ಬಿಬಿಎಂಪಿ ಸೂಚಿತ ರೋಗಿಗಳ ಮೇಲೆ ಖಾಸಗಿ ಆಸ್ಪತ್ರೆಗಳ ದೌರ್ಜನ್ಯ..!

By Kannadaprabha NewsFirst Published Apr 21, 2021, 7:55 AM IST
Highlights

ಹಾಸಿಗೆ ನೀಡದೆ ಸತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳು| ರೋಗಿಗಳ ಅಸಹಾಯಕ ಸ್ಥಿತಿ| ಬೆಡ್‌ ಸಿಗುವುದಿಲ್ಲ. ಸಿಕ್ಕರೂ ಟ್ರೀಟ್‌ಮೆಂಟ್‌ ದೊರೆಯುವುದಿಲ್ಲ| ನೋಡಲ್‌ ಅಧಿಕಾರಿಗಳು ಕೈಗೇ ಸಿಗುವುದಿಲ್ಲ| 

ಬೆಂಗಳೂರು(ಏ. 21): ಬೆಡ್‌ ಸಿಗುವುದಿಲ್ಲ. ಸಿಕ್ಕರೂ ಟ್ರೀಟ್‌ಮೆಂಟ್‌ ದೊರೆಯುವುದಿಲ್ಲ! ಬಿಬಿಎಂಪಿ ಖೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮುಂದಾಗುವ ಕರೋನಾ ಸೋಂಕಿತರ ಪರಿಸ್ಥಿತಿಯಿದು. ಕೋವಿಡ್‌-19 ಬಳಲುತ್ತಿರುವ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಹಾಸಿಗೆ ನಿಗದಿ ಮಾಡಿದ್ದರೂ ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡದೆ ಸತಾಯಿಸುತ್ತವೆ.

ಒಂದು ವೇಳೆ ಹಾಸಿಗೆ ನೀಡಿದರೂ ಆಸ್ಪತ್ರೆಯಲ್ಲಿ ನಿಮ್ಮನ್ನು ಯಾರೂ ವಿಚಾರಿಸುವುದೇ ಇಲ್ಲ. ಬಿಬಿಎಂಪಿ ಕೋಟಾದಡಿ ಬರುವ ರೋಗಿಗಳನ್ನು ಅಕ್ಷರಶಃ ನಿರ್ಲಕ್ಷ್ಯಿಸುವ ದಾಷ್ಟ್ರ್ಯವನ್ನು ಖಾಸಗಿ ಆಸ್ಪತ್ರೆಗಳು ತೋರುತ್ತಿವೆ. ಇದರಿಂದಾಗಿ ಕರೋನಾ ಸೋಂಕಿತರು ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿಯಿಂದ ಸೋಂಕಿತ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಅಲಾಟ್‌ ಮಾಡಿ ವೆಬ್‌ಸೈಟ್‌ ‘ಕೋವಿಡ್‌ ಹಾಸ್ಪಿಟಲ್‌ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ನಲ್ಲಿ ಸೋಂಕಿತನ ಹೆಸರಲ್ಲಿ ಬೆಡ್‌ ಬ್ಲಾಕ್‌ ಮಾಡಿದ್ದರೂ ಕೂಡ ಹಾಸಿಗೆ ಕೊಡದೆ ತಾಸುಗಟ್ಟಲೆ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆ ಹೊರಗೆ ಕಾಯಿಸುವ ಕಿಡಿಗೇಡಿತನವನ್ನು ಕೆಲ ಖಾಸಗಿ ಆಸ್ಪತ್ರೆಗಳು ಪ್ರದರ್ಶಿಸುತ್ತಿವೆ. ಸ್ವತಃ ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿ ಮಾಡಿದರೂ ಕಿವಿಗೊಡುತ್ತಿಲ್ಲ. ಇಂತಹ ಬೇಜವಾಬ್ದಾರಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾದ ಸರ್ಕಾರ ಮೂಕ ಪ್ರೇಕ್ಷಕನಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಲಂಗುಲಗಾಮು ಇಲ್ಲದಂತಾಗಿದೆ.

ಸೂಕ್ತ ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲೇ ನರಳಾಡಿ ವೃದ್ಧ ಸಾವು

ಖಾಸಗಿ ಆಸ್ಪತ್ರೆಗಳ ಮಲತಾಯಿ ಧೋರಣೆ:

ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ವ್ಯಕ್ತಿಗೆ ಬಿಯು(ಬೆಂಗಳೂರು ಅರ್ಬನ್‌) ಸಂಖ್ಯೆಯನ್ನು ನೀಡಲಾಗುತ್ತಿದೆ. ಅದರ ಆಧಾರದಲ್ಲಿ ಬೆಡ್‌ ಮ್ಯಾನೆಜ್‌ಮೆಂಟ್‌ ಸಿಸ್ಟಂ ಮೂಲಕ ಯಾವುದೋ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಂಕಿತ ವ್ಯಕ್ತಿಗೆ ಬೆಡ್‌ ಅಲಾಟ್‌ ಮಾಡಲಾಗುತ್ತದೆ. ಅಷ್ಟಕ್ಕೆ ಆತನ ಸಮಸ್ಯೆ ನಿವಾರಣೆಯಾಗಲ್ಲ. ವಾಸ್ತವವಾಗಿ ಆಗ ಆತನ ಸಮಸ್ಯೆ ಆರಂಭವಾಗುತ್ತದೆ.

ಬಿಯು ಸಂಖ್ಯೆಯಡಿ ಖಾಸಗಿ ಆಸ್ಪತ್ರೆಗೆ ದಾಖಲಾದ ಸೋಂಕಿತನಿಗೂ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾದ ಸ್ಥಿತಿವಂತ ರೋಗಿಗೂ ನೀಡುವ ಚಿಕಿತ್ಸೆಯಲ್ಲಿ ಅಜಗಜಾಂತರ ವ್ಯತ್ಯಾಸ. ನಿಗದಿತ ಅವಧಿಗೆ ಊಟ ಕೊಡುವುದಿಲ್ಲ. ಕುಡಿಯಲು ಬಿಸಿ ನೀರು ಸಿಗುವುದಿಲ್ಲ. ದಿನಗಟ್ಟಲೇ ವೈದ್ಯರು ಬರುವುದಿಲ್ಲ. ಬೆಳಗ್ಗೆ ಸಂಜೆ ಪಾರಸಿಟಮಲ್‌, ಡೋಲೋ ಮಾತ್ರೆ ಕೊಟ್ಟು ಕೈತೊಳೆದುಕೊಳ್ಳುತ್ತಾರೆ ಎಂಬುದು ಬಿಬಿಎಂಪಿಯಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಅಳಲು. ಆದರೆ, ಖಾಸಗಿಯಾಗಿ ಹಣ ಕೊಟ್ಟು ಚಿಕಿತ್ಸೆ ಪಡೆಯುವವರಿಗೆ ಇಲ್ಲಿ ರಾಜ ಮರ್ಯಾದೆ.

ನೋಡಲ್‌ ಅಧಿಕಾರಿಗಳು ಕೈಗೇ ಸಿಗುವುದಿಲ್ಲ

ಖಾಸಗಿ ವೈದ್ಯಕೀಯ ಸಂಸ್ಥೆಗಳು ಆರೋಗ್ಯ ಇಲಾಖೆ ನಿಗದಿಪಡಿಸಿರುವ ದರದಲ್ಲಿ ರೋಗಿಗಳಿಗೆ ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಜತೆಗೆ ಬಿಬಿಎಂಪಿ ವ್ಯಾಪ್ತಿಯ ವಲಯಗಳಿಗೆ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡ ನೋಡಲ್‌ ಅಧಿಕಾರಿಗಳ ತಂಡವನ್ನು ನೇಮಕ ಮಾಡಿದೆ. ಆದರೆ, ಯಾವೊಬ್ಬ ಅಧಿಕಾರಿಗಳು ಕೂಡ ಖಾಸಗಿ ಸಂಸ್ಥೆಗಳು ಹಾಸಿಗೆ ನೀಡದೆ ಬೀದಿಯಲ್ಲಿ ಬಿದ್ದು ನರಳಾಡುವ ರೋಗಿಗಳ ಕಡೆಗೆ ಮುಖ ಮಾಡಿಲ್ಲ. ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇನ್ನು ಪ್ರತಿ ಆಸ್ಪತ್ರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ, ಅವರನ್ನು ಸಂಪರ್ಕಿಸುವುದೇ ದುಸ್ತರವಾಗಿವೆ.

ಬಿಯು ಸಂಖ್ಯೆ ಇಲ್ಲದಿದ್ದರೂ ರೋಗಿಯ ಪರಿಸ್ಥಿತಿ ನೋಡಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ದಾರೆ. ಆದರೆ ಇದು ಕೇವಲ ನೆಪ ಮಾತ್ರ. ಬಿಯು ನಂಬರ್‌ ಇದ್ದರೆ ಯಾವುದೇ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳುವುದಿಲ್ಲ. ಹೀಗಾಗಿ ಮೂರ್ನಾಲ್ಕು ಆಸ್ಪತ್ರೆಗಳನ್ನು ತಿರುಗಾಡಬೇಕಾದ ಸ್ಥಿತಿ ಇದೆ. ಪಾಲಿಕೆ ಅಧಿಕಾರಿಗಳು ಜನರ ಕರೆಗೆ ಸ್ಪಂದಿಸುವುದಿಲ್ಲ. ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆ ಒಳಗೂ ಬಿಟ್ಟುಕೊಳ್ಳುವುದಿಲ್ಲ ಎಂದು ಕೊರೋನಾ ಸೋಂಕಿತ ಮಹಿಳೆ ಸರೋಜಮ್ಮ ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ಕೂಡಲೇ ಆ್ಯಂಬುಲೆನ್ಸ್‌ ಬಂದು ಕರೆದುಕೊಂಡು ಹೋಗುತ್ತದೆ. ಆದರೆ, ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳೇ ಇರುವುದಿಲ್ಲ. ಆಕ್ಸಿಜನ್‌ ಇರಲಿ, ಬಿಸಿ ನೀರಿಗೂ ಪರದಾಡುವ ಸ್ಥಿತಿ ಇದೆ. ಒಮ್ಮೆ ಬಿಯು ಸಂಖ್ಯೆ ಪಡೆದು ಒಂದು ಆಸ್ಪತ್ರೆಗೆ ದಾಖಲಾದರೆ, ವ್ಯವಸ್ಥೆ ಸರಿಯಿಲ್ಲ. ಆಸ್ಪತ್ರೆ ಬದಲಿಸಲು ಕೂಡ ಅವಕಾಶವಿಲ್ಲ. ಹಾಸಿಗೆ ಸಿಕ್ಕರೂ ಚಿಕಿತ್ಸೆ ಕಷ್ಟ. ಕೊರೋನಾಗಿಂತ ಖಾಸಗಿ ಆಸ್ಪತ್ರೆ ಭೀಕರ​ ಎಂದು ಸೋಂಕಿನಿಂದ ಗುಣಮುಖರಾದ ಕೆ.ಸೋಮಶೇಖರ್‌ ಎಂಬುವರು ಹೇಳದ್ದಾರೆ.
 

click me!