ಪೇಜಾವರ ಶ್ರೀ: ಈಡೇರಿದ 2 ಆಸೆಗಳು, ಈಡೇರದ 3 ಕನಸುಗಳು

By Kannadaprabha News  |  First Published Dec 31, 2019, 11:03 AM IST

ಪೇಜಾವರ ಶ್ರೀಗಳು ಸಮಾಜಕ್ಕಾಗಿ ಬಹಳ ದೊಡ್ಡ ಕನಸುಗಳನ್ನು ಕಂಡಿದ್ದರು. ವೈಯಕ್ತಿಕವಾಗಿ 2 ಆಸೆಗಳನ್ನೂ ಹೇಳಿಕೊಂಡಿದ್ದರು. ಅವರ ಉತ್ತರಾಧಿಕಾರಿ ಪಟ್ಟ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರು ಅವೆರಡನ್ನೂ ಭಾನುವಾರ ಈಡೇರಿಸಿದ್ದಾರೆ. ಆದರೆ ಅವರ ಮೂರು ಕನಸುಗಳು ಇನ್ನೂ ಕನಸುಗಳಾಗಿಯೇ ಉಳಿದಿವೆ.


ಉಡುಪಿ(ಡಿ.31): ಸಮಾಜಕ್ಕಾಗಿ ಬಹಳ ದೊಡ್ಡ ಕನಸುಗಳನ್ನು ಕಂಡವರು ಪೇಜಾವರ ಶ್ರೀಗಳು. ಜತೆಗೆ ವೈಯಕ್ತಿಕವಾಗಿ 2 ಆಸೆಗಳನ್ನೂ ಹೇಳಿಕೊಂಡಿದ್ದರು. ಅವರ ಉತ್ತರಾಧಿಕಾರಿ ಪಟ್ಟ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರು ಅವೆರಡನ್ನೂ ಭಾನುವಾರ ಈಡೇರಿಸಿದ್ದಾರೆ.

ಮೊದಲನೆಯದಾಗಿ ಪೇಜಾವರ ಶ್ರೀಗಳು ತಾನು ಶ್ರೀ ಮಠದಲ್ಲಿಯೇ ಕೊನೆಯುಸಿರೆಳೆಯಬೇಕು ಎಂದು ಆಶಿಸಿದ್ದರು. ಆಸ್ಪತ್ರೆಯಲ್ಲಿ ಅವರ ಗಂಭೀರ ಪರಿಸ್ಥಿತಿಯನ್ನು ನೋಡಿದಾಗ ಅವರ ಆಸೆ ಈಡೇರುವ ಬಗ್ಗೆ ಸಂಶಯದಿಂದ ಮಠದ ಆಪ್ತರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಆದರೆ ಕಿರಿಯ ಶ್ರೀಗಳು ಶತಾಯ ಗತಾಯ ಗುರುಗಳ ಆಸೆ ಈಡೇರಿಸುವುದಕ್ಕೆ ನಿರ್ಧರಿಸಿದ್ದರು.

Latest Videos

undefined

ದಲಿತರ ಮೇಲೆ ಹಲ್ಲೆಯಾದರೆ 1 ದಿನ ಉಪವಾಸ ನಡೆಸುತ್ತಿದ್ದ ಪೇಜಾವರ ಶ್ರೀಗಳು!

ಉಳಿಸುವುದು ಸಾಧ್ಯವೇ ಇಲ್ಲ ಎಂಬ ಸಂದರ್ಭ ಎದುರಾದರೆ ಅವರನ್ನು ಮಠಕ್ಕೆ ಕೊಂಡೊಯ್ಯುವುದಕ್ಕೆ ನಿರ್ಧರಿಸಿ, ಅವರು ಗುರುಗಳೊಂದಿಗೆ ಆಸ್ಪತ್ರೆಯಲ್ಲಿದ್ದರು. ಶನಿವಾರ ರಾತ್ರಿ ಶ್ರೀಗಳ ಮೆದುಳು ನಿಷ್ಕ್ರಿಯಗೊಂಡಿದೆ, ಇನ್ನೇನೂ ಮಾಡುವುದು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದಾಗ, ಭಾನುವಾರ ಮುಂಜಾನೆಯೇ ಗುರುಗಳನ್ನು ಮಠಕ್ಕೆ ಸಾಗಿಸಿದರು. ಗುರುಗಳು ತಮ್ಮ ಆಸೆಯಂತೆಯೇ ಮಠದಲ್ಲಿ ಆರಾಧ್ಯದೇವರಾದ ರಾಮವಿಠಲ ದೇವರ ಸಾನ್ನಿಧ್ಯದಲ್ಲಿಯೇ ಅಂತಿಮ ಉಸಿರೆಳೆದರು.

ಎರಡನೇಯದಾಗಿ ತಮ್ಮ ಬೃಂದಾವನ (ಸಮಾಧಿ) ವನ್ನು ಬೆಂಗಳೂರಿನಲ್ಲಿರುವ ತಮ್ಮ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿಯೇ ಸ್ಥಾಪಿಸಬೇಕು ಎಂದು ಆಶಿಸಿದ್ದರು. ಉಡುಪಿ ಮಠದಲ್ಲಿ ಕೊನೆಯುಸಿರೆಳೆದ ಶ್ರೀಗಳನ್ನು ಏಳೆಂಟು ಗಂಟೆಗಳಲ್ಲಿ ಬೆಂಗಳೂರಿಗೆ ಸಾಗಿಸಿ ಅಲ್ಲಿ ವೃಂದಾವನಸ್ಥರನ್ನಾಗಿ ಮಾಡುವುದು ಸ್ಪಲ್ಪ ಕಷ್ಟದ ಕೆಲಸವಾಗಿತ್ತು. ಇದಕ್ಕೆ ಕಿರಿಯ ಶ್ರೀಗಳು ಸರ್ಕಾರದ ಸಹಾಯವನ್ನು ಯಾಚಿಸಿದರು. ಕೇಂದ್ರ ಸರ್ಕಾರ ಸೇನಾ ಹೆಲಿಕಾಪ್ಟರನ್ನು ಕಳುಹಿಸಿತು. ಅದರಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ತೆಗೆದುಕೊಂಡು ಹೋಗಿ, ಶ್ರೀಗಳ ಆಸೆಯನ್ನು ಈಡೇರಿಸಲಾಯಿತು.

ಮಧ್ಯರಾತ್ರಿ 12.15ರ ವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ

ಇದೆರಡು ತಮ್ಮ ವೈಯಕ್ತಿಕ ಆಸೆಗಳಾಗಿದ್ದರೆ, ಪೇಜಾವರ ಶ್ರೀಗಳು ಹಿಂದೂ ಸಮಾಜಕ್ಕಾಗಿ 3 ಬಹು ದೊಡ್ಡ ಹೋರಾಟವನ್ನು ಕೈಗೆತ್ತಿಕೊಂಡಿದ್ದರು. ಅವುಗಳು ತಾನಿರುವಾಗಲೇ ಈಡೇರುವ ಕನಸು ಕಂಡಿದ್ದರು. ರಾಮಮಂದಿರದ ನಿರ್ಮಾಣ, ಸಂಪೂರ್ಣ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧವಾಗಬೇಕು ಎಂದು ಬಲವಾಗಿ ಬಯಸಿದ್ದರು. ಆದರೆ ಅವು ಸರ್ಕಾರದ ಇಚ್ಛಾಶಕ್ತಿಯಿಂದಷ್ಟೇ ನಡೆಯಬೇಕಾಗಿರುವುದರಿಂದ, ಪೇಜಾವರ ಶ್ರೀಗಳ ಕಾಲದಲ್ಲಿ ಈಡೇರಿಲ್ಲ. ರಾಮಜನ್ಮಭೂಮಿಯ ಪರವಾಗಿ ಸುಪ್ರೀಂಕೋರ್ಟ್ ನಿರ್ಣಯ ಬಂದಿದೆಯಾದರೂ, ಇನ್ನೂ ಮಂದಿರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಪ್ರಕ್ರಿಯೆ ಪ್ರಾರಂಭವಾಗಿ ಮಂದಿರ ನಿರ್ಮಾಣಕ್ಕೆ ಮುನ್ನವೇ ಶ್ರೀಗಳು ಇಹ ಲೋಕ ತ್ಯಜಿಸಿದ್ದಾರೆ.

click me!