ಚಿಕ್ಕಮಗಳೂರು ಜಿಲ್ಲಾದ್ಯಂತ ಶನಿವಾರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮೂವರು ಮಹಿಳಾ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು(ಏ.19) : ಜಿಲ್ಲಾದ್ಯಂತ ಶನಿವಾರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮೂವರು ಮಹಿಳಾ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೆಹೊಳೆ ಸಮೀಪದ ಹಿತ್ತಲಮಕ್ಕಿ ಗ್ರಾಮದ ಕಾಫಿ ತೋಟದಲ್ಲಿ ಮಾದಮ್ಮ (60), ಜ್ಯೋತಿ (28) ಹಾಗೂ ಮಾರಿ (27) ಮೃತಪಟ್ಟದುರ್ದೈವಿಗಳು.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿತಾಲೂಕಿನ ಈ ಮೂವರು ಮಹಿಳೆಯರು 3 ತಿಂಗಳ ಹಿಂದೆ ತಮ್ಮ ಕುಟುಂಬಸ್ಥರೊಂದಿಗೆ ಹಿತ್ತಲಮಕ್ಕಿಯ ಗಜೇಂದ್ರ ಹೆಬ್ಬಾರ್ ಅವರ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಆಗಮಿಸಿದ್ದರು. ಶನಿವಾರ ಮಧ್ಯಾಹ್ನ ತೋಟದ ಲೈನ್‌ನಲ್ಲಿರುವ ಮನೆಗಳ ಮುಂದೆ ಮೂವರೂ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಾರಿ ಮಳೆ-ಗಾಳಿ:
ಮೂಡಿಗೆರೆ ತಾಲೂಕಿನ ಬಾಳೆಹೊಳೆ, ಕಳಸ, ಹಿತ್ತಲಮಕ್ಕಿ, ಕುದುರೆಮುಖ ಸೇರಿದಂತೆ ಸುತ್ತಮುತ್ತ ಗುಡುಗು ಸಹಿತ ಮಳೆ ಬಂದಿದೆ. ಶೃಂಗೇರಿ ತಾಲೂಕಿನಲ್ಲಿ ಮಧ್ಯಾಹ್ನ 3.45ಕ್ಕೆ ಆರಂಭಗೊಂಡ ಮಳೆ ಭಾರಿ ಗಾಳಿಯೊಂದಿಗೆ 5 ಗಂಟೆವರೆಗೆ ಸುರಿಯಿತು. ಎನ್.ಆರ್.ಪುರ ಪಟ್ಟಣ ಸೇರಿದಂತೆ ಕೆಲವೆಡೆ ಸಂಜೆ 4.30ರ ವೇಳೆಗೆ ಸಾಧಾರಣ ಮಳೆ ಬಂದಿತು.
ಕೊಪ್ಪ ಪಟ್ಟಣ ಸೇರಿದಂತೆ ತಾಲೂಕಿನ ಹರಿಹರಪುರ, ಭಂಡಿಗಡಿ, ನಿಲುವಾಗಿಲು, ಸಿದ್ದರಮಠ, ನಾರ್ವೆ, ಜಯಪುರ, ಬಸ್ರಿಕಟ್ಟೆ, ಬೊಮ್ಲಾಪುರ, ಹೊಕ್ಕಳಿಕೆ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಗಾಳಿ, ಮಿಂಚಿನ ಸಹಿತ ಮಳೆಬಂದಿತು.
ಹಾರ್ಮಕ್ಕಿ ಗ್ರಾಮಸ್ಥರಿಂದಲೇ ಮದ್ಯಪಾನ ನಿಷೇಧ
ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲೂ ಸಾಧಾರಣ ಮಳೆ ಬಂದಿದೆ. ತರೀಕೆರೆ ಪಟ್ಟಣದಲ್ಲಿ ಬಲವಾಗಿ ಗಾಳಿ ಬೀಸಿದ್ದು, ಮೋಡ ಹಾಗೂ ಸಿಡಿಲಿನ ಅಬ್ಬರ ಇತ್ತು. ಕಡೂರಿನಲ್ಲೂ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇತ್ತು.