ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಸಮರ್ಪಕವಾಗಿ ತಲುಪಿಸಬೇಕು. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಿ. ನಿಧನರಾದ 7 ಜನ ಪೌರಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ಸೂಚಿಸಿದರು
ಹುಬ್ಬಳ್ಳಿ (ಆ.25) : ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಸಮರ್ಪಕವಾಗಿ ತಲುಪಿಸಬೇಕು. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಿ. ನಿಧನರಾದ 7 ಜನ ಪೌರಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ಸೂಚಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಇಲ್ಲಿನ ಪಾಲಿಕೆಯಲ್ಲಿ ಇನ್ನಷ್ಟುಸುಧಾರಣೆ ಆಗಬೇಕು ಎಂದ ಅವರು, ಗುತ್ತಿಗೆದಾರರು ಕಾರ್ಮಿಕರ ಬ್ಯಾಂಕ್ ಪಾಸ್‌ಬುಕ್ ಹಾಗೂ ಎಟಿಎಂ ಕಾರ್ಡ್ ತೆಗೆದುಕೊಳ್ಳಬಾರದು. ತೆಗೆದುಕೊಂಡಿದ್ದು ತಿಳಿದರೆ ಅಂತಹ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ಕೆಲಸದ ಒತ್ತಡದಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಿ ಜೀವಿತಾವಧಿ ಇಳಿಕೆಯಾಗುತ್ತದೆ. ಹೀಗಾಗಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಮಾಸ್‌್ಕ, ಬೂಟು, ಗ್ಲೌಸ್, ರೇನ್ ಕೋಟ್, ಸಮವಸ್ತ್ರ, ವೈದ್ಯಕೀಯ ಕಿಟ್ ಮತ್ತಿತರ ಸಾಮಗ್ರಿಗಳನ್ನು ಕಾರ್ಮಿಕರಿಗೆ ಒದಗಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು. ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಶುದ್ಧ ಕುಡಿಯುವ ನೀರು, ಉತ್ತಮ ಗುಣಮಟ್ಟದ ಉಪಾಹಾರ , ಮೂತ್ರಾಲಯ ವ್ಯವಸ್ಥೆ ಒದಗಿಸಬೇಕು. ಅವರ ವಾಸ ಸ್ಥಳದಿಂದ ಹತ್ತಿರದ ಪ್ರದೇಶದ ಕೆಲಸಕ್ಕೆ ಹಾಜರಾಗಲು ಅನುವು ಮಾಡಿಕೊಡಬೇಕು ಎಂದ ಕೋಟೆ, ಅಕ್ಟೋಬರ್‌ನಲ್ಲಿ ಮತ್ತೆ ಸಭೆ ನಡೆಸಿ, ಈಗ ಚರ್ಚಿಸಿದ ಸಮಸ್ಯೆಗಳ ನಿವಾರಣೆ ಪರಿಶೀಲಿಸಲಾಗುವುದು ಎಂದರು.
ಪೌರ ಕಾರ್ಮಿಕರ ಮಕ್ಕಳ ಆರೋಗ್ಯ, ಕೌಶಲ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಪೌರ ಕಾರ್ಮಿಕರು ಹಾಗೂ ಕಸ ಸಂಗ್ರಹಣೆ ಟಿಪ್ಪರ್ ಚಾಲಕರಿಗೆ ಜೀವ ವಿಮೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಜೆ.ಸಿ. ನಗರದ ವಲಯ ಕಚೇರಿ 8ರಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಿದ್ದು ಉಳಿದೆಡೆಯೂ ನಿರ್ಮಿಸಲಾಗುವುದು ಎಂದರು.
ಪೌರಸಂಸ್ಥೆಗಳಲ್ಲಿ ಶೇ.33 ಒಬಿಸಿ ಮೀಸಲಿಗೆ ಶಿಫಾರಸು: ಭಕ್ತವತ್ಸಲ ಆಯೋಗದಿಂದ ವರದಿ ಸಲ್ಲಿಕೆ
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ ಎಚ್., ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಮಾಸ್‌್ಕ, ಬೂಟು, ಗ್ಲೌಸ್ ವಿತರಿಸಲಾಯಿತು. ರಾಜ್ಯ ಸಫಾಯಿ ಕರ್ಮಚಾರಿಗಳ ಅಯೋಗದ ಕಾರ್ಯದರ್ಶಿ ಚಂದ್ರಕಲಾ, ಸದಸ್ಯ ಕೆ.ಪಿ. ವೆಂಕಟೇಶ, ರಾಜ್ಯ ಪರಿಷತ್ ಅಧ್ಯಕ್ಷ ಜಗದೀಶ ಹಿರೇಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಂಬರ, ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸದಸ್ಯರಾದ ರೇಣುಕಪ್ಪ ಕೇಲೂರ, ವಿದ್ಯಾ ನರಸಪ್ಪನವರ, ಹನುಮಂತಪ್ಪ ಮಾಲಪಲ್ಲಿ, ಭೀಮರಾವ್ ಸವಣೂರ, ಕಾರ್ಮಿಕ ಇಲಾಖೆಯ ಲಲಿತಾ ಸಾತೇನಹಳ್ಳಿ, ತಹಸೀಲ್ದಾರ್ ಜಿ.ವಿ. ಪಾಟೀಲ್, ಎಚ್.ಎ. ಕೊಚ್ಚರಗಿ ಸೇರಿದಂತೆ ಪಾಲಿಕೆಯ ವಿವಿಧ ವಲಯಗಳ ಆಯುಕ್ತರು, ವಲಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.