ಮಹಾರಾಷ್ಟ್ರ ಗಡಿ ತಂಟೆಗೆ ಬರದಂತೆ ತಾಕೀತು ಮಾಡಿ| ಮುಂಡರಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆಯಿಂದ ರಾಷ್ಟ್ರಪತಿಗೆ ಮನವಿ| ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ| ರಾಷ್ಟ್ರಪತಿಗಳು ಈ ಸಮಸ್ಯೆಯನ್ನು ಪರಿಹರಿಸುವ ಮೂಲಕ ಶಾಂತಿ ವಾತಾವರಣ ನಿರ್ಮಾಣ ಮಾಡಬೇಕು|
ಮುಂಡರಗಿ(ಜ.04): ವಿನಾಕಾರಣ ಗಡಿ ಸಮಸ್ಯೆ ಮುಂದಿಟ್ಟುಕೊಂಡು ಕ್ಯಾತೆ ತೆಗೆಯದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಷ್ಟ್ರಪತಿಗಳು ತಾಕೀತು ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಒತ್ತಾಯಿಸಿದ್ದಾರೆ.
ಶುಕ್ರವಾರ ಮುಂಡರಗಿ ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಮಹಾರಾಷ್ಟ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಹಲವಾರು ವರ್ಷಗಳಿಂದ ಗಡಿತಂಟೆ ಪ್ರಾರಂಭವಾಗಿದ್ದು, 1970-71ರಲ್ಲಿ ಕೇಂದ್ರ ಸರ್ಕಾರ ಈ ಗಡಿ ತಂಟೆಗೆ ಸಂಬಂಧಪಟ್ಟಂತೆ ಸ್ವತಃ ಮಹಾರಾಷ್ಟ್ರ ಸರ್ಕಾರದ ಒತ್ತಾಯದ ಮೇರೆಗೆ ನ್ಯಾಯಮೂರ್ತಿ ಮಹಾಜನ್ ಆಯೋಗ ರಚನೆ ಮಾಡಿತು. ಆ ಮಹಾಜನ್ ಆಯೋಗದ ವರದಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದು, ಆ ವರದಿ ಆಧಾರದ ಮೇಲೆ ಬೆಳೆಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇದು ಕರ್ನಾಟಕ ರಾಜ್ಯಕ್ಕೆ ಸೇರಿದ್ದು ಎಂದು ವರದಿ ನೀಡಿದ್ದರೂ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಷಯದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಅವುಗಳು ಮತ್ತೆ ಮತ್ತೆ ಬೆಳಗಾವಿ ನಮ್ಮದು ಎನ್ನುತ್ತಿವೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ನಂತರ ಮತ್ತೆ ಗಡಿ ತಂಟೆ ಪ್ರಾರಂಭವಾಗಿದೆ. ಗಡಿ ತಂಟೆ ಹೆಸರಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಬಸ್ಸುಗಳನ್ನು ಸುಟ್ಟು ಹಾಕುವುದು, ಕಲ್ಲು ತೂರಾಟ ಮಾಡಿ ಜಖಂಗೊಳಿಸುವುದು ಸೇರಿದಂತೆ ಕರ್ನಾಟಕದ ಅನೇಕ ಖಾಸಗಿ ವಾಹನಗಳ ಮೇಲೆಯೂ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮಾಡುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಈ ಸಮಸ್ಯೆ ಹೀಗೆ ಉಲ್ಬಣಗೊಳ್ಳುತ್ತಲೇ ಹೋಗುತ್ತದೆ. ಆದ್ದರಿಂದ ಈ ಕೂಡಲೇ ರಾಷ್ಟ್ರಪತಿಗಳು ಈ ಸಮಸ್ಯೆಯನ್ನು ಪರಿಹರಿಸುವ ಮೂಲಕ ಶಾಂತಿ ವಾತಾವರಣ ನಿರ್ಮಾಣ ಮಾಡಬೇಕು. ಅಲ್ಲಿ ವರೆಗೂ ಪದೇ ಪದೇ ಗಡಿ ವಿಷಯದ ತಂಟೆಗೆ ಬಾರದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿವಳಿಕೆ ಹೇಳಬೇಕು ಎಂದು ಒತ್ತಾಯಿಸಿದರು.
ಮಂಜುನಾಥ ಮಧೋಳ ಮನವಿ ಓದಿದರು. ಈ ಸಂದರ್ಭದಲ್ಲಿ ನಾಗರಾಜ ಹೊಂಬಳಗಟ್ಟಿ, ನಾಗಾರಾಜ ಗುಡಿಮನಿ, ಶೇಖಪ್ಪ ಪೂಜಾರ, ಅಡಿವೆಪ್ಪ ಚಲವಾದಿ, ಸುರೇಶ ನಾಯ್ಕರ, ಮಹಮ್ಮದ ರಫೀಕ್ ವಡ್ಡಟ್ಟಿ, ಮಂಜುನಾಥ ಸಂಜೀವಣ್ಣವರ, ಯಂಕಪ್ಪ ಮಲಾರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ಕುನ್ನೂರ ಮನವಿ ಸ್ವೀಕರಿಸಿದರು.