಯಾಂನಲ್ಲಿಯೂ ನೀರು ದಿನೇ ದಿನೆ ಕುಸಿಯುತ್ತಿದೆ, ಇದರಿಂದ ಜನರಿಗೆ ಆತಂಕ ಶುರುವಾಗಿದೆ.
ಇಂತಹ ಸ್ಥಿತಿಯಲ್ಲಿ ಲಭ್ಯವಿರುವ ಜಲಮೂಲಗಳನ್ನು ಸಂರಕ್ಷಿಸಿಬೇಕಾಗಿರುವುದು ತಾಲೂಕು ಆಡಳಿತದ ಜವಾಬ್ದಾರಿಯಾಗಿದೆ, ಆದರೆ ನಗರದ ದೊಡ್ಡಕೆರೆಯಲ್ಲಿ ನಗರದ ಎಲ್ಲಾ ತ್ಯಾಜ್ಯಗಳು ಲಭ್ಯವಿದೆ. ಕೆರೆಯಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ನಗರಸಭೆಯ ಕರ್ತವ್ಯವಾಗಿದೆ. ಇಲ್ಲದಿದ್ದರೆ ಕೆರೆಯಲ್ಲಿನ ನೀರು ಬಳಸಲು ಯೋಗ್ಯವಾಗದೆ ವಿಷಮಯವಾಗಲಿದೆ. ಇದಲ್ಲದೆ ಕೆರೆಯ ಸುತ್ತಮುತ್ತಲೂ ಒತ್ತುವರಿಯನ್ನು ತೆಡೆಯಲು ಬೇಲಿ ಹಾಕಲಾಗಿದೆ. ಕೆರೆ ಸುತ್ತಲೂ ನಾಗರೀಕರು ನಿತ್ಯ ವಾಯುವಿಹಾರ ಮಾಡಲೆಂದು ಹತ್ತು ವರ್ಷಗಳ ಹಿಂದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಸಕ್ತಿಯಿಂದ ವಾಕಿಂಗ್ ಪಾಥ್ ನಿರ್ಮಾಣ ಮಾಡಲು ಅನುದಾನವನ್ನು ನಗರಸಭೆಗೆ ನೀಡಿದ್ದರು. ಆದರೆ ಇದುವರೆಗೂ ಯೋಜನೆ ಪೂರ್ಣಗೊಂಡಿಲ್ಲ.
ಉಳಿದ ಕಾಮಗಾರಿಗಳಾದ ವಿದ್ಯುತ್ ದೀಪಗಳಿಲ್ಲ, ಕೂರಲು ಆಸನಗಳಿಲ್ಲ,ಸ್ವಚ್ಚತೆ ಇಲ್ಲ, ಅಲ್ಲಲ್ಲಿ ಹೂವಿನ ಕುಂಡಗಳನ್ನು ಇಡಬೇಕಿತ್ತು, ಅದೂ ಇಲ್ಲ ಹೀಗೆ ಇಲ್ಲಗಳಿಂದ ಅಪೂರ್ಣಗೊಂಡಿರುವುದರಿಂದ ವಾಕಿಂಗ್ ಪಾತ್ ಸ್ಥಳದಲ್ಲಿ ರಾತ್ರಿಯ ವೇಳೆ ಕುಡುಕರ ಅಡ್ಡವಾಗಿ ಬದಲಾಗಿದೆ, ವಾಕಿಂಗ್ ಪಾತ್ ಸುತ್ತಲೂ ಮದ್ಯಪಾನ ಮಾಡಿರುವ ಬಾಟಲಿಗಳು, ಬೀಡಿ, ಸಿಗರೇಟ್‌ಗಳ ತುಂಡುಗಳ ಸಾಮ್ರಾಜ್ಯವಾಗಿದೆ. ಅಲ್ಲದೆ ವಾಕಿಂಗ್ ಪಾತ್ ಸುತ್ತಲೂ ಕಳ್ಳಿಗಿಡಗಳಿಂದ ಆವರಿಸಿಕೊಂಡು ಯಾವುದು ಕೆರೆ ಯಾವುದು ವಾಕಿಂಗ್ ಪಾತ್ ಎಂಬುದು ಹುಡುಕುವಂತಾಗಿದೆ.
ನಗರದ ದೊಡ್ಡಕೆರೆಯಲ್ಲಿ ತ್ಯಾಜ್ಯಗಳನ್ನುಎಸೆಯುವುದನ್ನು ನಗರಸಭೆ ಅಧಿಕಾರಿಗಳು ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು, ಆ ಮೂಲಕ ಕೆರೆಯ ನೀರು ಕಲುಷಿತವಾಗದಂತೆ ತಡೆದು ಕುಡಿಯಲು ಬಳಸಿಕೊಳ್ಳಬೇಕು ಎಂದು ದಲಿತ ಮುಖಂಡ ಸೂಲಿಕುಂಟೆ ಆನಂದ್ ಹೇಳಿದ್ದಾರೆ.