ಮೈಸೂರು: ಮೇಲೆಲ್ಲಾ ಥಳಕು, ಒಳಗೆ ಹುಳುಕು: ದೀಪಾಲಂಕಾರ ನೋಡ್ತಾ ಮೈಮರೆತು ಗುಂಡಿಗೆ ಬಿದ್ದೀರಿ ಜೋಕೆ..!

By Girish Goudar  |  First Published Sep 25, 2022, 12:56 PM IST

ಯುವ ಸಂಭ್ರಮ ಒಂದು ವಾರದಿಂದ ನಡೆಯುತ್ತಿದೆ. ಆದರೆ ಅಲ್ಲಿ ಯಾವ್ಯಾವ ಕಾರ್ಯಕ್ರಮಗಳು ನಡೆಯುತ್ತಿವೆ. ಅತಿಥಿಗಳು ಯಾರು? ಎಂಬ ಮಾಹಿತಿ ಸಾರ್ವಜನಿಕರಿಗೆ ಇರಲಿ, ಮಾಧ್ಯಮದವರೇ ನೀಡಿಲ್ಲ. ಮಾಧ್ಯಮದವರಿಗೆ ಈವರೆಗೆ ಯಾವುದೇ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ತಲುಪಿಲ್ಲ.


ಅಂಶಿ ಪ್ರಸನ್ನಕುಮಾರ್‌

ಮೈಸೂರು(ಸೆ.25): ಜಗಮಗಿಸುವ ದೀಪಾಲಂಕಾರ ನೋಡುತ್ತಾ ಗುಂಡಿಗೆ ಬಿದ್ದೀರಿ ಜೋಕೆ...!. ಇದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರು ಹಾಗೂ ದಿನನಿತ್ಯ ಸಂಜೆ ವೇಳೆ ದೀಪಾಲಂಕಾರ ನೋಡಲು ನಗರದ ಹೃದಯ ಭಾಗದ ರಸ್ತೆಗಳಿಗೆ ಭೇಟಿ ನೀಡುವ ನಗರದ ನಾಗರಿಕರಿಗೆ ನೀಡುತ್ತಿರುವ ಎಚ್ಚರಿಕೆ. ಏಕೆಂದರೆ ದಸರೆ ಆರಂಭಕ್ಕೆ ಬಾಕಿ ಉಳಿದಿರುವುದು ಒಂದೇ ದಿನ. ಆದರೆ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿಲ್ಲ. ಬಡಾವಣೆಯ ರಸ್ತೆಗಳಿರಲಿ ಹೃದಯ ಭಾಗದ ರಸ್ತೆಗಳೇ ಗುಂಡಿಗಳಿಂದ ತುಂಬಿ ಹೋಗಿವೆ.

Tap to resize

Latest Videos

ಪ್ರತಿ ವರ್ಷ ದಸರೆಗೆ ಮುಂಚಿತವಾಗಿ ಕನಿಷ್ಠ ಪಕ್ಷ ಅರಮನೆಯ ಸುತ್ತಮುತ್ತಲಿನ ರಸ್ತೆಗಳ ಡಾಂಬರೀಕರಣ, ವೃತ್ತಗಳ ಸೌಂದರ್ಯ ಕಾಮಗಾರಿ ನಡೆಯುತ್ತಿತ್ತು. ಆದರೆ ಈ ಬಾರಿ ದಸರೆ ಉದ್ಘಾಟನೆಗೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಆಗಮಿಸುತ್ತಿದ್ದರೂ ಎಲ್ಲಿ ನೋಡಿದರಲ್ಲಿ ಗುಂಡಿ ಬಿದ್ದಿರುವ ರಸ್ತೆಗಳೇ ಕಂಡು ಬರುತ್ತಿವೆ.

Mysuru Dasara 2022: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜಮನೆತನವನ್ನು ಆಹ್ವಾನಿಸಿದ ಸಚಿವ

ರಸ್ತೆಗಳ ಡಾಂಬರೀಕರಣ, ಗುಂಡಿ ಮುಚ್ಚುವಿಕೆ ಬಗ್ಗೆ ನಗರಪಾಲಿಕೆಯವರು ತಲೆಕೆಡಿಸಿಕೊಂಡಿಲ್ಲ. ಆದರೆ ಸೆಸ್‌್ಕನವರು ಊರ ತುಂಬಾ ಸುಮಾರು 124 ಕಿ.ಮೀ. ದೀಪಾಲಂಕಾರ ಮಾಡಿದ್ದಾರೆ. ದೀಪಾಲಂಕಾರ ಚೆನ್ನಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಜನರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದನ್ನು ಕಣ್ತುಂಬಿಕೊಳ್ಳಲು ಹೋಗಿ ಜನ ಗುಂಡಿಗೆ ಬೀಳುತ್ತಾರೆ ಎಂಬ ಬಗ್ಗೆಯ ಗಮನ ಇರಬೇಕಿತ್ತು ಅಲ್ಲವೇ?.

ಭಾರಿ ಮಳೆಯ ನೆಪ, ಆದರೆ ರಾಜಕಾರಣ...

ಈ ಬಾರಿ ಕಂಡು ಕೇಳರಿಯಂತಹ ಮಳೆ ಬಿದ್ದಿತು. ಇದರಿಂದ ಸಿದ್ಧತಾ ಕಾರ್ಯ ವಿಳಂಬವಾಗಿವೆ ಎಂಬುದು ನಗರಪಾಲಿಕೆಯವರ ಸಮಜಾಯಿಷಿ. ಆದರೆ ವಾಸ್ತವ ಸಂಗತಿಯೇ ಬೇರೆ. ಕಳೆದ ಫೆಬ್ರವರಿ ತಿಂಗಳಲ್ಲಿಯೇ ಮೇಯರ್‌ ಅಧಿಕಾರ ಮುಗಿದಿತ್ತು. ರಾಜ್ಯ ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಿಸಲಿಲ್ಲ. ಪರಿಣಾಮ ಹಿಂದೆ ಇದ್ದ ಮೇಯರ್‌ ಹಂಗಾಮಿಯಾಗಿ ಮುಂದುವರಿದರು. ಅವರಿಗೆ ಸಬೆ ಕರೆಯವ ಅಧಿಕಾರ ಇರಲಿಲ್ಲ. ಸ್ಥಾಯಿ ಸಮಿತಿಗಳು ಕೆಲಸ ನಿರ್ವಹಿಸಲಿಲ್ಲ. ಪಾಲಿಕೆಯ ಸಭೆ ನಡೆಯದೇ ಯಾವುದೇ ತೀರ್ಮಾನಗಳು ಆಗಲಿಲ್ಲ. ಮಳೆ ನಿಲ್ಲುವ ವೇಳೆಗೆ ಮೇಯರ್‌- ಉಪ ಮೇಯರ್‌ ಚುನಾವಣೆಯ ಮೀಸಲಾತಿ ಪ್ರಕಟವಾಯಿತು. ಚುನಾವಣೆಯಲ್ಲಿ ಬಿಜಿಯಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕಾಲಹರಣ ಮಾಡಿದವು.

ದಸರೆ ಬಂದೇ ಬಿಟ್ಟಿದ್ದರಿಂದ ಡಾಂಬರೀಕರಣ ಮಾಡಲು ಕಾಲಾವಕಾಶ ಓಇಲ್ಲ ಎಂದು ಗುಂಡಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದನ್ನು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಣುಬಿಟ್ಟು ನೋಡಲಿ!. ಒಂದು ಗುಂಡಿಗೆ ತೇಪೆ ಹಾಕಿದ್ದರೆ ಮತ್ತೊಂದನ್ನು ಹಾಗೆಯೇ ಬಿಡಲಾಗಿದೆ. ತರಾತುರಿಯಲ್ಲಿ ಕಾಟಾಚಾರಕ್ಕೆ ಕೆಲಸ ಮಾಡಿದಂತಿದೆ.

ರಸ್ತೆಗಳು ಹಾಳಾಗಿರುವ ಬಗ್ಗೆ ಮಾಧ್ಯಮಗಳು ಹಲವಾರು ದಿನಗಳಿಂದ ಗಮನ ಸೆಳೆಯುತ್ತಿದ್ದರೂ ಪಾಲಿಕೆ ಏನು ಮಾಡಲಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ.

ನಗರದ ಹೃದಯಭಾಗದಲ್ಲಿ ಮಾತ್ರವಲ್ಲದೇ ನಗರದ ಹಲವಾರು ಕಡೆ ಒಳಚರಂಡಿ, ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ಎಂದು ರಸ್ತೆಗಳನ್ನು ಕಿತ್ತು ಹಾಳು ಮಾಡಲಾಗಿದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಎಂದರೇ ಕುವೆಂಪುನಗರ ಅಪೋಲೋ ಆಸ್ಪತ್ರೆ ವೃತ್ತ. ಅಲ್ಲಿ ಯಾರೂ ಓಡಾಡಲಾಗದ ಪರಿಸ್ಥಿತಿ ಇದೆ. ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಾಸಿಸುವ ಡಿ. ಸುಬ್ಬಯ್ಯ ರಸ್ತೆಯ ಪರಿಸ್ಥಿತಿ ನೋಡಿ. ಮಹಾರಾಜ ಹೋಟೆಲ್‌ ಪಕ್ಕದಲ್ಲಿ ಜೆಎಲ್‌ಬಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಲೇಜು ರಸ್ತೆಯ ದುಸ್ಥಿತಿ ನೋಡಿದರೆ ಸಾಕು ವಾಸ್ತವ ಸ್ಥಿತಿ ಗೊತ್ತಾಗುತ್ತದೆ.

ಕೊನೆ ಕ್ಷಣದಲ್ಲಿ ಡಾಂಬರೀಕರಣ

ದಸರೆಗೆ ಬರುವ ಗಣ್ಯರು, ಪ್ರವಾಸಿಗರೆದುರು ಮಾನ ಉಳಿಸಿಕೊಳ್ಳಲು ನಗರಪಾಲಿಕೆಯವರು ಕೊನೆ ಕ್ಷಣದಲ್ಲಿ ಡಿ. ದೇವರಾಜ ಅರಸು ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್‌ ವೃತ್ತ ಮತ್ತಿತರ ಕಡೆ ಡಾಂಬರೀಕರಣ ಮಾಡುತ್ತಿದ್ದಾರೆ. ಇದು ಭಾನುವಾರ ಸಂಜೆವರೆಗೂ ಚಾಲ್ತಿಯಲ್ಲಿರುತ್ತದೆ.

ಅಧಿಕಾರೇತರರ ನೇಮಕ- ಪಾಸಿಗೆ ಸೀಮಿತ!

ದಸರೆಯ ಸಂಬಂಧ ವಿವಿಧ ಉಪ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ಕೊನೆ ಕ್ಷಣದಲ್ಲಿ ನೇಮಿಸಲಾಗಿದೆ. ಈಗಾಗಲೇ ಅಧಿಕಾರಿಗಳೇ ಎಲ್ಲಾ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ನೇಮಕ ಆಗಿರುವವರಿಗೆ ಹೆಚ್ಚೆಂದರೆ ಒಂದು ಸಭೆಯಲ್ಲಿ ಕಾಫಿ- ತಿಂಡಿ, ಒಂದೆರಡು ಪಾಸು ಸಿಗಬಹುದು ಅಷ್ಟೇ!. ಇಲ್ಲವೇ ಕಾರ್ಯಕ್ರಮಗಳಲ್ಲಿ ನಾವು ಪದಾಧಿಕಾರಿಗಳೆಂದು ಬ್ಯಾಡ್ಜ್‌ ಹಾಕಿಕೊಂಡು ಓಡಾಡಬಹುದು. ಮೆರವಣಿಗೆ, ಸ್ತಬ್ಧ ಚಿತ್ರ ಸಮಿತಿಯವರಾದರೆ ಜಂಬೂ ಸವಾರಿಗೆ ಅಡ್ಡಿಯಾಗುವಂತೆ ಅಡ್ಡಾಡಬಹುದು!.

ಮೈಸೂರು ದಸರಾ: ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆ..!

ಪ್ರಚಾರದ ಬಗ್ಗೆ ಕಡೆಗಣನೆ

ಕೋವಿಡ್‌-19 ಕಾರಣದಿಂದಾಗಿ ಎರಡು ವರ್ಷಗಳಿಂದ ದಸರೆ ಅದ್ಧೂರಿಯಾಗಿ ನಡೆದಿಲ್ಲ. ಈ ಬಾರಿ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಆದರೆ ಪ್ರಚಾರವೇ ಸರಿಯಾಗಿ ಆಗಿಲ್ಲ. ದೇಶ- ವಿದೇಶಗಳ ಜನ ದಸರೆಯ 10 ದಿನಗಳು ಮೈಸೂರಿಗೆ ಬರಬೇಕಾದರೆ ಮುಂಚಿತವಾಗಿ ಕಾರ್ಯಕ್ರಮಗಳ ಪಟ್ಟಿಸಿದ್ಧವಾಗಬೇಕು ಎಂಬುದನ್ನು ಅಧಿಕಾರಸ್ಥರು ಮರೆತಂತೆ ಇದೆ. ಯುವ ಸಂಭ್ರಮ ಒಂದು ವಾರದಿಂದ ನಡೆಯುತ್ತಿದೆ. ಆದರೆ ಅಲ್ಲಿ ಯಾವ್ಯಾವ ಕಾರ್ಯಕ್ರಮಗಳು ನಡೆಯುತ್ತಿವೆ. ಅತಿಥಿಗಳು ಯಾರು? ಎಂಬ ಮಾಹಿತಿ ಸಾರ್ವಜನಿಕರಿಗೆ ಇರಲಿ, ಮಾಧ್ಯಮದವರೇ ನೀಡಿಲ್ಲ. ಮಾಧ್ಯಮದವರಿಗೆ ಈವರೆಗೆ ಯಾವುದೇ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ತಲುಪಿಲ್ಲ.

ಪ್ರಾಧಿಕಾರ ಸ್ಥಾಪಿಸಿ

ಈ ರೀತಿ ಬೇಕಾಬಿಟ್ಟಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮಗಳನ್ನು ನಡೆಸುವುದನ್ನು ತಪ್ಪಿಸಲು ದಸರಾ ಪ್ರಾಧಿಕಾರ ರಚಿಸಬೇಕು. ಮೂರು ತಿಂಗಳು ಮುಂಚಿತವಾಗಿ ಎಲ್ಲಾ ಕಾರ್ಯಕ್ರಮಗಳ ಪಟ್ಟಿಸಿದ್ಧವಾಗಬೇಕು. ಆಗ ಮಾತ್ರ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯ ಎಂಬುದನ್ನು ಅರಿಯಬೇಕು.
 

click me!