ರಾಜ್ಯ ಸರ್ಕಾರದಿಂದ ಪೌರಕಾರ್ಮಿಕರ ಹಿತರಕ್ಷಣೆ; ಸಚಿವ ಬಿ.ಸಿ.ನಾಗೇಶ್

By Kannadaprabha NewsFirst Published Sep 25, 2022, 1:25 PM IST
Highlights
  • ರಾಜ್ಯ ಸರ್ಕಾರದಿಂದ ಪೌರಕಾರ್ಮಿಕರ ಹಿತ ರಕ್ಷಣೆ
  • ಪೌರ ಕಾರ್ಮಿಕರ ಸೇವೆ ಶ್ಲಾಘನೀಯ
  • ತಿಪಟೂರು ನಗರಸಭೆಯಲ್ಲಿ 44 ಪೌರಕಾರ್ಮಿಕರ ಕೆಲಸ ಕಾಯಂ: ಸಚಿವ ನಾಗೇಶ್‌

ತಿಪಟೂರು ( ಸೆ.25) : ರಾಜ್ಯ ಸರ್ಕಾರ ಹನ್ನೊಂದು ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಕಾಯಂಗೊಳಿಸುವ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದು ಇದರ ಜೊತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಪೌರಕಾರ್ಮಿಕರ ಹಿತ ಕಾಪಾಡುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

40 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಚಿಂತನೆ: ಶಿವಣ್ಣ

ನಗರದ ನಗರಸಭಾ ಆವರಣದಲ್ಲಿ ಶನಿವಾರ ನಡೆದ 11ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸೂರ್ಯ ಉದಯಿಸುವುದಕ್ಕೂ ಮೊದಲೆ ಪೌರಕಾರ್ಮಿಕರು ನಗರವನ್ನು ಸ್ವಚ್ಛತೆ ಮಾಡುತ್ತಾ ಜನರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ತಮ್ಮ ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಅದನ್ನೆಲ್ಲಾ ಮರೆತು ಸ್ವಚ್ಛತೆಯಲ್ಲಿ ಭಾಗವಹಿಸುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ. ಹಿಂದೆ ಪೌರ ಕಾರ್ಮಿಕರ ಬಗ್ಗೆ ಇದ್ದ ಕೀಳರಿಮೆ ಈಗ ಬದಲಾಗುತ್ತಿದ್ದು ಅವರನ್ನು ಗೌರವಕೊಟ್ಟು ಸಾರ್ವಜನಿಕರು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಿದ್ದಾರೆ. ವೇತನದ ಕೊಡುವುದು ತಡವಾದರೂ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದು ಅವರು ಶ್ರಮಪಟ್ಟು ಪಿಎಫ್‌, ಇಎಸ್‌ಐ ಹಣವನ್ನೂ ಕೂಡ ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಪೌರಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು. ಮನೆ ಇಲ್ಲದವರಿಗೆ ವಸತಿ ಸೌಲಭ್ಯ, ದ್ವಿಚಕ್ರ ವಾಹನ ಸೌಲಭ್ಯ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದ ಪೌರಕಾರ್ಮಿಕ ಮಕ್ಕಳಿಗೆ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ರಾಜ್ಯದಲ್ಲಿ 11 ಸಾವಿರ 300 ಪೌರಕಾರ್ಮಿಕರನ್ನು ಕಾಯಂಗೊಳಿಸಿದ್ದು ಉಳಿದವರನ್ನು ಹಂತ ಹಂತವಾಗಿ ಕಾಯಂಗೊಳಿಸಲಾಗುವುದು. ಅದರಲ್ಲಿ ತಿಪಟೂರು ನಗರಸಭೆಯಲ್ಲಿ ಕೆಲಸ ಮಾಡುವ 44 ಪೌರಕಾರ್ಮಿಕರನ್ನು ಕಾಯಂ ಆಗಿದ್ದು, ಜವಾಬ್ದಾರಿಯಿಂದ ಉತ್ತಮವಾಗಿ ಕೆಲಸ ಮಾಡಬೇಕೆಂದರು.

ನಂತರ ಸಚಿವರು ಮಾತನಾಡುವಾಗ ನಗರಸಭೆ ವಾಹನ ಡ್ರೈವರ್‌ ರಾಮಚಂದ್ರ ನಾವೂ ಸಹ ಪೌರಕಾರ್ಮಿಕರಾಗಿದ್ದು ನಮಗೆ ಯಾವುದೇ ಸೌಲಭ್ಯಗಳಿಲ್ಲ. ತಿಂಡಿ ಮತ್ತು ಭತ್ಯೆ ವ್ಯವಸ್ಥೆ ಇಲ್ಲ ನಮಗೂ ಮಾಡಿಕೊಡಿ ಎಂದು ಕೇಳಿಕೊಂಡರು. ಆಗ ಸಚಿವ ನಾಗೇಶ್‌ ವಾಹನ ಚಾಲಕರಿಗೂ ಬೆಳಗಿನ ತಿಂಡಿ ನಾಳೆಯಿಂದಲೇ ನೀಡಲಾಗುವುದು. ಭತ್ಯೆ ವ್ಯವಸ್ಥೆ ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಅಭಿನಂದಿಸಲಾಯಿತು. ಸಮಾರಂಭಕ್ಕೂ ಮುನ್ನ ನಗರದ ಶ್ರೀ ಕೆಂಪಮ್ಮದೇವಿ ದೇವಾಲಯದ ಆವರಣದಿಂದ ಹುಲಿವೇಷ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ ನಡೆಸಲಾಯಿತು. ಶರಣ ಸಾಹಿತಿ ದಿಬ್ಬದಹಳ್ಳಿ ಶಾಮ್‌ಸುಂದರ್‌ ಉಪನ್ಯಾಸ ನೀಡಿದರು.

ನಗರ ಸ್ವಚ್ಛಗೊಳಿಸ್ತಿರೋ ಪೌರ ಕಾರ್ಮಿಕರಿಗಾಗಿನ್ಯೂರಾನ್, ಸುವರ್ಣನ್ಯೂಸ್‌ನಿಂದ ವಾಕಥಾನ್

ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ರಾಮಮೋಹನ್‌, ಉಪಾಧ್ಯಕ್ಷ ಸೊಪ್ಪುಗಣೇಶ್‌, ಸ್ಥಾಯಿಸಮಿತಿ ಅಧ್ಯಕ್ಷ ಶಶಿಕಿರಣ್‌, ಪೌರಾಯುಕ್ತ ಉಮಾಕಾಂತ್‌, ಸದಸ್ಯರಾದ ಹೂರ್‌ಬಾನು, ಸಂಗಮೇಶ್‌, ಕೋಟೆಪ್ರಭು, ಯಮುನಾ, ಸಂಧ್ಯಾ, ಭಾರತಿ, ಎಂ.ಎಸ್‌. ಯೋಗೀಶ್‌, ಜಯಲಕ್ಷ್ಮಿ, ಮೇಘಶ್ರೀ, ಆಶಿಫಾಬಾನು, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಕಾಂತರಾಜು ಸೇರಿದಂತೆ ಎಲ್ಲಾ ಸದಸ್ಯರು, ಪೌರಕಾರ್ಮಿಕರು ಭಾಗವಹಿಸಿದ್ದರು.

ತಾಲೂಕು ಆಡಳಿತ ಸೌಧದ ಶೌಚಾಲಯದಲ್ಲಿ ಸ್ವಚ್ಛತೆಯ ಕೊರತೆ

ತಿಪಟೂರು: ನಗರದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ತಾಲೂಕು ಆಡಳಿತ ಸೌಧದ ಶೌಚಾಲಯ ಸ್ವಚ್ಛತೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿದ್ದು ಪ್ರತಿದಿನ ಈ ಕಚೇರಿಗೆ ತಮ್ಮ ಕೆಲಸ ಕಾರ್ಯಕ್ಕೆ ಬರುವ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಹಿಂಸೆ ಅನುಭವಿಸುವಂತಾಗಿದೆ.

ವಿಶಾಲವಾದ ತಾಲೂಕು ಆಡಳಿತ ಸೌಧದಲ್ಲಿ ಇರುವ ಶೌಚಾಲಯವನ್ನು ಯಾರೂ ಹುಡುಕುವುದೇ ಬೇಡ. ನಾನು ಇಲ್ಲೇ ಇದ್ದೇನು ಎಂದು ಅದೇ ದುರ್ವಾಸನೆ ಬೀರುತ್ತಾ ತನ್ನತ್ತ ಆಕರ್ಷಿಸುತ್ತದೆ. ಹೊಚ್ಚ ಹೊಸದಾದ ಈ ವಿಶಾಲವಾದ ಕಚೇರಿಯ ಶೌಚಾಲಯವನ್ನು ಸ್ವಚ್ಛತೆ ಮಾಡುವ ಸಿಬ್ಬಂದಿ ಇದ್ದಾರೋ ಇಲ್ಲವೋ ತಿಳಿಯುತ್ತಿಲ್ಲ. ಕಚೇರಿಯ ಎಲ್ಲ ಮೂಲೆಗೂ ಶೌಚಾಲಯದ ದುರ್ವಾಸನೆ ಹರಡಿದ್ದು ಸಾರ್ವಜನಿಕರು ಮತ್ತು ನೌಕರರು ಸದಾ ಮೂಗಿಗೆ ಬಟ್ಟೆಇಟ್ಟುಕೊಂಡು ಉಸಿರಾಡುವಂತಾಗಿದೆ.

ಆಡಳಿತ ಸೌಧದಲ್ಲಿ ಮುಖ್ಯವಾಗಿ ತಹಸೀಲ್ದಾರ್‌ ಕಚೇರಿ ಹಾಗೂ ನ್ಯಾಯಾಲಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಹಾಗೂ ನ್ಯಾಯಾಲಯ, ಖಜಾನೆ ಕಚೇರಿ, ಪಹಣಿ ವಿತರಣಾ ಕೇಂದ್ರ, ಮೂಲ ದಾಖಲೆಗಳ ರೇಕಾರ್ಡ್‌ ರೂಂ, ಸಕಾಲ ಕಚೇರಿ ಸೇರಿದಂತೆ ಹತ್ತು ಹಲವು ಕಚೇರಿಗಳು ಇದೊಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನ್ಯಾಯಾಲಯಕ್ಕೆ ಮತ್ತು ತಹಸೀಲ್ದಾರ್‌ ನ್ಯಾಯಾಲಯಕ್ಕೆ ಹಲವು ಕೆಲಸ ಕಾರ್ಯಗಳಿಗೆ ಸಾರ್ವಜನಿಕರು, ಮಹಿಳೆಯರು, ಗ್ರಾಮೀಣ ಪ್ರದೇಶದ ರೈತರು, ವಯೋವೃದ್ದರು ಬಂದು ಹೋಗುತ್ತಾರೆ. ಆದರೆ ಇಲ್ಲಿರುವ ಶೌಚಾಲಯದ ವಾಸನೆಗೆ ಎಷ್ಟೋ ಜನ ತಲೆಸುತ್ತಿ ಬಿದ್ದಿರುವ ನಿದರ್ಶನಗಳೂ ಇವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಹಾಗಾಗಿ ಈಗಲಾದರೂ ಈ ಕಚೇರಿಯ ಶೌಚಾಲಯಗಳನ್ನು ಶುಚಿಗೊಳಿಸಿ ರೋಗ ರುಜಿನಗಳು ಬಾರದಂತೆ ಕ್ರಮವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

click me!