Kodagu: ನಿವೇಶನಕ್ಕಾಗಿ ಸರ್ಕಾರಿ ಜಾಗದಲ್ಲಿ ಕುಳಿತ ಪ್ರತಿಭಟನಾಕಾರರ ಗುಡಿಸಲು ತೆರವು

Published : Apr 30, 2025, 08:01 PM ISTUpdated : Apr 30, 2025, 08:02 PM IST
Kodagu: ನಿವೇಶನಕ್ಕಾಗಿ ಸರ್ಕಾರಿ ಜಾಗದಲ್ಲಿ ಕುಳಿತ ಪ್ರತಿಭಟನಾಕಾರರ ಗುಡಿಸಲು ತೆರವು

ಸಾರಾಂಶ

ಜಿಲ್ಲೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಾಫಿ ಎಸ್ಟೇಟ್, ಎಸ್ಟೇಟ್ ಮಾಲೀಕರುಗಳಿದ್ದರೆ, ಅಷ್ಟೇ ಪ್ರಮಾಣದಲ್ಲಿ ಬಡ ಕೂಲಿ ಕಾರ್ಮಿಕರು, ನಿವೇಶನ ರಹಿತರು ಇದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.30): ಜಿಲ್ಲೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಾಫಿ ಎಸ್ಟೇಟ್, ಎಸ್ಟೇಟ್ ಮಾಲೀಕರುಗಳಿದ್ದರೆ, ಅಷ್ಟೇ ಪ್ರಮಾಣದಲ್ಲಿ ಬಡ ಕೂಲಿ ಕಾರ್ಮಿಕರು, ನಿವೇಶನ ರಹಿತರು ಇದ್ದಾರೆ. ಹಲವು ವರ್ಷಗಳಿಂದ ನಿವೇಶ ನೀಡುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಬದಲಾಗಿ ಸರ್ಕಾರಿ ಜಾಗದಲ್ಲಿ ಟೆಂಟ್ ಹಾಕಿ ಕುಳಿತು ಪ್ರತಿಭಟಿಸುತ್ತಿದ್ದವರನ್ನೇ ಅಧಿಕಾರಿಗಳು ಒಕ್ಕಲೆಬ್ಬಿಸಿ ದರ್ಪ ಮೆರೆದಿದ್ದಾರೆ. ಅಧಿಕಾರಿಗಳ ವಿರುದ್ಧ ನಿವೇಶನ ರಹಿತರು ಅಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ. ರಾಜ್ಯಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದು. 

ಆದರೆ ಜಿಲ್ಲೆಯಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ಬಡ ಕೂಲಿ ಕಾರ್ಮಿಕರಿದ್ದು, ಅವರತ್ತ ಮಾತ್ರ ಸರ್ಕಾರ ಗಮನಹರಿಸುವುದಿಲ್ಲ ಎನ್ನುವುದಕ್ಕೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ಸ್ವಂತ ಸೂರಿಗಾಗಿ ಶಾಂತಿಯುತ ಧರಣಿ ನಡೆಸುತ್ತಿದ್ದವರನ್ನು ಅಧಿಕಾರಿಗಳು ಏಕಾಏಕಿ ಗುಡಿಸಲನ್ನೇ ತೆರವುಗೊಳಿಸಿರುವುದು ಸಾಕ್ಷಿ. ಅಮ್ಮತ್ತಿ ಹಾಗೂ ಕಾರ್ಮಾಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನೂರಾರು ಬಡಕೂಲಿ ಕಾರ್ಮಿಕರು, ದಲಿತ ಹಾಗೂ ಆದಿವಾಸಿ ಕುಟುಂಬಗಳು ಹಲವು ವರ್ಷಗಳಿಂದ ಕಾಫಿ ತೋಟಗಳ ಲೈನ್ ಮನೆಗಳಲ್ಲಿಯೇ ಜೀವನ ಮಾಡುತ್ತಿದ್ದರು. ನಿವೇಶನ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಅಧಿಕಾರಿಗಳು ಅದಕ್ಕೆ ಕಿವಿಗೊಡದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಅಮ್ಮತ್ತಿಯ ಬಳಿ ಸರ್ಕಾರಿ ಪೈಸಾರಿ ಭೂಮಿಯಲ್ಲಿ ತಾತ್ಕಾಲಿಕ ಗುಡಿಸಲು ಹಾಕಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. 

ಪಾಕಿಸ್ತಾನದ ಪ್ರಜೆಗಳ ಗಡಿಪಾರಿಗೆ ಅಗತ್ಯ ಕ್ರಮ: ಪರಮೇಶ್ವರ್‌ ಸ್ಪಷ್ಟನೆ

ಆದರೆ ಉಪತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ತೆರವು ಮಾಡಿದ್ದಾರೆ. ಮಳೆ ಬರುತ್ತಿದ್ದರು ಕನಿಷ್ಠ ಮಾನವೀಯತೆಯನ್ನು ತೋರಿಸದೆ ಗುಡಿಸಲನ್ನು ತೆರವು ಮಾಡಿದ್ದಾರೆ. ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು ಚಾಪೆ, ಚೀಲ ಸೇರಿದಂತೆ ವಿವಿಧ ವಸ್ತುಗಳನ್ನು ತಲೆಮೇಲೆ ಹಾಕಿಕೊಂಡು ಮಳೆಯಿಂದ ರಕ್ಷಣೆ ಪಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಧಿಕಾರಿಗಳು ಸ್ಥಳದಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳ ನಡವಳಿಕೆಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಉಳ್ಳವರೇ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಬಿಡಿಸಿ ಬಡ ನಿವೇಶನ ರಹಿತರಿಗೆ ನಿವೇಶನ ನೀಡುವುದಕ್ಕೆ ಬದಲಾಗಿ ಅಧಿಕಾರಿಗಳು ಬಡವರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಮೊಣ್ಣಪ್ಪ ಆಕ್ರೋಶ ಹೊರಹಾಕಿದ್ದಾರೆ. ನಂತರ ತಹಶೀಲ್ದಾರ್ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸಂಜೆ ಸಮಯದಲ್ಲಿ ಬಂದ ಅಧಿಕಾರಿಗಳು ಏಕಾಏಕಿ ಗುಡಿಸಲುಗಳನ್ನು ತೆರವು ಮಾಡಿದ್ದರಿಂದ ಬೇರೆ ದಾರಿಯಿಲ್ಲದೆ ಪ್ರತಿಭಟನಾಕಾರರು ಅಮ್ಮತ್ತಿ ನಾಡಕಚೇರಿ ಬಳಿ ಅಹೋರಾತ್ರಿ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಅಲ್ಲಿಯೇ ಊಟ, ತಿಂಡಿ ತಯಾರಿಸಿ ತಮ್ಮ ಹೋರಾಟ ನಡೆಸುತ್ತಿದ್ದಾರೆ. 

ಹೋರಿ ಮಾರಿದ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ ಮಗ

ಚಳಿ, ಗಾಳಿ ಮಳೆ ಬಿಸಲನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ನಿರತರಾಗಿರುವ ದಲಿತ ಹಾಗೂ ಆದಿವಾಸಿ ಕುಟುಂಬಗಳು, ನಿವೇಶನ ವಿತರಣೆ ಮಾಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟುಹಿಡಿದಿದ್ದಾರೆ. ಲೈನ್ ಮನೆಗಳಲ್ಲಿ ವಾಸಿಸಿದರೆ ಜೀತದ ಆಳುಗಳಂತೆ ದುಡಿಯಬೇಕು. ಆರೋಗ್ಯದ ಸಮಸ್ಯೆ ಎದುರಾದರೂ ಕೂಲಿ ಮಾಡಲೇಬೇಕು. ಅದೇ ನಮ್ಮದೂ ಒಂದು ಸೂರು ಇದ್ದರೆ ಸ್ವತಂತ್ರವಾಗಿ ಬದುಕಬಹುದು. ಈ ಕಷ್ಟ ಸರ್ಕಾರ ಮತ್ತು ಅಧಿಕಾರಿಗಳಿಗೆ ಹೇಗೆ ಅರ್ಥವಾಗಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ವರ್ಷಗಳು ಕಳೆದಂತೆ ನಿವೇಶನ, ವಸತಿ ರಹಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪ್ರತಿಭಟನಾನಿರತರನ್ನು ಬಗ್ಗುಬಡಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿರುವುದು ವಿಪರ್ಯಾಸ.

PREV
Read more Articles on
click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!