ಕಾರು ಬುಕ್‌ ಮಾಡಿ ಕಾರಿನ ಜತೆ ಪರಾರಿ! ಡ್ರೈವರ್‌ನ್ನು ಲಾಡ್ಜ್‌ಗೆ ಕಳುಹಿಸಿ ಕೃತ್ಯ

By Kannadaprabha NewsFirst Published Jan 4, 2020, 8:02 AM IST
Highlights

ಬಾಡಿಗೆ ಕಾರನ್ನು ಬುಕ್ ಮಾಡಿದ ವ್ಯಕ್ತಿಯೋರ್ವ, ಅದರ ಚಾಲಕನನ್ನು ಬೇರೆಡೆ ಕಳುಹಿಸಿ ಕಾರಿನೊಂದಿಗೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. 

ಬೆಂಗಳೂರು (ಜ.04]:  ಜಸ್ಟ್‌ ಡಯಲ್‌ ಮೂಲಕ ಟ್ರಾವೆಲ್ಸ್‌ ಏಜೆನ್ಸಿಗೆ ಸೇರಿದ್ದ ಕಾರು ಬುಕ್‌ ಮಾಡಿದ್ದ ಆರೋಪಿಯೊಬ್ಬ ಚಾಲಕನಿಗೆ ಯಾಮಾರಿಸಿ . 22 ಲಕ್ಷ ಮೌಲ್ಯದ ಇನ್ನೋವಾ ಕ್ರಿಸ್ಟಾಕಾರಿನೊಂದಿಗೆ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ದಾಸನಪುರದ ಹನುಮಂತೇಗೌಡನಪಾಳ್ಯ ನಿವಾಸಿ ಅರುಣ್‌ ಕುಮಾರ್‌ ಕಾರು ಕಳೆದುಕೊಂಡಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.

ಅರುಣ್‌ ಅವರು ಟ್ರಾವೆಲ್ಸ್‌ವೊಂದಕ್ಕೆ ತಮ್ಮ ವಾಹನ ಓಡಿಸಿಕೊಂಡಿದ್ದರು. ಜ.1ರಂದು ಬೆಳಗ್ಗೆ 8.45ರ ಸುಮಾರಿಗೆ ಜಸ್ಟ್‌ ಡಯಲ್‌ ಮೂಲಕ ಆರೋಪಿ ಕಡಬಗೆರೆಯಲ್ಲಿರುವ ಸೌಮ್ಯ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಸಂಪರ್ಕಿಸಿ ಮೈಸೂರಿಗೆ ಪ್ರವಾಸಕ್ಕೆ ತೆರಳಬೇಕಿದ್ದು, ವಾಹನದ ಅಗತ್ಯ ಇದೆ ಎಂದು ಹೇಳಿದ್ದ. ಅದರಂತೆ ಟ್ರಾವೆಲ್ಸ್‌ನವರು ಅರುಣ್‌ ಅವರಿಗೆ ಮಾಹಿತಿ ನೀಡಿದ್ದರು. ಅರುಣ್‌ ಪ್ರಯಾಣಿಕನ್ನು ಕರೆದೊಯ್ಯಲು ಕಾನಿಷ್ಕ ಹೋಟೆಲ್‌ ಬಳಿ ಹೋಗಿದ್ದರು.

ಕಾನಿಷ್ಕ ಹೋಟೆಲ್‌ ಬಳಿ ಕಾರು ಹತ್ತಿದ ಪ್ರಯಾಣಿಕ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್‌ ಬಳಿ ನಡೀರಿ, ಅಲ್ಲಿ ಹೋಟೆಲ್‌ನಲ್ಲಿ ಪೇಮೆಂಟ್‌ವೊಂದು ಕಲೆಕ್ಷನ್‌ ಮಾಡಿಕೊಳ್ಳಬೇಕಿದೆ. ಅಲ್ಲಿಂದ ಮೈಸೂರಿಗೆ ಹೋಗೋಣ ಎಂದು ಚಾಲಕ ಅರುಣ್‌ಗೆ ಹೇಳಿದ್ದ. ಮೆಟ್ರೋ ಸ್ಟೇಷನ್‌ಗೆ ಸಮೀಪದ ಮಿಸ್‌ಚಿಫ್‌ ಹೋಟೆಲ್‌ ಬಳಿ ಬಂದಾಗ ಪ್ರಯಾಣಿಕ, ಕೊಠಡಿ ಸಂಖ್ಯೆ 105ರಲ್ಲಿ ನನ್ನ ಸ್ನೇಹಿತ ಇದ್ದಾನೆ. .10 ಸಾವಿರ ಹಣ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬಾ ಎಂದು ಚಾಲಕನಿಗೆ ಸೂಚಿಸಿದ್ದ.

ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ಹೋದ ಮಹಿಳೆ ಶವ...

ಅದರಂತೆ ಚಾಲಕ ಅರುಣ್‌ ಕಾರು ಇಳಿದು ಹೋಗಲು ಮುಂದಾಗಿದ್ದು, ಈ ವೇಳೆ ಪ್ರಯಾಣಿಕ ಚಾಲಕನಿಗೆ ಎಸಿ ಹಾಕಿ ಹೋಗಿ ಎಂದು ಹೇಳಿದ್ದ. ಚಾಲಕ ಕೀ ಹಾಕಿ ಎಸಿ ಆನ್‌ ಮಾಡಿ ಹೋಟೆಲ್‌ಗೆ ಹೋಗಿ ತಪಾಸಣೆ ನಡೆಸಿದಾಗ ವ್ಯಕ್ತಿ ಕೊಠಡಿ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ವಿಷಯ ತಿಳಿದಿದೆ. ಅರುಣ್‌ ಕಾರಿನಲ್ಲಿ ಹೊರಗೆ ಕುಳಿತಿದ್ದ ಆರೋಪಿ ಪ್ರಯಾಣಿಕನಿಗೆ ಕರೆ ಮಾಡಿ ಈ ಬಗ್ಗೆ ವಿಷಯ ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ ಐದು ನಿಮಿಷ ಅಲಿಯೇ ಕಾಯಿರಿ, ನಾನು ಮತ್ತೆ ಕರೆ ಮಾಡುತ್ತೇನೆ ಎಂದಿದ್ದ. ಐದು ನಿಮಿಷದ ಬಳಿಕ ಚಾಲಕ ಆರೋಪಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್‌ ಆಗಿತ್ತು. ಚಾಲಕ ಹೊರಗೆ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಕಾರಿನ ಸಮೇತ ಪ್ರಯಾಣಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

click me!