ಬೆಂಗ್ಳೂರಲ್ಲಿ ರಸ್ತೆ ಗುಂಡಿ: ಅಧಿಕಾರಿಗಳಿಗೆ ರಾಕೇಶ್‌ ‘ಚಾರ್ಜ್‌!’

By Kannadaprabha NewsFirst Published Nov 6, 2022, 7:30 AM IST
Highlights

ಸಿಎಂ ಛಾಟಿ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳೊಂದಿಗೆ ಆಡಳಿತಾಧಿಕಾರಿ ಸರಣಿ ಸಭೆ, ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ಬೆಂಗಳೂರು(ನ.06):  ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ ಗುಂಡಿ ಭರ್ತಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಪ್ರತಿ ದಿನ ವರದಿ ನೀಡಬೇಕು, ಗುಂಡಿ ಭರ್ತಿ ನಿಯಮ ಕಡ್ಡಾಯವಾಗಿ ಪಾಲಿಸಿ, ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ನಿರ್ದೇಶಿಸಿದ್ದಾರೆ.

ನಗರದ ರಸ್ತೆ ಗುಂಡಿ ಮುಚ್ಚುವ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಶನಿವಾರ ಸಹ ಸರಣಿ ಸಭೆ ನಡೆಸಿ, ತ್ವರಿತವಾಗಿ ರಸ್ತೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Latest Videos

ಬೆಂಗ್ಳೂರಿನ ಐಟಿ-ಬಿಟಿ ವಲಯದಲ್ಲೂ ರಸ್ತೆಗಳು ನೆಟ್ಟಗಿಲ್ಲ..!

ಆಯಾ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಆಯಾ ವಿಭಾಗಗಳ ಎಂಜಿನಿಯರ್‌ಗಳ ಸಮಕ್ಷಮದಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ರಾತ್ರಿ ವೇಳೆ ಸಂಚಾರ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿ, ಯಂತ್ರಗಳನ್ನು ಬಳಸಿ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ರಸ್ತೆ ಅಭಿವೃದ್ಧಿ ಪಡಿಸಿದ ಬಳಿಕ ನಿರ್ವಹಣೆ ಅವಧಿ ಬಾಕಿ ಇರುವ ರಸ್ತೆಗಳ ಗುಂಡಿಗಳನ್ನು ಆಯಾ ಗುತ್ತಿಗೆದಾರರ ಮೂಲಕವೇ ಮುಚ್ಚಿಸಬೇಕು ಎಂದು ತಿಳಿಸಿದರು.

ರಸ್ತೆ ಗುಂಡಿ ಮುಚ್ಚುವ ಜತೆಗೆ ಪಾದಚಾರಿ ಮಾರ್ಗಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ. ರಾಜಕಾಲುವೆ ಅಭಿವೃದ್ಧಿ, ಕಸದ ಸಮಸ್ಯೆ ನಿವಾರಣೆ, ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಸಬ್‌ ವೇ(ಪಾದಚಾರಿ ಕೆಳಸೇತುವೆ) ಕಾರ್ಯಾಚರಣೆಯಲ್ಲಿರಬೇಕು. ಸಾರ್ವಜನಿಕರ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು. ಪ್ರಮುಖವಾಗಿ ಗುರುತಿಸಿರುವ 10 ಜಂಕ್ಷನ್‌ಗಳನ್ನು ಆದ್ಯತೆ ಮೇರೆಗೆ ವಿವಿಧ ಇಲಾಖೆಗಳ ಜತೆಗೆ ಸಮನ್ವಯದೊಂದಿಗೆ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಡಿಯೋ ಕಾನ್ಫರೆನ್ಸಲ್ಲೇ ರಸ್ತೆ ಗುಂಡಿ ಪರಿಶೀಲನೆ

ಶನಿವಾರ ಮಧ್ಯಾಹ್ನ 12ರ ಒಳಗಾಗಿ ಮುಖ್ಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಬೇಕು. ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹೇಳಿದ್ದರು. ಶನಿವಾರ ಸ್ಥಳಕ್ಕೆ ನೇರವಾಗಿ ಭೇಟಿ ನೀಡದ ರಾಕೇಶ್‌ ಸಿಂಗ್‌ ಅವರು, ಪಾಲಿಕೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್‌ ಮೂಲಕವೇ ನಗರದ ಎಂಟು ವಲಯದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದರು.
 

click me!