ಇಲ್ಲಾಳ್ ಕುಟುಂಬದಲ್ಲಿ ಮಡುಗಟ್ಟಿದೆ ಮೌನ, ಸಾವು ಬದುಕಿನಲ್ಲಿ ಮನೆ ಯಜಮಾನ, ಎಲ್ಲರಲ್ಲೂ ಆತಂಕ
ಶೇಷಮೂರ್ತಿ ಅವಧಾನಿ
ಕಲಬುರಗಿ(ಸೆ. 27): ನಮ್ಮ ತಂದೆ ಆರೋಗ್ಯದಾಗ ಸುಧಾರಣೆ ಕಂಡಿದೆ ಅಂತ ದವಾಖಾನ್ಯಾಗ ಡಾಕ್ಟರ್ ಹೇಳ್ಲಾಕತ್ತಾರ್ರಿ, ಹಾಗಂತ ನಮ್ಮಪ್ಪ ಕಣ್ಣು ಬಿಟ್ಟು ನೋಡಿಲ್ಲ, ನಮ್ಮನ್ಯಾರನ್ನ ಇನ್ನ ಗುರುತು ಹಿಡ್ದಿಲ್ರಿ, ನಮಗ ಅದೇ ಆತಂಕ ಆಗ್ಯದ ಎಂದು ಸಿಪಿಐ ಶ್ರೀಮಂತ ಇಲ್ಲಾಳ ಪರಿವಾರದ ಸದಸ್ಯರು, ಬಂಧುಗಳೆಲ್ಲರೂ ದುಃಖ- ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ. ಕಳೆದ 3 ದಿನದಿಂದ ಇಲ್ಲಿನ ಯುನೈಟೆಡ್ ಆಸ್ಪತ್ರೆ ಐಸಿಯೂ ಕೋಣೆ ಮುಂದಿನ ಮೊಗಸಾಲೆ ಬಿಟ್ಟು ಕದಲಿಲ್ಲ ಕುಟುಂಬ ಸದಸ್ಯರು. ಅದರಲ್ಲೂ ಪುತ್ರ ಕಿರಣ್, ಪುತ್ರಿ, ಪತ್ನಿಯಂತೂ ದುಃಖತಪ್ತರಾಗಿ ಚಿಂತೆಯಲ್ಲಿ ಮುಳುಗಿದ್ದಾರೆ. ಬಂಧುಗಳು, ಓರಗೆಯವರು, ಸಮಾಜ ಬಾಂಧವರೆಲ್ಲರೂ ಬಂದು ಹೋದರೂ ಇವರು ಮನದೊಳಗೆ ಮಡುಗಟ್ಟಿದ ಶೋಕ- ಆತಂಕದ ಜೊತೆಗೆ ಬದಕುವಂತಾಗಿದೆ. ಜೀವನ್ಮರಣ ಹೋರಾಟದಾಗ ಅಪ್ಪ ಇದ್ದಾನರಿ. ನನಗಂತೂ ಇದ್ಯಾವುದೂ ಹೇಂಗ ಆಯ್ತು? ಹೀಂಗೇ ಆ್ತಯ್ತಾ? ಎಂತ ನಂಬಲಿಕ್ಕೇ ಆಗವಲ್ತು ಎಂದು ಮಗ ಕಿರಣ್ ಗದ್ಗದಿತನಾಗುತ್ತಿದ್ದಾನೆ.
ಈತನದ್ದು ಪೆಟ್ರೋಲ್ ಬಂಕ್ ಬಿಸಿನೆಸ್. ಇಲ್ಲಾಳ್ ಅವರು ಗಾಂಜಾ ಮಾಫಿಯಾ ಹೊಲದಾಗೆ ಕುಂತಾಗಲೇ ಮನೆ ಮಂದಿಗೆ ಕರೆ ಮಾಡಿ ಲೋಕಾಭಿರಾಮ ಮಾತನ್ನಾಡಿದ್ದೇ ಕೊನೆ. ಪುತ್ರ, ಪುತ್ರಿ, ಪತ್ನಿ ಎಲ್ಲರೊಂದಿಗೂ ಮಾತನ್ನಾಡಿದ್ದಾರೆ. ಅದೇ ಅವರ ಕೊನೆಯ ಕರೆಯಾಗಿರೋದು ಇವರನ್ನೆಲ್ಲ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
ಕಲಬುರಗಿ: ಸಿದ್ಧತೆ ಇಲ್ಲದೆ ಗಾಂಜಾ ಗ್ಯಾಂಗ್ ಬೆನ್ನಟ್ಟಿತೆ ಕಲಬುರಗಿ ಖಾಕಿ ಪಡೆ?
ನಮ್ಮಪ್ಪ ಶುಕ್ರವಾರ 7.30ಕ್ಕೆ ನನಗೆ ಕರೆ ಮಾಡಿ ನಾರ್ಮಲ್ ಮಾತನ್ನಾಡಿದರು. ನಾನೂ ಬೇಗ ಬನ್ನಿ ಅಂತ ಹೇಳಿದ್ದೆ, ಮನ್ಯಾಗ ಸಹೋದರಿ ಜೊತೆಗೂ ಮಾತನಾಡಿದ್ದಾರೆ. ಹುಲಿ ಬೇಟೆಗೆ ಬಂದಿದೆ ಎಂದೆಲ್ಲಾ ಹೇಳಿ ಒಗಟಾಗೇ ಮಾತನ್ನಾಡಿ ಅದೇನೋ ಮಹತ್ವದ ಕೆಲದಲ್ಲಿರುವ ಸೂಚನೆ ನೀಡಿದ್ದಾರಷ್ಟೆ. ಇದಾದ ಮೇಲೆ ನಮಗೆ ನಿದ್ದೆಯಲ್ಲಿರುವವರಿಗೆ ಮಧ್ಯರಾತ್ರಿಯ ಮಾರಣಾಂತಿಕ ಹಲ್ಲೆ, ಅಪ್ಪ ಪ್ರಜ್ಞೆ ಕಳೆದುಕೊಂಡು ಜೀವನ್ಮರಣ ಹೋರಾಟದಲ್ಲಿರೋದು ಕೇಳಿ, ಆಸ್ಪತ್ರೆಗೆ ಓಡೋಡಿ ಬಂದು ಕಣ್ಣಾರೆ ನೋಡಿದಾಗಲೇ ಹೌ ಹಾರಿದ್ದೇವೆಂದು ಕಿರಣ ತಾನು ಅನುಭವಿಸುತ್ತಿರುವ ತಾತನೆಯನ್ನು ಎಳೆಎಳೆಯಾಗಿ ’ಕನ್ನಡಪ್ರಭ’ ಜೊತೆ ಹಂಚಿಕೊಂಡ.
ಯುನೈಟೆಡ್ ಆಸ್ಪತ್ರೆ ಬಿಟ್ಟು ಕದಲದ ಎಸ್ಪಿ ಇಶಾ ಪಂತ್ ನಡೆಗೆ ಮೆಚ್ಚುಗೆ
ಕಲಬುರಗಿ ಎಸ್ಪಿ ಇಶಾ ಪಂತ್ ತಮ್ಮ ಇಲಾಖೆ ಅಧಿಕಾರಿಗೆ ಒಗಿರುವ ದುರವಸ್ಥೆಗೆ ಮರುಗುತ್ತಲೇ ಸೂಕ್ತ ಚಿಕಿತ್ಸೆಗೆ ಸಕಲ ಕ್ರಮ ಕೈಗೊಂಡಿದ್ದಲ್ಲದೆ ಇಲ್ಲಾಳ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ಯುನೈಟೆಡ್ ಆಸ್ಪತ್ರೆಯ ಐಸಿಯೂ ಮೊಗಸಾಲೆ, ಆಸ್ಪತ್ರೆಯಂಗಳ, ವೈದ್ಯರ ಕೋಣೆ ಹೀಗೆ ಸತತ ಮೂರು ದಿನ ಅಲ್ಲೇ ಸುತ್ತಾಡಿ ಅಲ್ಲಿನ ಉಸ್ತುವಾರಿ ನಿರ್ವಹಿಸಿದ ಪರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಸ್ಪಿ ಸಾಹೇಬರು ಇಲ್ಲೇ ಇದ್ದಾರ್ರಿ. ವೈದ್ಯರೊಂದಿಗೆ ಸದಾಕಾಲ ಆರೋಗ್ಯ ವಿಚಾರಿಸುತ್ತ ಕುಟುಂಬದವರ ದುಃಖದಲ್ಲಿ ತಾವೂ ಭಾಗಿಯಾಗಿ ಅವರಿಗೆ ಸಾಂತ್ವನ ಹೇಳುತ್ತ ಧೈರ್ಯ ತುಂಬುತ್ತಿದ್ದಾರೆಂದು ಆಸ್ಪತ್ರೆಯಲ್ಲಿದ್ದ ಇತರೆ ರೋಗಿಗಳ ಸಹಾಯಕರು ಎಸ್ಪಿ ಇಶಾ ಪಂತ್ ಕೆಲಸಗಳನ್ನು ಮೆಚ್ಚಿಕೊಂಡರು.
ಗಾಂಜಾ ದಂಧೆ ಮಾಡುವವರ ಗುಂಪಿನ ಹಲ್ಲೆಗೊಳಗಾಗಿ ಪ್ರಜ್ಞೆ ಕಳೆದುಕೊಂಡಿರುವ ಕಲಬುರಗಿ ಸಿಪಿಐ ಶ್ರೀಮಂತ ಇಲ್ಲಾಳರ ಕುಟುಂಬದ ಜೊತೆಗೆ ಚರ್ಚಿಸಿದ್ದೇನೆ. ಕಲಬುರಗಿಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆ ತರಲಾಗಿದೆ. ಇಲ್ಲಿಯೂ ಉತ್ಕೃಷ್ಟಹಾಗೂ ಗುಣಮಟ್ಟದ ಚಿಕಿತ್ಸೆ ಅವರಿಗೆ ನೀಡಲು ಏರ್ಪಾಟು ಮಾಡಲಾಗಿದೆ. ಇಲ್ಲಾಳರ ಕುಟುಂಬದ ಜೊತೆ ನಾವಿದ್ದೇವೆ ಅಂತ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.