ಶಿವಮೊಗ್ಗದ ಹುಣಸೂಡಿನಲ್ಲಿ ನಡೆದ ಸ್ಫೋಟ ಪ್ರಕರಣ ಇದೀಗ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಮುಖವಾಗಿ ಇಲ್ಲಿ ಜಿಲೆಟಿನ್ ಸ್ಫೋಟವಾಗಲು ಕಾರಣ ಏನು ಎನ್ನುವುದು ಪ್ರಮುಖವಾದ ಪ್ರಶ್ನೆಯಾಗಿ ಕಾಡುತ್ತಿದೆ.
ಶಿವಮೊಗ್ಗ (ಜ.23): ಮಲೆನಾಡಲ್ಲಿ ಗುರುವಾರ ರಾತ್ರಿ ಕಂಡು ಕೇಳರಿಯದ ಶಬ್ದ, ಕಂಪನ ಸೃಷ್ಟಿಸಿದ್ದ ಶಿವಮೊಗ್ಗದ ಹುಣಸೋಡು ಕಲ್ಲು ಕ್ರಷರ್ ಗಣಿಯಲ್ಲಿನ ಸ್ಫೋಟ ಇನ್ನೂ ನಿಗೂಢವಾಗಿಯೇ ಉಳಿದಿದೆ. ಗಣಿಗಾರಿಕೆಗೆಂದು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಜೆಲ್ ಮಾದರಿಯ ಸ್ಫೋಟಕ ಸ್ಫೋಟಿಸಿ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾಡಳಿತ ಹೇಳಿದೆಯಾದರೂ ಆ ಸ್ಫೋಟ ಹೇಗಾಯ್ತು ಎಂಬುದಕ್ಕೆ ಮಾತ್ರ ದುರಂತ ನಡೆದು ಒಂದು ದಿನ ಕಳೆದರೂ ಉತ್ತರ ಸಿಕ್ಕಿಲ್ಲ.
ಈ ದುರಂತದಲ್ಲಿ ಹದಿನೈದು ಮಂದಿ ಸಾವಿಗೀಡಾಗಿರುವ ಶಂಕೆಯಿತ್ತಾದರೂ ಭದ್ರಾವತಿಯ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಘಟನೆ ಸಂಬಂಧ ಗಣಿ ಮಾಲೀಕ ಅವಿನಾಶ್ ಕುಲಕರ್ಣಿ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ನಡುವೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಶಿವಮೊಗ್ಗ, ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ಕಾರಣ ರೈಲ್ವೆ ಕ್ರಶರ್ ಸ್ಫೋಟ! ...
ಮೃತಪಟ್ಟಿರುವ ಭದ್ರಾವತಿಯ ನಾಲ್ವರಲ್ಲಿ ಪ್ರವೀಣ್ ಕುಮಾರ್(40), ಮಂಜುನಾಥ್(38) ಎಂಬುವರ ಮೃತದೇಹವನ್ನು ಗುರುತಿಸಲಾಗಿದ್ದು, ಇನ್ನುಳಿದವರ ಹೆಸರು ಗೊತ್ತಾಗಿಲ್ಲ. ಮತ್ತೊಬ್ಬ ಆಂಧ್ರ ಮೂಲದ ಕಾರ್ಮಿಕ ಎನ್ನಲಾಗಿದೆ. ಸ್ಫೋಟದ ರಭಸಕ್ಕೆ ಲಾರಿಯಲ್ಲಿದ್ದವರು ಛಿದ್ರ ಛಿದ್ರವಾಗಿ ಗಾಳಿಯಲ್ಲಿ ಎಸೆಯಲ್ಪಟ್ಟಿದ್ದು, ಅವಶೇಷಗಳನ್ನು ಹುಡುಕಾಡುವುದಕ್ಕೆ ಹರಸಾಹಸ ನಡೆಸಲಾಗಿದೆ. ನಂತರ ಅವಶೇಷಗಳನ್ನು ಬ್ಯಾಗ್‌ನಲ್ಲಿ ತುಂಬಿಸಿ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಲಾರಿಯಲ್ಲಿ ಸಂಗ್ರಹ:
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಅಬ್ಬಿಗೆರೆ ಸಮೀಪದ ಹುಣಸೋಡಿನಲ್ಲಿ ಸಂಭವಿಸಿದ ಈ ದುರಂತಕ್ಕೆ ಜೆಲ್ ಮಾದರಿಯ ಸ್ಫೋಟಕ ಸ್ಫೋಟಿಗೊಂಡಿದ್ದೇ ಕಾರಣ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ. ಗಣಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರಲ್ಲಿ ಈ ಸ್ಫೋಟಕವನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಸ್ಫೋಟಕ ಯಾಕೆ ಸಂಗ್ರಹಿಸಲಾಗಿತ್ತು ಎನ್ನುವುದಕ್ಕೆ ಸದ್ಯ ಜಿಲ್ಲಾಡಳಿತದ ಬಳಿಯೂ ಉತ್ತರ ಇಲ್ಲ. ಇಲ್ಲಿ 50 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗುತ್ತಿದ್ದು, ಈ ಸಂಬಂಧ ಜಾಗದ ಮಾಲೀಕ ಅವಿನಾಶ್ ಕುಲಕರ್ಣಿ, ಎಂ.ಸ್ಯಾಂಡ್‌ಗಾಗಿ ಪರವಾನಗಿ ಪಡೆದಿದ್ದ ಸುಧಾಕರ್ ಮತ್ತು ನರಸಿಂಹ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿ ಗಣಿಗಾರಿಕೆಗಾಗಿ ಪಡೆದಿದ್ದ ಪರವಾನಗಿ ಕಳೆದ ವರ್ಷವೇ ಮುಗಿದಿತ್ತು. ಆದರೂ ಗಣಿಗಾರಿಕೆ ಮಾತ್ರ ಅವ್ಯಾಹತವಾಗಿ ಮುಂದುವರಿದಿತ್ತು ಎಂದು ಹೇಳಲಾಗುತ್ತಿದೆ.
ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಬೆನ್ನಲ್ಲೇ ಈಶ್ವರಪ್ಪ ವಿರುದ್ಧ ಮಾಜಿ ಶಾಸಕ ಗಂಭೀರ ಆರೋಪ ..
ಸ್ಫೋಟದ ಸಂದರ್ಭದಲ್ಲಿ ಲಾರಿಯಿಂದ ಬೊಲೇರೋ ವಾಹನಕ್ಕೆ ಸ್ಫೋಟಕದ ಬಾಕ್ಸ್‌ಗಳನ್ನು ಲೋಡ್ ಮಾಡಲಾಗುತ್ತಿತ್ತು ಎಂದು ಕೆಲವರು ಹೇಳುತ್ತಿದ್ದರೂ ಸ್ಥಳದಲ್ಲಿ ಲಾರಿ ಸುಟ್ಟು ಮುದ್ದೆಯಾಗಿರುವ ದೃಶ್ಯ ಕಣ್ಣಿಗೆ ಬೀಳುತ್ತದೆಯೇ ಹೊರತು ಬೊಲೇರೋ ವಾಹನದ ಸಣ್ಣ ಕುರುಹೂ ಇಲ್ಲ.
ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ:
ರಾತ್ರಿ ಸ್ಫೋಟ ನಡೆದ ಕೆಲ ಗಂಟೆಗಳ ಬಳಿಕ ಇಡೀ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಜಿಲ್ಲಾಡಳಿತ ಘೋಷಿಸಿದ್ದು, ಇಡೀ ಪ್ರದೇಶಕ್ಕೆ ಅಧಿಕಾರಿಗಳ ಹೊರತಾಗಿ ಉಳಿದವರ ಪ್ರವೇಶ ನಿರ್ಬಂಧಿಸಲಾಗಿತ್ತು. ಬೆಂಗಳೂರು ಹಾಗೂ ಮಂಗಳೂರಿನಿಂದ ಆಗಮಿಸಿದ್ದ 16 ಮಂದಿಯಿದ್ದ ಬಾಂಬ್ ನಿಷ್ಕಿ್ರಯ ದಳದವರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಫೋರೆನ್ಸಿಕ್ ತಂಡ, ವಿಧ್ವಂಸಕ ಕೃತ್ಯ ತಪಾಸಣಾ ತಂಡ ಸೇರಿ ವಿವಿಧ ತಂಡಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದವು.
ಸಚಿವರ ಭೇಟಿ:
ಸ್ಥಳಕ್ಕೆ ಗಣಿ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸ್ಥಳೀಯ ಶಾಸಕರು, ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
100 ಮನೆಗಳಿಗೆ ಹಾನಿ
ಶಿವಮೊಗ್ಗ: ತಾಲೂಕಿನ ಹುಣಸೋಡುವಿನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ ಸುತ್ತಮುತ್ತಲಿನ ಗ್ರಾಮಗಳ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳ ಕಿಟಕಿ ಗಾಜು ಪುಡಿಯಾಗಿದ್ದರೆ, ಹೆಂಚುಗಳು ಸಡಿಲಗೊಂಡಿವೆ. ಮನೆಯ ಕೆಲ ವಸ್ತುಗಳು ನೆಲಕ್ಕುರಳಿವೆ. ಗೋಡೆಗಳು ಬಿರುಕುಬಿಟ್ಟಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.