Bagalkote: ಹದಗೆಟ್ಟ ರಸ್ತೆ: ಕಬ್ಬು ಸಾಗಣೆಗೆ ಸಂಕಷ್ಟ

By Govindaraj SFirst Published Nov 30, 2022, 2:30 PM IST
Highlights

ಮೂರು ತಾಲೂಕಿನ ಸುಮಾರು ಮೂವತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಲಾದಗಿ-ಕಾತರಕಿ ಬ್ರಿಜ್‌ ಕಂ ಬ್ಯಾರೇಜ್‌ ಬಳಿ ಮಣ್ಣು ತುಂಬಿದ ಏರು ರಸ್ತೆಯಲ್ಲಿ ಮೊಳಕಾಲುದ್ದದ ಗುಂಡಿಗಳು ಬಿದ್ದಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ್‌ ಸೇರಿ ಇತರ ವಾಹನಗಳ ಚಾಲನೆಗೆ ಹರಸಾಹಸ ಪಡುವಂತಾಗಿದೆ.

ಚಂದ್ರಶೇಖರ ಶಾರದಾಳ

ಕಲಾದಗಿ (ನ.30): ಮೂರು ತಾಲೂಕಿನ ಸುಮಾರು ಮೂವತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಲಾದಗಿ-ಕಾತರಕಿ ಬ್ರಿಜ್‌ ಕಂ ಬ್ಯಾರೇಜ್‌ ಬಳಿ ಮಣ್ಣು ತುಂಬಿದ ಏರು ರಸ್ತೆಯಲ್ಲಿ ಮೊಳಕಾಲುದ್ದದ ಗುಂಡಿಗಳು ಬಿದ್ದಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ್‌ ಸೇರಿ ಇತರ ವಾಹನಗಳ ಚಾಲನೆಗೆ ಹರಸಾಹಸ ಪಡುವಂತಾಗಿದೆ. ಸ್ವಲ್ಪ ಹೆಚ್ಚುಕಡಿಮೆ ಆದರೂ ಅವಘಡ ಕಟ್ಟಿಟ್ಟಬುತ್ತಿ ಎಂಬಂತಾಗಿದೆ. ಪ್ರಸ್ತುತ ಕಬ್ಬು ನುರಿಸುವ ಹಂಗಾಮು ಎಲ್ಲ ಕಾರ್ಖಾನೆಗಳಲ್ಲಿ ಆರಂಭವಾಗಿದ್ದು, ಬಹುತೇಕ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಇದೇ ರಸ್ತೆಯ ಮೂಲಕ ಸಾಗುವುದು ಅನಿವಾರ್ಯವಾಗಿದೆ. 

ಹೀಗಾಗಿ, ಆದಷ್ಟು ಬೇಗ ಕಲಾದಗಿ-ಕಾತರಕಿ ಬ್ರಿಜ್‌ ಕಂ ಬ್ಯಾರೇಜ್‌ ಬಳಿಯ ರಸ್ತೆಯನ್ನು ಡಾಂಬರೀಕರಣ ಮಾಡಿಸಲು ರೈತರ ಆಗ್ರಹಿಸಿದ್ದಾರೆ. ಬಾಗಲಕೋಟೆ, ಬೀಳಗಿ, ಮುಧೋಳ ತಾಲೂಕಿನ ಸುಮಾರು 30 ಹಳ್ಳಿಗಳಿಗೆ ಈ ರಸ್ತೆಯ ಮೂಲಕ ಜನರು, ವಾಹನಗಳ ಸಂಚಾರ ಪ್ರತಿನಿತ್ಯ ನಡೆಯುತ್ತದೆ. ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ನಿತ್ಯ ಈ ರಸ್ತೆಯನ್ನು ಉಪಯೋಗಿಸಿ ಸಂಚರಿಸುತ್ತಾರೆ. 

Bagalkote: 229ನೇ ದಿನಕ್ಕೆ ಕಾಲಿಟ್ಟ ನೂತನಮಹಾಲಿಂಗಪುರ ತಾಲೂಕು ರಚನೆ ಹೋರಾಟ

ಕಳೆದೊಂದು ತಿಂಗಳಿಂದ ಪ್ರಸಕ್ತ ವರ್ಷದ ಕಬ್ಬ ಕಟಾವು ಪ್ರಾರಂಭವಾಗಿದ್ದು, ನಿತ್ಯ ನೂರಾರು ಕಬ್ಬು ತುಂಬಿದ ಟ್ರ್ಯಾಕ್ಟರಗಳು ಈ ತಗ್ಗು ಗುಂಡಿ ಬಿದ್ದ ರಸ್ತೆಯಲ್ಲಿಯೇ ಹರಸಾಹಸಪಟ್ಟು ಬ್ಯಾರೇಜ್‌ ಏರು ರಸ್ತೆಯನ್ನು ಹತ್ತಬೇಕಿದೆ. ಈ ವೇಳೆ ರಸ್ತೆಯಲ್ಲಿರುವ ತಗ್ಗು-ಗುಂಡಿಗಳ ಕಾರಣ ಕಬ್ಬು ತುಂಬಿದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಅವಘಡ ಘಟಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏನಾದರೂ ಅವಘಡ ಘಟಿಸುವ ಮುನ್ನ ಬ್ಯಾರೇಜ್‌ ಏರು ರಸ್ತೆಯಲ್ಲಿ ಕಡಿ ಕಲ್ಲು, ಮೊರಂ ಮಣ್ಣು ಸುರಿದು ಗಟ್ಟಿಗೊಳಿಸಿ, ಗುಣಮಟ್ಟದ ಡಾಂಬರೀಕರಣ ಕಾಮಗಾರಿ ಮಾಡಿಸಬೇಕೆಂದು ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

2019ರ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಉಂಟಾದ ನದಿಯ ಮಹಾಪ್ರವಾಹದಿಂದ ಬ್ಯಾರೇಜ್‌ ಬಳಿಯ 200 ಮೀಟರ್‌ ರಸ್ತೆ ಸಹಿತ ಹಿಂದೆ ಅಳವಡಿಸಿದ್ದ ಕ್ರಾಸ್‌ ಬ್ಯಾರಿಯರ್‌ ಕೂಡ ಕಿತ್ತು ಹೋಗಿದ್ದವು. ಪ್ರವಾಹ ಅಬ್ಬರ ಕಡಿಮೆಯಾದ ನಂತರ ತುರ್ತು ಕಾಮಗಾರಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಿಸಿ, ಸಂಚಾರಕ್ಕೆ ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಈ ತಾತ್ಕಾಲಿಕ ಸಂಚಾರ ರಸ್ತೆಯನ್ನು ನಿರ್ಮಿಸಿ, ಮೂರು ವರ್ಷ ಕಳೆಯುತ್ತಾ ಬಂದರೂ ಇನ್ನೂ ಏರು ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ತಾತ್ಕಾಲಿಕ ರಸ್ತೆಯ ಮೇಲೆಯೇ ಅನಿವಾರ್ಯವಾಘಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ ಎಂದು ವಾಹನ ಸವಾರರು, ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷದ ಕಬ್ಬು ಕಟಾವು ಹಂಗಾಮು ಪ್ರಾರಂಭಗೊಂಡಿದ್ದು ನಿತ್ಯ ನೂರಾರು ಕಬ್ಬುತುಂಬಿದ ಟ್ರ್ಯಾಕ್ಟರ್‌ ಈ ರಸ್ತೆಯಲ್ಲಿ ಸಾಗಿ ಜೆಮ್‌ ಫ್ಯಾಕ್ಟರಿ, ಮುಧೋಳ ಫ್ಯಾಕ್ಟರಿಗೆ ಸಾಗಬೇಕಾಗಿದೆ. ರಸ್ತೆ ಹದಗೆಟ್ಟಿದ್ದರಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್‌ ಸಂಚಾರ ಮಾಡುವುದು ಕಷ್ಟಕರವಾಗಿದೆ. ಈ ಕೂಡಲೇ ರಸ್ತೆ ಡಾಂಬರೀಕರಣ ಮಾಡಬೇಕು
-ಹನಮಂತ ಮರೆಮ್ಮನವರ, ನಿಂಗಾಪೂರ ಎಸ್‌.ಕೆ. ಗ್ರಾಮದ ರೈತ

Bagalkote: ಲಿಂಗತ್ವ ಅಲ್ಪಸಂಖ್ಯಾತರಿಗೆ ದಾರಿದೀಪವಾದ ಶ್ರಮ ಚೇತನ: ಉಮಾ ಮಹಾದೇವನ್

ಕಲಾದಗಿ ಕಾತರಕಿ ಬ್ರಿಜ್‌ ಕಂ ಬ್ಯಾರೇಜ್‌ ಬಳಿಯ ರಸ್ತೆಯನ್ನು ದುರಸ್ತಿ ಹಾಗೂ ಡಾಂಬರೀಕರಣ ಮಾಡಲು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. ಸೋಮವಾರದಿಂದ ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸುವಂತೆ ಅಗತ್ಯ ಕ್ರಮವಹಿಸಲಾಗುವುದು.
-ಎಸ್‌.ಎಂ.ದೇಸಾಯಿ, ಎಇಇ, ಸಣ್ಣ ನಿರಾವರಿ ಇಲಾಖೆ, ಬಾಗಲಕೋಟೆ

click me!