ನೂತನ ಕುಲಪತಿ ಡಾ.ದಯಾನಂದ ಅಗಸರ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ಪ್ರಭಾರ ಕುಲಪತಿ ಡಾ.ಚಂದ್ರಕಾಂತ ಯಾತನೂರ್ ಅವುರ| ಸೂಕ್ಷ್ಮಜೀವಸಾಸ್ತ್ರ ವಿಭಾಗದಲ್ಲಿ ಕಳೆದ 3 ದಶಕದಿಂದ ಬೋಧಕರಾಗಿದ್ದ ದಯಾನಂದ ಅಗಸರ್| ವಿವಿ ಕುಲಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದ ಅಗಸರ್|
ಕಲಬುರಗಿ(ಜ.23): ಇಲ್ಲಿನ ಗುಲ್ಬರ್ಗ ವಿವಿ ನೂತನ ಕುಲಪತಿಯಾಗಿ ಇದೇ ವಿಶ್ವವಿದ್ಯಾಲಯದಲ್ಲಿನ ಸೂಕ್ಷ್ಮ ಜೀವಶಾಸ್ತ್ರ (ಮೈಕ್ರೋಬಾಯಲಜಿ) ಪ್ರೊ. ದಯಾನಂದ ಅಗಸರ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಡಾ.ನಿರಂಜನ್ ಇಲ್ಲಿಂದ ವಯೋ ನಿವೃತ್ತಿ ಹೊಂದಿದ ನಂತರ ಈ ವಿವಿಗೆ 2019ರ ಜೂನ್ ತಿಂಗಳಿನಿಂದ ಹೊಸ ನೇಮಕಾತಿಯವರೆಗೂ ಪ್ರಭಾರ ಕುಲಪತಿಗಳೇ ಮುಂದುವರಿದಿದ್ದರು. 7 ಪ್ರೋಫೆಸರ್‌ಗಳು ಪ್ರಭಾರ ಹೊಣೆ ಹೊತ್ತು ಆಡಳಿತ ನಡೆಸಿದ್ದರು.
ಗುಲ್ಬರ್ಗಾ ವಿವಿಗೆ ಮೈಲಾರಪ್ಪ ಕುಲಪತಿ?
ಶುಕ್ರವಾರ ಇಲ್ಲಿನ ಆಡಳಿತ ಭವನ ಕಾರ್ಯಸೌಧದಲ್ಲಿ ನಡೆದ ಸಮಾರಂಭದಲ್ಲಿ ನೂತನ ಕುಲಪತಿ ಡಾ.ದಯಾನಂದ ಅಗಸರ್ ಅವರಿಗೆ ಪ್ರಭಾರ ಕುಲಪತಿ ಡಾ.ಚಂದ್ರಕಾಂತ ಯಾತನೂರ್ ಅವುರ ಅಧಿಕಾರ ಹಸ್ತಾಂತರಿಸಿದರು. ಡಾ.ದಯಾನಂದ ಅಗಸರ್ ಅವರು ಸೂಕ್ಷ್ಮಜೀವಸಾಸ್ತ್ರ ವಿಭಾಗದಲ್ಲಿ ಕಳೆದ 3 ದಶಕದಿಂದ ಬೋಧಕರಾಗಿದ್ದವರು. ಅಲ್ಲದೆ ವಿವಿ ಕುಲಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ ಅನುಭವಿಯಾಗಿದ್ದಾರೆ.
ಡಾ.ನಿರಂಜನ್ 2019 ಜೂನ್ ತಿಂಗಳಲ್ಲಿ ವಯೋನಿವೃತ್ತರಾಗಿ ತೆರವಾಗಿದ್ದ ಗುವಿವಿ ಕುಲಪತಿ ಸ್ಥಾನ ಕಳೆದ 19 ತಿಂಗಳಿಂದ ಖಾಲಿ ಇತ್ತು. ಕಾಯಂ ಕುಲಪತಿಗಳ ನೇಮಕದಲ್ಲಿನ ವಿಳಂಬವೇ ಈ ಸ್ಥಾನ ಸುದೀರ್ಘ ಅವಧಿ ತೆರವಾಗಿರುವಂತಾಗಿತ್ತು. ಡಾ.ದಯಾನಂದ ಗಸರ್ ನೇಮಕದೊಂದಿಗೆ ಕೊನೆಗೂ ಜ್ಞಾನಗಂಗೆಗೆ ನೂತನ ಕಾಯಂ ಕುಲಪತಿಯೊಬ್ಬರ ನೇಮಕವಾದಂತಾಗಿದೆ. ಅದೂ ಇದೇ ಮೊದಲ ಬಾರಿಗೆ ಕಲಬುರಗಿ ವಿವಿಯವರನ್ನೇ ಅದೇ ವಿವಿಗೆ ಕುಲಪತಿಯನ್ನಾಗಿ ಮಾಡುವ ಮೂಲಕ ಸರ್ಕಾರ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆದಂತಾಗಿದೆ.