Mysuru: ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್, ಪ್ರತಿಭಟನೆ; ಅಲೋಕ್ ಕುಮಾರ್ ಹೇಳಿದ್ದೇನು?

Published : Sep 12, 2026, 10:02 AM IST
Alok Kumar

ಸಾರಾಂಶ

ಖೈದಿಗಳ ಅಕ್ರಮ ಮೊಬೈಲ್ ಬಳಕೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ, ಡಿಜಿಪಿ ಅಲೋಕ್ ಕುಮಾರ್ ಮೈಸೂರು ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿದರು. ಪರಿಶೀಲನೆ ವೇಳೆ ಕೆಲವು ಲೋಪಗಳನ್ನು ಒಪ್ಪಿಕೊಂಡ ಅವರು, ತಪ್ಪಿತಸ್ಥ ಖೈದಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಮೈಸೂರು: ಕೇಂದ್ರ ಕಾರಾಗೃಹದಕ್ಕೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ದಾಳಿ ನಡೆಸಿದ್ದಾರೆ. ಖುದ್ದು ಪ್ರತಿಯೊಂದು ಬ್ಯಾರಕ್‌ಗಳನ್ನು ಜಾಲಾಡಿದ ಡಿಜಿಪಿ, ಅಕ್ರಮ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಖೈದಿಗಳ ಅಕ್ರಮ ಮೊಬೈಲ್ ಬಳಕೆ ಹಾಗೂ ಅಧಿಕಾರಿಗಳು ನಿರ್ದಿಷ್ಟ ಸಮುದಾಯದ ಖೈದಿಗಳಿಗೆ ಸಾಥ್ ನೀಡುತ್ತಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ದಾಳಿ ನಡೆದಿದ್ದು, ಕೆಲವು ಲೋಪಗಳ ಬಗ್ಗೆ ಡಿಜಿಪಿ ಒಪ್ಪಿಕೊಂಡಿದ್ದಾರೆ.

ಮೈಸೂರು ಜೈಲಿನೊಳಗೆ ಡಿಜಿಪಿ, ಬಯಲಾಯ್ತು ಖೈದಿಗಳ ಅಸಲಿ ಆಟ!

ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಇಂದಹ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಯಿತು. ಕಳೆದ ರಾತ್ರಿ ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್ ಇರುವುದಕ್ಕೆ ಅಧಿಕಾರಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಎಂದು ಆರೋಪಿಸಿ ಇತರೆ ಖೈದಿಗಳು ಪ್ರತಿಭಟನೆ ನಡೆಸಿದ್ದರು ಎಂಬ ಮಾಹಿತಿ ಹೊರ ಬಿದ್ದಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬ್ಯಾರಕ್‌ಗಳನ್ನು ಖುದ್ದು ಪರಿಶೀಲನೆ ನಡೆಸಿದರು.

ಪರಿಶೀಲನೆ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಜೈಲಿನ ಕೆಲವೆಡೆ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರುವುದು ನಿಜವಾಗಿದ್ದು, ತುರ್ತಾಗಿ ಜಾಮರ್ ಅಳವಡಿಸುವ ಅಗತ್ಯವಿದೆ ಎಂದರು. ಖೈದಿಗಳು ಹಾಗೂ ಸಿಬ್ಬಂದಿ ಇಬ್ಬರಿಂದಲೂ ಮಾಹಿತಿ ಪಡೆದಿದ್ದು, ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಮೊಬೈಲ್ ಇಟ್ಟುಕೊಳ್ಳುವುದು ಎಷ್ಟು ತಪ್ಪೋ, ಅದಕ್ಕೆ ನೆರವಾಗುವ ಅಧಿಕಾರಿಗಳೂ ಅಷ್ಟೇ ಅಪರಾಧಿಗಳು ಎಂದ ಅವರು, ಇಬ್ಬರ ಮೇಲೂ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇದೇ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ, ಪ್ರಕರಣ ಸದ್ಯ ತನಿಖಾ ಹಂತದಲ್ಲಿದೆ. ಜೊತೆಗೆ ಜೈಲಿನೊಳಗೆ ಮೊಬೈಲ್ ಹೇಗೆ ನುಸುಳುತ್ತದೆ ಎಂಬ ಕರಾಳ ಸತ್ಯವನ್ನೂ ಬಿಚ್ಚಿಟ್ಟರು. ಕಳೆದ 8 ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲೊಂದರಲ್ಲೇ ಬರೋಬ್ಬರಿ 300 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಐದಾರು ಫೋನ್‌ಗಳಿರುವ ಶಂಕೆ ಇದೆ. ಪ್ರತಿದಿನ 200ಕ್ಕೂ ಹೆಚ್ಚು ಮಂದಿ ಜೈಲಿಗೆ ಬರುತ್ತಿದ್ದು, ಕೆಲವರು ಸಿಮ್ ಕಾರ್ಡ್ ನುಂಗಿ, ದೇಹದೊಳಗೆ ಮೊಬೈಲ್ ಬಚ್ಚಿಟ್ಟುಕೊಂಡು ಬರುತ್ತಿದ್ದಾರೆ. ಇಂತಹ ಸೂಕ್ಷ್ಮ ತಪಾಸಣೆ ಸವಾಲಾಗಿದ್ದರೂ ಅಕ್ರಮಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ಮೈಸೂರು ಜೈಲಿನಲ್ಲೂ ಖೈದಿಗಳ ವಿಲಾಸಿ ಜೀವನ ನಡೆಯುತ್ತಿದೆ ಎಂಬ ಆರೋಪವನ್ನು ಡಿಜಿಪಿ ರೇಡ್ ಮತ್ತಷ್ಟು ಗಟ್ಟಿ ಮಾಡಿರುವುದಂತು ಸ್ಪಷ್ಟ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)

PREV
Read more Articles on
click me!

Recommended Stories

Belthangady: 105ರ ತಾಯಿ-85ರ ಮಗಳ ಅಪರೂಪದ ಭೇಟಿ: ದುರ್ಗಮ ರಸ್ತೆಯಲ್ಲಿ ಪುತ್ರಿಯ ಪಯಣ
ಅ.1ರಿಂದ ಮಂಗಳೂರು ರೈಲ್ವೆ ಪ್ರದೇಶ ಬದಲಾವಣೆ; ಪಾಲಕ್ಕಾಡ್-ಮೈಸೂರು ಸಭೆಯಲ್ಲೇನಾಯ್ತು?