ಮಂಗಳೂರಿನ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಸ್ಥಳ ಇನ್ನು ಬದಲಾಗುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿಯಿಂದ ಆರಂಭವಾದ ಪ್ರತಿಭಟನೆ ಬಳಿಕ ಗಲಭೆ ಸ್ವರೂಪ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳವನ್ನೇ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಮಂಗಳೂರು(ಡಿ.31): ಮಂಗಳೂರು ಹಿಂಸಾಚಾರ ಘಟನೆ ಬಳಿಕ ಸ್ಟೇಟ್‌ಬ್ಯಾಂಕ್ ಬಳಿಯ ಜಿಲ್ಲಾಧಿಕಾರಿ ಕಚೇರಿ ಗೇಟಿನ ಎದುರಿನ ಪ್ರತಿಭಟನಾ ಸ್ಥಳವನ್ನು ಸ್ಥಳಾಂತರಿಸುವ ಹಳೆ ಪ್ರಸ್ತಾವನೆಗೆ ಈಗ ಮರುಜೀವ ಬಂದಿದೆ.
2016ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರ ಮುತುವರ್ಜಿಯಲ್ಲಿ ಪ್ರತಿಭಟನಾ ಸ್ಥಳವನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಪ್ರಸ್ತಾವನೆ ಸಿದ್ಧಗೊಂಡಿತ್ತು. ಅವರ ವರ್ಗಾವಣೆ ನಂತರ ಈ ಪ್ರಸ್ತಾವನೆ ನೆನೆಗುದಿಗೆ ಬಿತ್ತು. ಈಗ ಡಿ.19ರಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿಯಿಂದ ಆರಂಭವಾದ ಪ್ರತಿಭಟನೆ ಬಳಿಕ ಗಲಭೆ ಸ್ವರೂಪ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳವನ್ನೇ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಬೇರೆ ಕಡೆ ನಿರ್ದಿಷ್ಟಜಾಗ:
ಬಹಳ ಹಿಂದಿನಿಂದಲೂ ಸ್ಟೇಟ್‌ಬ್ಯಾಂಕ್ ಬಳಿಯ ಡಿಸಿ ಕಚೇರಿ ಗೇಟ್‌ನ ಎದುರು ಪ್ರತಿಭಟನೆ ನಡೆಯುತ್ತಿದೆ. ಇದೇ ಜಾಗವನ್ನು ಪ್ರತಿಭಟನೆಗೆ ಮೀಸಲು ಇರಿಸಲಾಗಿದೆ. ಮೂರು ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಿರಂತರವಾಗಿ ಪ್ರತಿಭಟನೆಗಳ ನಡೆಯುತ್ತಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಕಚೇರಿ ಉದ್ಯೋಗಿಗಳಿಗೆ ಡಿಸಿ ಕಚೇರಿ ಸೇರಿದಂತೆ ಇಲ್ಲಿರುವ ವಿವಿಧ ಕಚೇರಿಗಳಿಗೆ ತೆರಳಲು ತ್ರಾಸ ಪಡಬೇಕಾಗುತ್ತಿತ್ತು. ದೊಡ್ಡ ರೀತಿಯ ಪ್ರತಿಭಟನೆಗಳಾದರೆ, ಡಿಸಿ ಕಚೇರಿ ರಸ್ತೆಯೇ ಬಂದ್ ಮಾಡಬೇಕಾಗುತ್ತಿತ್ತು. ಈ ಬವಣೆಯಿಂದ ಮುಕ್ತಿ ನೀಡಲು ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಪ್ರತಿಭಟನಾ ಸ್ಥಳವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ತೀರ್ಮಾನಿಸಿದ್ದರು.
ಮಧ್ಯರಾತ್ರಿ 12.15ರ ವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ
ಈ ಕುರಿತು ಆಗಿನ ಪೊಲೀಸ್ ಕಮಿಷನರ್ ಚಂದ್ರಸೇಖರ್ ಜೊತೆ ಚರ್ಚೆ ನಡೆಸಿ ಮೂರು ಸ್ಥಳಗಳನ್ನು ಪ್ರತಿಭಟನೆಗೆ ಮೀಸಲಿರಿಸಲು ನಿರ್ಧರಿಸಿದ್ದರು. ನೆಹರೂ ಮೈದಾನದ ಪೆವಿಲಿಯನ್, ಪುರಭವನದ ಎದುರು ಹಾಗೂ ಮಿನಿ ವಿಧಾನಸೌಧ ಎದುರು ಎಂದು ಪ್ರತ್ಯೇಕ ಜಾಗಗಳನ್ನು ಗುರುತಿಸಲಾಗಿತ್ತು. ಕೊನೆಯಲ್ಲಿ ನೆಹರೂ ಮೈದಾನದ ನೆಹರೂ ಪ್ರತಿಮೆ ಎದುರು ಪ್ರತಿಭಟನೆಗೆ ಸೂಕ್ತ ಸ್ಥಳ ಎಂದು ನಿಗದಿಪಡಿಸಲಾಗಿತ್ತು. ಈ ಕುರಿತು ಮಹಾನಗರ ಪಾಲಿಕೆ ಜೊತೆಗೆ ಚರ್ಚಿಸಿ ಸ್ಥಳ ನಿಗದಿಪಡಿಸಲಾಗಿತ್ತು.
ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಆದರೆ ಎಲ್ಲರಿಂದ ಪೂರ್ಣ ಮಾಹಿತಿ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಜಾಗ ಸ್ಥಳಾಂತರ ಬಗ್ಗೆ ನೋಟಿಫಿಕೇಶನ್ ಹೊರಡಿಸುವುದನ್ನು ಕಾದಿರಿಸಲಾಗಿತ್ತು. ಈ ವೇಳೆಗೆ ಜಿಲ್ಲಾಧಿಕಾರಿ ಇಬ್ರಾಹಿಂ ವರ್ಗಾವಣೆಗೊಂಡಿದ್ದರು.
ನಂತರ ಡಾ.ಕೆ.ಜಿ.ಜಗದೀಶ್ ಹಾಗೂ ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರೂ ಪ್ರತಿಭಟನಾ ಜಾಗ ಸ್ಥಳಾಂತರದ ಪ್ರಸ್ತಾವನೆ ಕಡತದಲ್ಲೇ ಉಳಿದಿತ್ತು.
ಈಗ ಪ್ರಸ್ತಾಪಕ್ಕೆ ಮರುಜೀವ:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಜಾಗವನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಅನಿವಾರ್ಯತೆ ಕುರಿತು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ಪ್ರಸ್ತುತ ಪ್ರತಿಭಟನೆಗಳು ನಡೆಯುತ್ತಿರುವುದು ಜಿಲ್ಲಾಧಿಕಾರಿ ಕಚೇರಿ ಗೇಟಿನ ಎದುರಿನ ಭಾಗದಲ್ಲಿ. ಇದು ಸ್ಟೇಟ್‌ಬ್ಯಾಂಕ್‌ನ ಜನ ಹಾಗೂ ವಾಹನ ನಿಬಿಡ ಪ್ರದೇಶವಾಗಿದೆ. ಪಜೇ ಪದೇ ಇಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಡಿಸಿ ಕಚೇರಿ ಸೇರಿದಂತೆ ಸಾರ್ವಜನಿಕರ ಕಚೇರಿ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಪಕ್ಕದಲ್ಲೇ ಸ್ಟೇಟ್‌ಬ್ಯಾಂಕ್ ಪ್ರಧಾನ ಕಚೇರಿ ಇದ್ದು, ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಲ್ಲ ಎಂಬುದನ್ನು ಪೊಲೀಸ್ ಇಲಾಖೆ ಕಂಡುಕೊಂಡಿದೆ. ಇಲ್ಲಿಯೇ ಸಮೀಪ ಸ್ಟಾರ್ ಹೊಟೇಲ್ ಇದ್ದು, ಅಲ್ಲಿಗೆ ಶ್ರೀಲಂಕಾ ಪ್ರಧಾನಿ, ದಲಾಯಿಲಾಮ ಸೇರಿದಂತೆ ಪ್ರಮುಖ ರಾಜಕೀಯ ಗಣ್ಯರು ಆಗಮಿಸುತ್ತಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಡಿಸಿ ಕಚೇರಿ ಗೇಟಿನ ಎದುರಿನ ಪ್ರತಿಭಟನಾ ಸ್ಥಳವನ್ನು ಬದಲಾಯಿಸುವುದೇ ಉತ್ತಮ ಎಂಬ ಚಿಂತನೆಯನ್ನು ಪೊಲೀಸ್ ಇಲಾಖೆ ಹೊಂದಿದೆ.
ಪೇಜಾವರ ಶ್ರೀ: ಈಡೇರಿದ 2 ಆಸೆಗಳು, ಈಡೇರದ 3 ಕನಸುಗಳು
ಇದಕ್ಕೆ ಪೂರಕವಾಗಿ ಗುಪ್ತಚರ ಇಲಾಖೆ ಕೂಡ ಪ್ರತಿಭಟನಾ ಸ್ಥಳವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಉತ್ತಮ ಎಂಬ ಅಭಿಪ್ರಾಯ ನೀಡಿದೆ ಎಂದು ಹೇಳಲಾಗಿದೆ. ಈಗ ಡಿಸಿ ಕಚೇರಿ ಗೇಟಿನ ಎದುರಿನ ಪ್ರದೇಶ ಸೂಕ್ಷವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿಭಟನೆಗೆ ಅವಕಾಶ ನೀಡದೇ ಇರುವುದು ಉತ್ತಮ ಎಂಬ ಸಲಹೆಯನ್ನು ಇಲಾಖೆ ನೀಡಿದೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳು ಜಿಲ್ಲಾಡಳಿತ ಜೊತೆ ಇನ್ನಷ್ಟೆಮಾತುಕತೆ ನಡೆಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಅಜಿತ್ ಪವಾರ್‌ಗೆ ಮತ್ತೆ ಡಿಸಿಎಂ ಪಟ್ಟ, ಠಾಕ್ರೆ ಪುತ್ರ ಮಂತ್ರಿ!
ಪ್ರತಿಭಟನಾ ಸ್ಥಳವನ್ನು ಡಿಸಿ ಗೇಟ್ ಮುಂಭಾಗದಿಂದ ಬೇರೆ ಕಡೆಗೆ ಸ್ಥಳಾಂತರಿಸುವ ಕುರಿತಂತೆ ಕಡತವನ್ನು ತರಿಸಿ ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಈ ಬಗ್ಗೆ ಪೊಲೀಸ್ ಕಮಿಷನರ್ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಹೇಳಿದ್ದಾರೆ.
-ಆತ್ಮಭೂಷಣ್