ಡಿಕೆಶಿ ಊರಲ್ಲಿ ಯೇಸು ಪ್ರತಿಮೆ ವಿವಾದ : ರಾತ್ರೋ ರಾತ್ರಿ ತಹಸೀಲ್ದಾರ್ ವರ್ಗ

By Suvarna NewsFirst Published Dec 31, 2019, 11:10 AM IST
Highlights

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಊರಲ್ಲಿ ಈಗ ಯೇಸು ಪ್ರತಿಮೆ ನಿರ್ಮಾಣದ ವಿಚಾರ ಭುಗಿಲೆದ್ದಿದ್ದು ಇದರ ಬೆನ್ನಲ್ಲೇ ಇದೀಗ ಇಲ್ಲಿನ ತಹಸೀಲ್ದಾರ್ ಅವರನ್ನು ಏಕಾ ಏಕಿ ವರ್ಗಾವಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. 

ಕನಕಪುರ [ಡಿ.31]:  ಕನಕಪುರ ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಕನಕಪುರ ತಹಸೀಲ್ದಾರ್ ಆನಂದಯ್ಯ ಏಕಾಎಕಿ ವರ್ಗಾವಣೆಯಾಗಿದ್ದಾರೆ. ಯಳಂದೂರು ತಹಸೀಲ್ದಾರ್ ಆಗಿದ್ದ ವರ್ಷರನ್ನ ಕನಕಪುರ ತಹಸೀಲ್ದಾರ್ ಆಗಿ ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಉಮಾದೇವಿ ಆದೇಶ ಹೊರಡಿದ್ದಾರೆ‌. 

"

ಕನಕಪುರ ತಾಲೂಕಿನ ಹಾರೊಬೆಲೆ ಸಮೀಪದಲ್ಲಿನ ಕಪಾಲ ಬೆಟ್ಟದಲ್ಲಿನ ಹತ್ತು ಎಕರೆ ಸರಕಾರಿ ಗೋಮಾಳದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರು ವಿಶ್ವದ ಅತೀ ಎತ್ತರದ ಏಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಡಿ.25 ರಂದು ಚಾಲನೆ ನೀಡಿದ್ದರು. ಇದಾದ ಬಳಿಕ ಡಿಕೆಶಿ ನಡೆ ವಿರುದ್ದ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. 

 ಕಂದಾಯ ಸಚಿವರು ಯೇಸು ಪ್ರತಿಮೆ ನಿರ್ಮಾಣದ ವಿಚಾರದ ಬಗ್ಗೆ ತನಿಖೆಗೆ ಆದೇಶಿಸಿ, ವರದಿ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.  ತನಿಖೆಗೆ ಆದೇಶ ಮಾಡಿದ ಮೂರೆ ದಿನದಲ್ಲಿ ಕನಕಪುರ ತಹಸೀಲ್ದಾರ್ ವರ್ಗಾವಣೆಯಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಇನ್ನೊಂದೆಡೆ ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಏಸು ಪ್ರತಿಮೆ ನಿರ್ಮಾಣ ಮಾಡಲು‌ ಮುಂದಾಗಿದ್ದರಿಂದ ಸಹಜವಾಗಿ ಅಲ್ಲಿನ ತಹಸೀಲ್ದಾರ್ ಅವರೆ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಬೇಕಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ, ಕನಕಪುರ ತಹಸೀಲ್ದಾರ್ ವರ್ಗಾವಣೆಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನಂದಯ್ಯ ಅವರು ಅನೇಕ ವರ್ಷಗಳಿಂದಲ್ಲೂ ಕನಕಪುರ ತಹಸೀಲ್ದಾರ್ ಅಗಿದ್ದರು. ಹೀಗಾಗಿ, ಅವರು ಡಿಕೆಶಿ ಆಪ್ತರು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅವರನ್ನು ಎತ್ತಂಗಡಿ ಮಾಡಿ, ವರ್ಷ ಅವರನ್ನು ಇಲ್ಲಿ ತಹಸೀಲ್ದಾರ್ ಆಗಿ ನೇಮಿಸಿಕೊಂಡಿದೆ ಎಂಬ ಮತುಗಳು  ಕೇಳಿ ಬರುತ್ತಿದೆ.  ಡಿಕೆಶಿ ಅವರ ಒತ್ತಡ ಹಾಗೂ ಪ್ರಭಾವದಿಂದಾಗಿ ತಹಸೀಲ್ದಾರ್ ವರ್ಗಾವಣೆ ಮೂಲಕ ಗೋಮಾಳದ ವರದಿಯನ್ನು ಇನ್ನಷ್ಟು ದಿನ ಮೂಂದೂಡುವ ತಂತ್ರವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. 

ಡಿಕೆಶಿ ಯೇಸು ಪ್ರತಿಮೆ ವಿವಾದ: ಬಿಜೆಪಿ ಮಂದಿಗೆ BSY ಕಿವಿಮಾತು..

ಇನ್ನೊಂದೆಡೆ ಡಿಸಿಎಂ ಅಶ್ವತ್ಥ್ ನಾರಾಯಣ್ ಕೆಲ ದಿನಗಳ ಹಿಂದಷ್ಟೆ ಜಿಲ್ಲೆಯಲ್ಲಿ ಕ್ಲಿನಿಂಗ್ ಕೆಲಸ ಆರಂಭಿಸಲಾಗುವುದು ಎಂದಿದ್ದರು‌‌. ಅಧಿಕಾರಿಗಳ ವರ್ಗಾವಣೆ ಬಿಜೆಪಿ ಸರಕಾರದ ರಚನೆ ಬಳಿಕ ಜಿಲ್ಲೆಯ ಪಾಲಿಗೆ ಹೊಸದೇನು ಅಲ್ಲ. ಆದರೆ, ಕನಕಪುರ ತಾಲೂಕಿನ ಏಸು ಪ್ರತಿಮೆ ವಿವಾದದ ಬೆನ್ನಲೇ ಅಲ್ಲಿನ ತಹಸೀಲ್ದಾರ್ ರಾತ್ರೋರಾತ್ರಿ ವರ್ಗಾವಣೆಯಾಗಿರುವುದು ಮಾತ್ರ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

click me!