6 ಗಂಟೆ ಕಾರ್ಯಾಚರಣೆ: ಪ್ರವಾಹದಲ್ಲಿದ್ದ 30 ಕೋತಿಗಳ ರಕ್ಷಣೆ| ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಸಮೀಪ ನಡೆದ ಘಟನೆ| ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ| ಆಹಾರ ಅರಿಸಿ ಬಂದು ಪ್ರವಾಹ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಮಂಗಗಳು|
ಹರಿಹರ(ಆ.08): ತಾಲೂಕಿನ ರಾಜನಹಳ್ಳಿ ಸಮೀಪ ತುಂಗಭದ್ರಾ ನದಿ ಪ್ರವಾಹದ ಮಧ್ಯೆ ಸಿಲುಕಿದ್ದ 30ಕ್ಕೂ ಹೆಚ್ಚು ಮಂಗಗಳನ್ನು ಶುಕ್ರವಾರ ಆರು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.
ಎರಡು ದಿನಗಳಿಂದ ಗಾಜುನೂರು ಅಣೆಕಟ್ಟೆಯಿಂದ ತುಂಗಾ ನದಿಗೆ ನೀರು ಬಿಡಲಾಗುತ್ತಿದ್ದು, ಇದರ ಜತೆಗೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ನದಿಯ ಸಮೀಪದಲ್ಲಿ ಆಹಾರ ಅರಿಸಿ ಬಂದ ಮಂಗಗಳು ಪ್ರವಾಹ ಮಧ್ಯೆ ಸಿಕ್ಕಿಹಾಕಿಕೊಂಡಿದ್ದವು.
ಹೊನ್ನಾಳಿ ಕ್ಷೇತ್ರ ಅಭಿವೃದ್ದಿಗೆ ಸಿಎಂ ಉತ್ತಮ ಸ್ಪಂದನೆ
ಪ್ರವಾಹ ಏರಿದಂತೆ ಪ್ರಾಣರಕ್ಷಣೆಗೆ ನದಿ ಮಧ್ಯದಲ್ಲಿದ್ದ ಮರವೇರಿ 2 ದಿನಗಳಿಂದ ಆಹಾರವಿಲ್ಲದೆ ಕುಳಿತಿದ್ದವು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮೊದಲು ಬೋಟ್ ಮೂಲಕ ಸ್ಥಳಕ್ಕೆ ತೆರಳಿ, ಬಲೆ ಹಾಕಿ ಅವುಗಳನ್ನು ಹಿಡಿಯಲು ಯತ್ನಿಸಿ ವಿಫಲರಾದರು. ಬಳಿಕ ಮಂಗಗಳಿದ್ದ ಮರಕ್ಕೆ ಹಾಗೂ ದಡಕ್ಕೆ ಹಗ್ಗ ಕಟ್ಟಲಾಯಿತು. ಕೊನೆಗೆ ಈ ಹಗ್ಗ ಹಿಡಿದು ಮಂಗಗಳು ದಡ ತಲುಪಿದವು.