
ಬೆಳಗಾವಿ(ಏ.19): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್ ಬಂದೋಬಸ್ತ್‌ಗಾಗಿ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದ ಖಡೆಬಜಾರ ಪೊಲೀಸ್ ಠಾಣೆ ಪಿಎಸ್‌ಐ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಸಂಭವಿಸಿದೆ.
ಯಳ್ಳೂರ ರಸ್ತೆ ನಿವಾಸಿ ಮನೋಹರ ಗಣಾಚಾರಿ ಅಪಘಾತದಲ್ಲಿ ಮೃತಪಟ್ಟ ಪಿಎಸ್‌ಐ. ಬೆಳಗ್ಗೆ ತಮ್ಮ ಮನೆಯಿಂದ ಕರ್ತವ್ಯಕ್ಕೆ ಹಾಜರಾಗಲು ಬೈಕ್ ಮೇಲೆ ಬರುತ್ತಿದ್ದ ವೇಳೆ ಯಳ್ಳೂರ ರಸ್ತೆಯ ಕೆಎಲ್‌ಇ ಆಸ್ಪತ್ರೆಯ ಬಳಿ ನಾಯಿಯೊಂದು ಅಡ್ಡ ಬಂದಿದೆ. ಅದರ ಪ್ರಾಣ ಉಳಿಸಲು ಹೋಗಿದ್ದರಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಇದರಿಂದ ಗಣಾಚಾರಿ ಅವರಿಗೆ ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಸ್ಥಳದಲ್ಲೇ ಅಸುನೀಗಿದರು. ಗಣಾಚಾರಿ ಅವರು ಸೇವೆಯಿಂದ ನಿವೃತ್ತಿಯಾಗಲು ಇನ್ನು ಮೂರು ತಿಂಗಳ ಮಾತ್ರ ಬಾಕಿ ಇತ್ತು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಯಳ್ಳೂರಿನ ಸ್ಮಶಾನ ಭೂಮಿಯಲ್ಲಿ ಶನಿವಾರ ನೆರವೇರಿತು.
42 ಕೊರೋನಾ ಕೇಸ್ ಆದ್ರೂ ಬುದ್ದಿ ಕಲಿಯದ ಬೆಳಗಾವಿ ಜಿಲ್ಲಾಡಳಿತ: ಸಾಮಾಜಿಕ ಅಂತರ ಉಲ್ಲಂಘಣೆ..!
ಸಚಿವರಿಂದ ಅಂತಿಮ ನಮನ:
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್ ಬಂದೋಬಸ್‌್ತಗಾಗಿ ನಿಯೋಜಿಸಲಾಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್‌ಐ ಮನೋಹರ ಗಣಾಚಾರಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.
ಇಲ್ಲಿನ ಪೊಲೀಸ್ ಹುತಾತ್ಮ ಮೈದಾನದಲ್ಲಿ ಇರಿಸಲಾಗಿದ್ದ ಪಾರ್ಥಿವ ದರ್ಶನ ಪಡೆದ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಕೂಡ ಶ್ರದ್ಧಾಂಜಲಿ ಸಲ್ಲಿಸಿದರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ ಕುಮಾರ, ಡಿಸಿಪಿ ಸೀಮಾ ಲಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಪೊಲೀಸ್ ಗೌರವವನ್ನು ಕೂಡ ಸಲ್ಲಿಸಲಾಯಿತು.