Vijayapura: ಮತದಾರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಖಂಡಿಸಿ ಧರಣಿ ಸತ್ಯಾಗ್ರಹ

By Govindaraj S  |  First Published Nov 30, 2022, 3:31 PM IST

ವಿಜಯಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿ ಅಧಿಕ ಸಂಖ್ಯೆಯ ಮತದಾರರ ಹೆಸರು ಡಿಲಿಟ್‌ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ ಮುಶ್ರೀಫ್‌ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟನೆ ನಡೆಸಲಾಯಿತು. 


ವಿಜಯಪುರ (ನ.30): ವಿಜಯಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿ ಅಧಿಕ ಸಂಖ್ಯೆಯ ಮತದಾರರ ಹೆಸರು ಡಿಲಿಟ್‌ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ ಮುಶ್ರೀಫ್‌ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಅಬ್ದುಲ್‌ಹಮೀದ್‌ ಮುಶ್ರೀಫ್‌ ಮಾತನಾಡಿ, ಈ ಹಿಂದೆ ನಡೆದ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದ ಅಧಿಕ ಸಂಖ್ಯೆಯ ಮತದಾರರ ಹೆಸರು ಡಿಲಿಟ್‌ ಆದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಕೈಗೊಂಡು ಮತದಾರರ ಪಟ್ಟಿಸರಿಪಡಿಸಲು ಆಗ್ರಹಿಸಿದರು.

ಮಹಾನಗರಪಾಲಿಕೆ ಚುನಾವಣೆಯಲ್ಲಿ ಮತದಾರ ಪಟ್ಟಿಯಿಂದ ಹೆಸರನ್ನು ಡಿಲಿಟ್‌ ಮಾಡುವುದರಲ್ಲಿ ಅಧಿಕಾರಿಗಳು ಯಾವುದೇ ಶಿಷ್ಟಾಚಾರ ಅನುಸರಿಸದೇ ಅಸಮರ್ಪಕವಾಗಿ ತಯಾರಿಸಿದ ಮತದಾರರ ಪಟ್ಟಿಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತನಿಖೆ ನಡೆಸಬೇಕೆಂದು ಚುನಾವಣೆಯ ಮೊದಲು ಮನವಿ ಸಲ್ಲಿಸಲಾಗಿತ್ತು. ಆದರೆ, ಜಿಲ್ಲಾ ಚುನಾವಣಾಧಿಕಾರಿಗಳು ಇಲ್ಲಿಯವರೆಗೆ ಯಾವುದೇ ತನಿಖೆ ಹಾಗೂ ಕ್ರಮ ಕೈಗೊಂಡಿಲ್ಲವಾದ್ದರಿಂದ ವಿಜಯಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಅಧಿಕ ಸಂಖ್ಯೆಯ ಮತದಾರರ ಹೆಸರುಗಳು ಮಾಯವಾಗಿದ್ದವು. ಜನ ತಮ್ಮ ಹಕ್ಕು ಚಲಾಯಿಸುವಲ್ಲಿ ವಂಚಿತರಾದರು. 

Tap to resize

Latest Videos

ವಿಜಯಪುರದಲ್ಲಿ ವಿಚಿತ್ರ ಹಬ್ಬದ ಆಚರಣೆ: ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

ವಿಜಯಪುರ ನಗರ ಶಾಸಕರು ತಮ್ಮ ಅಧಿಕಾರದ ದುರುಪಯೋಗ ಪಡಿಸಿಕೊಂಡು ಬಿಎಲ್‌ಒ ಹಾಗೂ ಚುನಾವಣಾಧಿಕಾರಿಗಳು ಮತ್ತು ಮಹಾನಗರಪಾಲಿಕೆಯ ಆಯುಕ್ತರನ್ನೊಳಗೊಂಡು ಅಧಿಕಾರಿ ವರ್ಗದ ಮೇಲೆ ಪ್ರಭಾವ ಬೀರಿ ತಮಗೆ ಅನುಕೂಲವಾಗುವಂತಹ ಮತದಾರ ಪಟ್ಟಿಯನ್ನು ತಯಾರಿಸಿ ಬಿಜೆಪಿಯ ಸದಸ್ಯರನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಈ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದರು. 

ಮೊನ್ನೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಚುನಾವಣಾ ತಯಾರಿಗಾಗಿ ರಾಜ್ಯ ಬಿಜೆಪಿ ಸರ್ಕಾರವು ಖಾಸಗಿ ಸಂಸ್ಥೆಯವರ ಮೂಲಕ ಮತದಾರ ಪಟ್ಟಿಯಿಂದ ಮತದಾರ ಹೆಸರನ್ನು ಡಿಲಿಟ್‌ ಮಾಡುವ ಹುನ್ನಾರ ನಡೆಸಿದಾಗ ಕಾಂಗ್ರೆಸ್‌ ಪಕ್ಷವು ಈ ಅಕ್ರಮವನ್ನು ಬಯಲೆಗೆಳೆದು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಕ್ತ ತನಿಖೆ ಕೈಗೊಂಡು ಮತದಾರರಿಗೆ ಅವರ ಪವಿತ್ರ ಮತದಾನದ ಹಕ್ಕನ್ನು ದೊರಕಿಸಿಕೊಡಲು ದೂರು ನೀಡಲಾಗಿದೆ. ಇದರಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಮಾಡಿದ ಹಗರಣದ ಮೊದಲ ಭಾಗವಾಗಿ ವಿಜಯಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಈ ಕುತಂತ್ರವನ್ನು ಪ್ರಯೋಗ ಮಾಡಲಾಗಿದ್ದು, ಇಲ್ಲಿ ಯಶಸ್ವಿಯಾದ ನಂತರ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆಯಲ್ಲಿಯೂ ಈ ಪ್ರಯೋಗ ಮಾಡಲು ಹೊರಟಾಗ ಈ ಹಗರಣ ಹೊರ ಬಂದಿರುತ್ತದೆ. 

ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಶ್ರೀಫ್‌ ಆಗ್ರಹಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈಗ ಆಗಿರುವ ತಪ್ಪನ್ನು ಜಿಲ್ಲಾ ಚುನಾವಣಾಧಿಕಾರಿಗಳು ತಕ್ಷಣ ಆದೇಶ ನೀಡಿ ಅಧಿಕಾರಿಗಳ ತಂಡ ರಚನೆ ಮಾಡಿ ಮನೆ ಮನೆಗಳಿಗೆ ತೆರಳಿ ಮತದಾರರಿಗೆ ಆದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರರವರು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ತಮ್ಮ ಹಕ್ಕನ್ನು ಚಲಾಯಿಸಲು ಮತದಾನದ ಹಕ್ಕು ನೀಡಿದ್ದು, ಪ್ರಜಾಪ್ರಭುತ್ವದ ಮೂಲಕ ರಾಷ್ಟ್ರಕ್ಕೆ ಶಕ್ತಿ ನೀಡಿದ್ದು, ಇಂದು ಕೇಂದ್ರದ ಬಿಜೆಪಿ ಸರಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಅಧಿಕಾರದ ದಾಹದಿಂದ ನಾವು ಏನಾದರೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಸಾರ್ವಜನಿಕರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಬಡವರನ್ನು ತುಳಿಯುವ ನಿಟ್ಟಿನಲ್ಲಿ ಇಂತಹ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನ ಇವರನ್ನು ಮತದಾನದ ಮೂಲಕವೇ ತಕ್ಕ ಉತ್ತರ ನೀಡಲಿದ್ದು, ಇವರು ಮನೆಗೆ ಸೇರುವ ದಿನ ದೂರವಿಲ್ಲ ಎಂದರು.

ಅಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಯಾರದೇ ಕೈಗೊಂಬೆಯಾಗಿ ಕೆಲಸ ಮಾಡದೇ ತಮ್ಮ ಕೆಲಸದಲ್ಲಿ ನಿಷ್ಠೆಯನ್ನು ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಪಕ್ಷವು ಮುಂದಿನ ದಿನಗಳಲ್ಲಿ ಇಂತಹ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿಯವರಿಗೆ ಜನರ ಮತ ಪಡೆದು ಅಧಿಕಾರಕ್ಕೆ ಬಂದ ಅಭ್ಯಾಸವಿಲ್ಲ, ಅವರು ಯಾವತ್ತೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಅಭ್ಯಾಸದಲ್ಲಿ ಪರಿಣಿತರಾಗಿದ್ದಾರೆ. ಇಡೀ ಜಿಲ್ಲೆಯ ಈ ಮತದಾರರ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಕೇಳಿಕೊಂಡರು.

ಇದೇ ವೇಳೆ ಮಾಜಿ ಶಾಸಕ ವಿಠಲ್‌ ಕಟಕದೊಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ವಿದ್ಯಾವತಿ ಅಂಕಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.

Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು

ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ್‌ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಇಲಿಯಾಸಪಟೇಲ ಬಗಲಿ, ಪಿಸಿಸಿ ಸದಸ್ಯ ಪೀರಪ್ಪ ನಡುವಿನಮನಿ, ಜಿಲ್ಲಾ ಸೇವಾದಳ ಅಧ್ಯಕ್ಷ ನಿಂಗಪ್ಪ ಸಂಗಾಪೂರ, ಡಾ.ರವಿಕುಮಾರ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಸಮದ್‌ ಸುತಾರ, ಮಹಾನಗರಪಾಲಿಕೆ ಸದಸ್ಯರುಗಳಾದ ಅಬ್ದುಲ್‌ರಜಾಕ್‌ ಹೊರ್ತಿ, ಅಪ್ಪು ಪೂಜಾರಿ, ದಿನೇಶ ಹಳ್ಳಿ, ಜಮೀರಅಹ್ಮದ್‌ ಬಾಂಗಿ, ಮುಬಿನ್‌ ಶೇಖ, ಸದ್ದಾಮ ನಾಡೆವಾಲೆ, ಶಬ್ಬೀರ ಮನಗೂಳಿ, ಮಿಲಿಂದ ಚಂಚಲಕರ, ಮೈನುದ್ದೀನ ಬೀಳಗಿ, ಶರಣಪ್ಪ ಯಕ್ಕುಂಡಿ, ಅಕ್ರಂ ಮಾಶ್ಯಾಳಕರ, ಧನರಾಜ ಎ, ಶಫೀಕ್‌ ಬಗದಾದಿ, ಸಂತೋಷ ಪವಾರ, ಸದ್ದಾಮ್‌ ಇನಾಮದಾರ, ಮೋದಿ ಶೇಖ, ಶಬ್ಬೀರ ಪಾಟೀಲ, ಇರ್ಫಾನ ಶೇಖ್‌, ಸಲೀಮ ಉಸ್ತಾದ, ಹಸನ್‌ಪಟೇಲ ದೊಡಮನಿ, ಸಲೀಮ್‌ ಪೀರಜಾದೆ, ಕಾರ್ಯದರ್ಶಿಗಳಾದ ಚನಬಸಪ್ಪ ನಂದರಗಿ, ಹಾಜಿಲಾಲ್‌ ದಳವಾಯಿ, ತಾಜುದ್ದೀನ್‌ ಖಲೀಫಾ, ಡಿ.ಎಚ್‌.ಮುಲ್ಲಾ, ರವೀಂದ್ರ ಜಾಧವ, ಪೀರಾ ಜಮಖಂಡಿ, ಎಂ.ಎಂ.ಅವಟಿ, ಬಸವರಾಜ ಗಂಗಾಪೂರ, ಮಲ್ಲಿಕಾರ್ಜುನ ಪರಸಣ್ಣವರ, ಚಂದ್ರಗಿರಿ ಹೊನ್ನದ, ಮೀರಾಸಾಬ್‌ ಮುಲ್ಲಾ, ಈರಪ್ಪ ಕುಂಬಾರ, ಆರ್‌.ಎಂ. ಖಾಜಿ, ತಿಪ್ಪಣ್ಣ ಕಮಲದಿನ್ನಿ, ಬಡೇಘರ ಮುಂತಾದವರು ಭಾಗವಹಿಸಿದ್ದರು.

click me!