ಪ್ರಾಧಿಕಾರದ ಕಚೇರಿ ಕಲಬುರಗಿಯಲ್ಲೇ ಇದ್ದರೆ, ಕಕ ವಿಭಾಗದ ಆರು ಜಿಲ್ಲೆಗಳಿಂದ ಸಂಗ್ರಹವಾಗುವ ಆಹಾರದ ಮಾದರಿ ಪರೀಕ್ಷಿಸಿ ತಕ್ಷಣ ಕ್ರಮವಹಿಸಲು ಸಹಕಾರಿ| ಸ್ಥಳಾಂತರ ಆದೇಶ ರದ್ದುಗೊಳಿಸಿ ಪ್ರಾಧಿಕಾರದ ಕಚೇರಿ ಕಲಬುರಗಿಯಲ್ಲೇ ಉಳಿಸಿಕೊಳ್ಳಲು ಬೇಕಾಗುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಖರ್ಗೆ|
ಕಲಬುರಗಿ(ಫೆ.04): ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಚೇರಿಯನ್ನು ಕಲಬುರಗಿಯಲ್ಲೇ ಉಳಿಸಿಕೊಳ್ಳುವಂತೆ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಡಿಸಿಎಂ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿರುವ ಶಾಸಕರು, ತಾವು ಈ ಹಿಂದಿನ ಕೆಡಿಪಿ ಸಭೆಯಲ್ಲಿ ಸದರಿ ಕಚೇರಿಯನ್ನು ಯಾವ ಕಾರಣಕ್ಕೂ ಬೆಳಗಾವಿಗೆ ಸ್ಥಳಾಂತರವಾಗಲು ಬಿಡುವುದಿಲ್ಲ, ಅದನ್ನು ಕಲಬುರಗಿಯಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದೀರಿ. ಆದರೆ, ಇಲ್ಲಿಯವರೆಗೂ ಸ್ಥಳಾಂತರ ಮಾಡಿರುವ ಆದೇಶ ರದ್ದಾಗಿಲ್ಲ. ಬದಲಿಗೆ, ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ACB ಬಲೆಗೆ ಬಿತ್ತು ‘ಬಹುಕೋಟಿ’ ತಿಮಿಂಗಿಲು: ಸಂಬಳಕ್ಕಿಂತ 200 ಪಟ್ಟು ಹೆಚ್ಚಿನ ಆಸ್ತಿ ಸಂಪಾದನೆ
ಪ್ರಾಧಿಕಾರದ ಕಚೇರಿ ಕಲಬುರಗಿಯಲ್ಲೇ ಇದ್ದರೆ, ಕಕ ವಿಭಾಗದ ಆರು ಜಿಲ್ಲೆಗಳಿಂದ ಸಂಗ್ರಹವಾಗುವ ಆಹಾರದ ಮಾದರಿಗಳನ್ನು ಪರೀಕ್ಷಿಸಿ ತಕ್ಷಣ ಕ್ರಮವಹಿಸಲು ಸಹಕಾರಿಯಾಗುತ್ತದೆ. ಹೀಗಿರುವಾಗ ಸ್ಥಳಾಂತರ ಪ್ರಕ್ರೀಯೆ ಮುಂದುವರೆಸಿದರೆ ಪದೇ ಪದೇ ಅನ್ಯಾಯಕ್ಕೊಳಗಾಗುತ್ತಿರುವ ಕಲಬುರಗಿ ಜಿಲ್ಲೆಗೆ ಮತ್ತೊಂದು ಘೋರ ಅನ್ಯಾಯವೆಸಗಿದಂತಾಗುತ್ತದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸ್ಥಳಾಂತರ ಆದೇಶವನ್ನು ರದ್ದುಗೊಳಿಸಿ ಪ್ರಾಧಿಕಾರದ ಕಚೇರಿಯನ್ನು ಕಲಬುರಗಿಯಲ್ಲೇ ಉಳಿಸಿಕೊಳ್ಳಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.