ಬೆಂಗಳೂರು: ಅಪಾರ್ಟ್‌ಮೆಂಟ್‌ ಸಂಘದ ಜತೆ ಪಿಎಸ್‌ಐ ಹೊಡೆದಾಟ..!

By Kannadaprabha NewsFirst Published Nov 6, 2022, 9:00 AM IST
Highlights

ಅಪಾರ್ಟ್‌ಮೆಂಟ್‌ ನಿರ್ವಹಣಾ ಶುಲ್ಕ ಕಟ್ಟದ್ದಕ್ಕೆ ನೀರು ಬಂದ್‌, ಇದೇ ವಿಚಾರಕ್ಕೆ ಪರಸ್ಪರ ಹೊಡೆದಾಟ, ದೂರು-ಪ್ರತಿದೂರು

ಬೆಂಗಳೂರು(ನ.06): ಅಪಾರ್ಟ್‌ಮೆಂಟ್‌ ನಿರ್ವಹಣಾ ಶುಲ್ಕ ಪಾವತಿಸದ ನಿವಾಸಿಗಳ ಮನೆಯ ನೀರಿನ ಸಂಪರ್ಕ ಕಡಿತಗೊಳಿಸಿದ ವಿಚಾರವಾಗಿ ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌(ಪಿಎಸ್‌ಐ) ನಡುವೆ ಬೀದಿ ಜಗಳವಾಗಿರುವ ಘಟನೆ ಶನಿವಾರ ನಡೆದಿದೆ.

ರಾಯಸಂದ್ರದ ಖಾಸಗಿ ಅಪಾರ್ಟ್‌ಮೆಂಟ್‌ ನಿವಾಸಿಯಾದ ಪಿಎಸ್‌ಐ ಗಂಗಾಧರ್‌ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು, ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪಿಎಸ್‌ಐ ಗಂಗಾಧರ್‌ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕುಡಿದ ಅಮಲಿನಲ್ಲಿ ಯುವಕನ ಕೈ ಕತ್ತರಿಸಿ ದುಷ್ಕರ್ಮಿಗಳ ಪುಂಡಾಟಿಕೆ: ಓರ್ವನ ಬಂಧನ

ಈ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ 490 ಪ್ಲ್ಯಾಟ್‌ಗಳು ಇದ್ದು, ಪ್ರತಿ ತಿಂಗಳು ನಿರ್ವಹಣ ವೆಚ್ಚ .3 ಸಾವಿರ ನಿಗದಿ ಮಾಡಲಾಗಿದೆ. ಕೆಲವರು ಕೆಲವು ತಿಂಗಳಿಂದ ನಿರ್ವಹಣಾ ವೆಚ್ಚ ಪಾವತಿಸಿರಲಿಲ್ಲ. ಇದರಿಂದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಶುಲ್ಕ ಕೊಡದ ಪ್ಲ್ಯಾಟ್‌ಗಳಿಗೆ ನೀರಿನ ಸಂಪರ್ಕ ಕಡಿತ ಮಾಡಿದ್ದರು. ನೀರು ಇಲ್ಲದೆ ಕೋಪಗೊಂಡ ಕೆಲವರು, ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು.

ಹೊಯ್ಸಳ ಸಿಬ್ಬಂದಿ ಅಪಾರ್ಟ್‌ಮೆಂಟ್‌ ಬಳಿಗೆ ಬಂದಿದ್ದಾರೆ. ಈ ವೇಳೆ ಸಂಘದ ಪದಾಧಿಕಾರಿಗಳು ಇದು ಆಂತರಿಕ ವಿಚಾರ. ನಿಮ್ಮನ್ನು ಯಾರು ಇಲ್ಲಿಗೆ ಕರೆಸಿದ್ದು ಎಂದು ಏರುದನಿಯಲ್ಲಿ ಪೊಲೀಸರನ್ನು ಪ್ರಶ್ನಿಸಿದರು ಎನ್ನಲಾಗಿದೆ. ಈ ವೇಳೆ ಅಲ್ಲೇ ಇದ್ದ ಪಿಎಸ್‌ಐ ಗಂಗಾಧರ್‌ ಮಧ್ಯಪ್ರವೇಶಿಸಿ ನೀರಿನ ಸಂಪರ್ಕ ಕಡಿತ ಮಾಡಿದ್ದಕ್ಕೆ ಕೋಪಗೊಂಡಿದ್ದರು. ಈ ವೇಳೆ ಸಂಘದ ಪದಾಧಿಕಾರಿಗಳು ಹಾಗೂ ಗಂಗಾಧರ್‌ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಂಗಾಧರ್‌ ಪದಾಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
 

click me!