ಪಾಕ್ ಪರ ಘೋಷಣೆ: ವಿದ್ಯಾರ್ಥಿಗಳ ಪರ ಹಿಂಬಾಗಿಲಿಂದ ಜಾಮೀನು ಅರ್ಜಿ ಸಲ್ಲಿಕೆ

By Kannadaprabha NewsFirst Published Feb 29, 2020, 7:21 AM IST
Highlights

ದೇಶದ್ರೋಹ ಕೇಸ್‌: ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಕೆ| ಅರ್ಜಿ ಸಲ್ಲಿಸಿದ ವಕೀಲರಿಗೆ ಖಾಕಿ ಸರ್ಪಗಾವಲು| ಭದ್ರತೆ ನಡೆವೆ ವಿದ್ಯಾರ್ಥಿಗಳ ವಿರುದ್ಧ ಘೋಷಣೆ| ಗೋ ಬ್ಯಾಕ್‌ ಗೋ ಬ್ಯಾಕ್‌’ ಘೋಷಣೆ ಕೂಗಿ, ‘ಭಾರತ್‌ ಮಾತಾ ಕೀ ಜೈ’ ಎಂದ ವಿದ್ಯಾರ್ಥಿಗಳು|

ಧಾರವಾಡ[ಫೆ.29]: ‘ಪಾಕಿಸ್ತಾನ್‌ ಜಿಂದಾಬಾದ್’ ಘೋಷಣೆ ಕೂಗಿದ ಆರೋಪದ ಮೇಲೆ ದೇಶದ್ರೋಹ ಪ್ರಕರಣದಡಿ ಬಂಧಿತರಾಗಿರುವ ಕಾಶ್ಮೀರಿ ಮೂಲದ ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಿಂದ ಅಮಾನತುಗೊಂಡಿರುವ ಮೂವರು ವಿದ್ಯಾರ್ಥಿಗಳ ಪರವಾಗಿ ಕೊನೆಗೂ ಜಾಮೀನು ಅರ್ಜಿ ಸಲ್ಲಿಸಲಾಗಿದೆ.

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ಬೆಂಗಳೂರಿನಿಂದ ಬಂದಿದ್ದ ವಕೀಲರು ಶುಕ್ರವಾರ ಹಿಂಬಾಗಿಲ ಮೂಲಕ ಧಾರವಾಡ ಜಿಲ್ಲಾ ನ್ಯಾಯಾಲಯ ಪ್ರವೇಶಿಸಿ, ಕೋರ್ಟ್‌ನ ಆಡಳಿತಾಧಿಕಾರಿಗೆ ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಬಂದಿದ್ದ ವೇಳೆ ಕೋರ್ಟ್‌ ಆವರಣದಲ್ಲಿ ಘರ್ಷಣೆ ಉಂಟಾಗಿ, ಅರ್ಜಿ ಸಲ್ಲಿಸಲು ಆಗಿರಲಿಲ್ಲ.

ಗೋ ಬ್ಯಾಕ್‌ ಘೋಷಣೆ:

ಅರ್ಜಿ ಸಲ್ಲಿಕೆಗೆ ಬೆಂಗಳೂರಿಂದ ವಕೀಲರು ಆಗಮಿಸಲಿದ್ದಾರೆ ಎಂಬ ಸುದ್ದಿ ತಿಳಿದು ಬೆಳಗ್ಗೆಯಿಂದಲೇ ಕೋರ್ಟ್‌ ಮುಂದೆ ಮಾಧ್ಯಮ ಪ್ರತಿನಿಧಿಗಳು, ವಕೀಲರು ಹಾಗೂ ಸಾರ್ವಜನಿಕರು ಜಮಾವಣೆಗೊಂಡಿದ್ದರು. ಈ ವೇಳೆ ಕೋರ್ಟ್‌ ಮುಂಬಾಗಿಲಿನಲ್ಲಿ ಪೊಲೀಸರು ಮೂರು ವಾಹನಗಳನ್ನು ನಿಲ್ಲಿಸಿದರು. ಅದರಿಂದಲೇ ವಕೀಲರು ಇಳಿಯಲಿದ್ದಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ, ಜನರ ಹಾಗೂ ಮಾಧ್ಯಮದವರ ಕಣ್ತಪ್ಪಿಸಿ ಹಿಂಬಾಗಿಲಿನಿಂದ ನ್ಯಾಯಾಲಯದೊಳಕ್ಕೆ ಕರೆದುಕೊಂಡು ಹೋಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಹೀಗೆ ಪೊಲೀಸರು ಸಾಕಷ್ಟುಮುನ್ನೆಚ್ಚರಿಕೆ ವಹಿಸಿದ್ದರೂ ಕೋರ್ಟ್‌ ಹಿಂಬಾಗಿಲಲ್ಲಿ ಜಮಾಯಿಸಿದ್ದ ಅನೇಕರು ವಿದ್ಯಾರ್ಥಿಗಳ ವಿರುದ್ಧ ಘೋಷಣೆ ಕೂಗಿದರು. ‘ಗೋ ಬ್ಯಾಕ್‌ ಗೋ ಬ್ಯಾಕ್‌’ ಘೋಷಣೆ ಕೂಗಿ, ‘ಭಾರತ್‌ ಮಾತಾ ಕೀ ಜೈ’ ಎಂದರು.

ದೇಶದ್ರೋಹದ ಘೋಷಣೆ ಕೂಗಿದ ಕಾಶ್ಮೀರಿ ಯುವಕರಿಗೆ ಜನ ದಿಗ್ಭಂಧನ

ಇದಕ್ಕೂ ಮುನ್ನ ವಕೀಲರು ಬೆಳಗಾವಿಯ ಹಿಂಡಲಗಾ ಜೈಲಿಗೆ ತೆರಳಿ ವಿದ್ಯಾರ್ಥಿಗಳಿಂದ ವಕಾಲತ್ತು ವಹಿಸುವ ಪತ್ರಕ್ಕೆ ಸಹಿ ಪಡೆದಿದ್ದರು. ಇನ್ನು ಆರೋಪಿಗಳ ಪರ ವಕಾಲುತ್ತು ವಹಿಸದಂತೆ ನಿರ್ಣಯ ತೆಗೆದುಕೊಂಡಿದ್ದ ಹುಬ್ಬಳಿಯ ವಕೀಲರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಬೇಕೆ ಎಂದು ಎಚ್ಚರಿಕೆ ನೀಡಿತ್ತು. ಕೋರ್ಟ್‌ ತರಾಟೆ ಬಳಿಕ ಹುಬ್ಬಳಿ ವಕೀಲರ ಸಂಘ ತನ್ನ ನಿರ್ಣಯ ಹಿಂಪಡೆದಿತ್ತು.

ಇನ್ನು ಹೈಕೋರ್ಟ್‌ ಸೂಚನೆ ಮೇರೆಗೆ ಕಾಶ್ಮೀರಿ ವಿದ್ಯಾರ್ಥಿಗಳ ಪರ ವಾದ ಮಂಡಿಸುವ ವಕೀಲರಿಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇಬ್ಬರು ಡಿಸಿಪಿ, ಮೂವರು ಡಿವೈಎಸ್ಪಿ, ಒಬ್ಬ ಎಸಿಪಿ, 10 ಇನ್ಸ ಪೆಕ್ಟರ್‌ಗಳು, 500 ಪೇದೆಗಳು ಹಾಗೂ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನ್ಯಾಯಾಲಯದ ಆವರಣದಲ್ಲಿ ಭದ್ರತೆ ಒದಗಿಸಲಾಗಿತ್ತು.

click me!